Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಯಾಜ - ಯಾಜ 27

ಯಾಜ 27:2-23

Help us?
Click on verse(s) to share them!
2“ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸು, ‘ಯಾವನಾದರೂ ಮನುಷ್ಯರ ಪ್ರಾಣಗಳನ್ನು ಯೆಹೋವನಿಗೆ ಹರಕೆಮಾಡಿ ಪ್ರತಿಷ್ಠಿಸಿದರೆ, ಅವುಗಳನ್ನು ಬಿಡಿಸುವುದಕ್ಕೆ ದೇವರ ಸೇವೆಗೆ ನೇಮಕವಾದ ಶೆಕೆಲ್ ಮೇರೆಗೆ ನೀವು ಅವನಿಂದ ಕೊಡಿಸಬೇಕಾದ ಈಡು ಹೀಗಿರಬೇಕು.
3ಇಪ್ಪತ್ತು ವರ್ಷದಿಂದ ಅರುವತ್ತು ವರ್ಷದ ವರೆಗಿನ ವಯಸ್ಸುಳ್ಳ ಪುರುಷನಿಗೋಸ್ಕರ, ದೇವಾಲಯದ ಶೆಕೆಲ್ ಗೆ ಸರಿಯಾಗಿ ಐವತ್ತು ಶೆಕೆಲ್ ಬೆಳ್ಳಿಯನ್ನು ಸಮರ್ಪಿಸಬೇಕು.
4ಅದೇ ವಯಸ್ಸಿನ ಸ್ತ್ರೀಗೋಸ್ಕರ ಮೂವತ್ತು ಶೆಕೆಲ್ ಬೆಳ್ಳಿಯನ್ನು ಕೊಡಬೇಕು.
5ಐದು ವರ್ಷದ ವಯಸ್ಸಿನಿಂದ ಇಪ್ಪತ್ತು ವರ್ಷದ ವಯಸ್ಸಿನ ವರೆಗೆ ಪುರುಷನಿಗೋಸ್ಕರ ಇಪ್ಪತ್ತು ಶೆಕೆಲ್ ಬೆಳ್ಳಿಯನ್ನು ಮತ್ತು ಸ್ತ್ರೀಗೋಸ್ಕರ ಹತ್ತು ಶೆಕೆಲ್ ಬೆಳ್ಳಿಯನ್ನು ಕೊಡಬೇಕು.
6ಒಂದು ತಿಂಗಳಿನ ವಯಸ್ಸು ಮೊದಲುಗೊಂಡು ಐದು ವರ್ಷದ ವಯಸ್ಸಿನ ಹುಡುಗನಿಗೋಸ್ಕರ ಐದು ಶೆಕೆಲ್ ಬೆಳ್ಳಿಯನ್ನು, ಹುಡುಗಿಗೋಸ್ಕರ ಮೂರು ಶೆಕೆಲ್ ಬೆಳ್ಳಿಯನ್ನು ಕೊಡಬೇಕು.
7ಅರವತ್ತು ವರ್ಷಗಳ ಪ್ರಾಯವನ್ನು ದಾಟಿದ ಪುರುಷನಿಗೋಸ್ಕರ ಹದಿನೈದು ಶೆಕೆಲ್ ಬೆಳ್ಳಿಯನ್ನು ಮತ್ತು ಸ್ತ್ರೀಗೋಸ್ಕರ ಹತ್ತು ಶೆಕೆಲ್ ಬೆಳ್ಳಿಯನ್ನು ಕೊಡಬೇಕು.
8ಯಾವನಾದರೂ ಬಡವನಾಗಿ ನೇಮಕವಾದ ಹಣವನ್ನು ಕೊಡಲಾರದೆ ಹೋದರೆ, ಅವನು ಹರಕೆಮಾಡಿ ಪ್ರತಿಷ್ಠಿಸಿದ ಮನುಷ್ಯನನ್ನು ಯಾಜಕನ ಮುಂದೆ ನಿಲ್ಲಿಸಬೇಕು. ಯಾಜಕನು ಹರಕೆಮಾಡಿದವನ ಸ್ಥಿತಿಗತಿಗೆ ತಕ್ಕಂತೆ ಅವನು ಕೊಡಬೇಕಾದ ಹಣ ಇಷ್ಟೆಂದು ನಿರ್ಣಯಿಸಬೇಕು.
9“‘ಯೆಹೋವನಿಗೆ ಸಮರ್ಪಿಸಬಹುದಾದ ಪಶುವನ್ನು ಯಾವನಾದರೂ ಹರಕೆಮಾಡಿ ಪ್ರತಿಷ್ಠಿಸಿದ್ದಾದರೆ ಅದು ದೇವರ ಸೊತ್ತಾಗಿರಬೇಕು.
10ಅದನ್ನು ಬದಲಾಯಿಸಬಾರದು, ಕೆಟ್ಟದ್ದಕ್ಕೆ ಬದಲಾಗಿ ಒಳ್ಳೆಯದನ್ನೂ ಇಲ್ಲವೇ ಒಳ್ಳೆಯದಕ್ಕೆ ಬದಲಾಗಿ ಕೆಟ್ಟದ್ದನ್ನೂ, ಒಂದಕ್ಕೆ ಬದಲಾಗಿ ಬೇರೊಂದನ್ನೂ ಕೊಡಬಾರದು. ಅವನು ಗೊತ್ತುಮಾಡಿದ ಪಶುವಿಗೆ ಬದಲಾಗಿ ಬೇರೊಂದು ಪಶುವನ್ನು ಪ್ರತ್ಯೇಕಿಸಿಟ್ಟಿರುವ ಪಕ್ಷಕ್ಕೆ, ಮೊದಲನೆಯ ಪಶುವೂ ಹಾಗೂ ಅದಕ್ಕೆ ಬದಲಾಗಿ ಇಟ್ಟ ಪಶುವೂ ಎರಡೂ ಯೆಹೋವನದಾಗಿರಬೇಕು.
11ಯೆಹೋವನಿಗೆ ಸಮರ್ಪಿಸಬೇಕಾದ ಪಶುವು ಅಶುದ್ಧವಾಗಿದ್ದರೆ, ಅದನ್ನು ಯಾಜಕನ ಮುಂದೆ ನಿಲ್ಲಿಸಬೇಕು.
12ಅದು ಒಳ್ಳೆಯದೋ ಅಥವಾ ಕೆಟ್ಟದ್ದೋ ಎಂದು ಯಾಜಕನು ನೋಡಿಕೊಂಡು ಅದರ ಬೆಲೆ ಇಷ್ಟೆಂದು ನಿರ್ಣಯಿಸಬೇಕು; ಯಾಜಕನು ನಿರ್ಣಯಿಸಿದ ಬೆಲೆಯೇ ಅಂತಿಮವಾದದ್ದು ಸ್ಥಿರವಾಗಿರುವುದು.
13ಹರಕೆಮಾಡಿದವನು ಅದನ್ನು ಬಿಡಿಸಿಕೊಳ್ಳಬೇಕೆಂದಿದ್ದರೆ ಅದರ ಕ್ರಯದೊಡನೆ ಐದನೆಯ ಒಂದು ಭಾಗವನ್ನು ಹೆಚ್ಚಾಗಿ ಕೊಡಬೇಕು.
14“‘ಯಾವನಾದರೂ ತನ್ನ ಮನೆಯನ್ನು ಯೆಹೋವನಿಗೆ ಮೀಸಲಾಗಿ ಪ್ರತಿಷ್ಠಿಸಿದರೆ, ಯಾಜಕನು ಅದು ಉತ್ತಮವಾದ ಮನೆಯೋ ಅಲ್ಲವೋ ಎಂದು ಪರೀಕ್ಷಿಸಿ ಬೆಲೆಯನ್ನು ನಿರ್ಣಯಿಸಬೇಕು; ಯಾಜಕನು ನಿರ್ಣಯಿಸಿದ ಬೆಲೆ ಅಂತಿಮವಾಗಿರುವುದು.
15ಹರಕೆಮಾಡಿದವನು ಪ್ರತಿಷ್ಠೆ ಮಾಡಿದ ಆ ಮನೆಯನ್ನು ಬಿಡಿಸಿಕೊಳ್ಳಬೇಕೆಂದಿದ್ದರೆ ಅದರ ಕ್ರಯದೊಡನೆ ಐದನೆಯ ಒಂದು ಭಾಗವನ್ನು ಹೆಚ್ಚಾಗಿ ಕೊಡಬೇಕು; ಆಗ ಆ ಮನೆ ಅವನದಾಗುವುದು.
16“‘ಯಾವನಾದರೂ ಪಿತ್ರಾರ್ಜಿತ ಭೂಮಿಯಲ್ಲಿ ಒಂದು ಭಾಗವನ್ನು ಯೆಹೋವನಿಗೆ ಹರಕೆಮಾಡಿ ಪ್ರತಿಷ್ಠಿಸಿದರೆ, ಅದರಲ್ಲಿ ಇಷ್ಟು ಬೀಜವನ್ನು ಬಿತ್ತತಕ್ಕದ್ದು ಎಂದು ಆಲೋಚಿಸಿ ಅದರ ಬೆಲೆಯನ್ನು ನಿರ್ಣಯಿಸಬೇಕು. ಒಂದು ಓಮೆರ್ ಜವೆಗೋದಿಯನ್ನು ಬಿತ್ತಬಹುದಾದ ಹೊಲವು ಐವತ್ತು ಶೆಕೆಲ್ ಬೆಳ್ಳಿಯ ಬೆಲೆ ಬಾಳುವುದು.
17ಅವನು ಜೂಬಿಲಿ ಸಂವತ್ಸರದಿಂದ ಆ ಹೊಲವನ್ನು ಪ್ರತಿಷ್ಠಿಸಿದರೆ ಈ ಕ್ರಯ ಸ್ಥಿರವಾಗಿರುವುದು.
18ಜೂಬಿಲಿ ಸಂವತ್ಸರದ ತರುವಾಯ ಪ್ರತಿಷ್ಠೆ ಮಾಡಿದ ಭೂಮಿಯನ್ನು ಹರಕೆಮಾಡಿದರೆ, ಮುಂದಣ ಜೂಬಿಲಿ ಸಂವತ್ಸರಕ್ಕೆ ಕಳೆಯಬೇಕಾದ ವರ್ಷಗಳ ಸಂಖ್ಯೆಯ ಮೇರೆಗೆ ಅದರ ಬೆಲೆಯನ್ನು ಕಡಿಮೆಮಾಡಬೇಕು.
19ಹರಕೆಮಾಡಿದವನು ಅದನ್ನು ಬಿಡಿಸಿಕೊಳ್ಳಬೇಕೆಂದಿರುವ ಪಕ್ಷಕ್ಕೆ ಅದರ ಕ್ರಯದೊಡನೆ ಐದನೆಯ ಒಂದು ಭಾಗವನ್ನು ಹೆಚ್ಚಾಗಿ ಕೊಡಬೇಕು; ಆಗ ಆ ಹೊಲ ಅವನದಾಗಿರುವುದು.
20ತಾನು ಅದನ್ನು ಬಿಡಿಸಿಕೊಳ್ಳದೆ ಮತ್ತೊಬ್ಬನಿಗೆ ಮಾರಿದರೆ ಮುಂದೆ ಅದನ್ನು ಬಿಡಿಸಿಕೊಳ್ಳುವ ಅಧಿಕಾರವಿರುವುದಿಲ್ಲ.
21ಬಿಡುಗಡೆಯಾಗುವ ಜೂಬಿಲಿ ಸಂವತ್ಸರದಲ್ಲಿ ಆ ಹೊಲವು ಯೆಹೋವನಿಗೆ ಪವಿತ್ರವಾದ ಹೊಲದಂತೆ ಆತನ ಸೊತ್ತಾಗಿಯೇ ಇರಬೇಕು; ಅದು ಯಾಜಕರ ವಶದಲ್ಲಿರಬೇಕು.
22“‘ಯಾವನಾದರೂ ಕ್ರಯಕ್ಕೆ ತೆಗೆದುಕೊಂಡ ಹೊಲವನ್ನು ಅಂದರೆ ಪಿತ್ರಾರ್ಜಿತ ಭೂಮಿಗೆ ಸೇರದಿರುವ ಹೊಲವನ್ನು ಯೆಹೋವನಿಗೆ ಹರಕೆಮಾಡಿ ಪ್ರತಿಷ್ಠಿಸಿದರೆ,
23ಯಾಜಕನು ಮುಂದಣ ಜೂಬಿಲಿ ಸಂವತ್ಸರದ ತನಕ ಇರುವ ವರ್ಷಗಳಿಗೆ ತಕ್ಕಂತೆ ಅದರ ಬೆಲೆಯನ್ನು ನಿರ್ಣಯಿಸಬೇಕು. ಪ್ರತಿಷ್ಠಿಸಿದವನು ನಿರ್ಣಯಿಸಲ್ಪಟ್ಟ ಹಣವನ್ನು ಯೆಹೋವನಿಗೆ ಮೀಸಲಾದದ್ದೆಂದು ಭಾವಿಸಿ ಅದೇ ದಿನದಲ್ಲಿ ಕೊಟ್ಟುಬಿಡಬೇಕು.

Read ಯಾಜ 27ಯಾಜ 27
Compare ಯಾಜ 27:2-23ಯಾಜ 27:2-23