Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಯಾಜ - ಯಾಜ 26

ಯಾಜ 26:20-43

Help us?
Click on verse(s) to share them!
20ನೀವು ದುಡಿದದ್ದೆಲ್ಲಾ ವ್ಯರ್ಥವಾಗುವುದು; ನಿಮ್ಮ ಭೂಮಿಯಲ್ಲಿ ಬೆಳೆಯಾಗುವುದಿಲ್ಲ, ತೋಟಗಳ ಮರಗಳು ಫಲ ಕೊಡುವುದಿಲ್ಲ.
21“ನೀವು ನನ್ನ ಮಾತನ್ನು ಕೇಳದೆ ನನ್ನ ವಿರುದ್ಧವಾಗಿ ನಡೆದರೆ ನಾನು ನಿಮ್ಮ ಪಾಪಗಳ ನಿಮಿತ್ತ ಇನ್ನೂ ಏಳರಷ್ಟಾಗಿ ನಿಮ್ಮನ್ನು ಬಾಧಿಸುವೆನು.
22ನಿಮ್ಮ ಮೇಲೆ ಕಾಡುಮೃಗಗಳನ್ನು ಬರಮಾಡುವೆನು; ಅವು ನಿಮ್ಮ ಮಕ್ಕಳನ್ನು ಕದ್ದುಕೊಂಡು ಹೋಗುವವು, ನಿಮ್ಮ ಪಶುಗಳನ್ನು ಕೊಲ್ಲುವವು, ನಿಮ್ಮನ್ನು ಸ್ವಲ್ಪ ಜನರನ್ನಾಗಿ ಮಾಡುವವು; ನಿಮ್ಮ ದಾರಿಗಳು ಪಾಳು ಬೀಳುತ್ತದೆ.
23“ಇಷ್ಟು ಶಿಕ್ಷೆಗಳಿಂದಲೂ ನೀವು ನನ್ನ ಆಜ್ಞೆಗೆ ಒಳಗಾಗದೆ ನನಗೆ ವಿರೋಧವಾಗಿ ನಡೆದರೆ,
24ನಿಮ್ಮ ಪಾಪಗಳ ನಿಮಿತ್ತ ನಾನೇ ನಿಮ್ಮನ್ನು ಏಳರಷ್ಟಾಗಿ ಬಾಧಿಸುವೆನು.
25ಶತ್ರುಗಳ ಕತ್ತಿಯ ಮೂಲಕವಾಗಿ ನಿಮ್ಮನ್ನು ಸಂಹರಿಸುವೆನು; ನೀವು ನನ್ನ ನಿಬಂಧನೆಯನ್ನು ಮೀರಿದ್ದರಿಂದ ಆ ಕತ್ತಿಯು ಪ್ರತಿದಂಡನೆಮಾಡುವುದು. ನೀವು ನಿಮ್ಮ ಪಟ್ಟಣಗಳಲ್ಲಿ ಕೂಡಿರುವಾಗ ನಿಮ್ಮಲ್ಲಿ ಅಂಟುರೋಗ ಉಂಟಾಗುವಂತೆ ಮಾಡುವೆನು; ಹೀಗೆ ನೀವು ಶತ್ರುಗಳ ಕೈಗೆ ಬೀಳುವಿರಿ.
26ನಾನು ನಿಮ್ಮ ಜೀವನಾಧಾರವನ್ನು ತೆಗೆದುಬಿಟ್ಟಾಗ ಹತ್ತು ಜನರು ಹೆಂಗಸರು ಒಂದೇ ಒಲೆಯಲ್ಲಿ ರೊಟ್ಟಿಸುಟ್ಟು, ಅದನ್ನು ತೂಕದ ಪ್ರಕಾರ ಹಂಚಿಕೊಡುವರು; ನೀವು ಅದನ್ನು ಊಟಮಾಡಿದಾಗ ತೃಪ್ತಿಹೊಂದುವುದಿಲ್ಲ.
27“ಇದನ್ನೆಲ್ಲಾ ನೀವು ಅನುಭವಿಸಿದ ಮೇಲೆಯೂ ಇನ್ನೂ ನನ್ನ ಮಾತನ್ನು ಕೇಳದೆ ನನಗೆ ವಿರೋಧವಾಗಿ ನಡೆದರೆ,
28ನಾನು ನಿಮ್ಮ ಮೇಲೆ ಕೋಪಗೊಂಡವನಾಗಿ ನಿಮ್ಮ ಪಾಪಗಳ ನಿಮಿತ್ತ ಏಳರಷ್ಟಾಗಿ ಶಿಕ್ಷಿಸುವೆನು.
29ನೀವು ನಿಮ್ಮ ಗಂಡು ಮತ್ತು ಹೆಣ್ಣುಮಕ್ಕಳ ಮಾಂಸವನ್ನೇ ತಿನ್ನುವಿರಿ.
30ನಿಮ್ಮ ಪೂಜಾಸ್ಥಳಗಳನ್ನು ಇಲ್ಲದಂತೆ ಮಾಡುವೆನು; ನೀವು ಸೂರ್ಯನ ಪೂಜೆಗೆ ಇಟ್ಟಿರುವ ಕಂಬಗಳನ್ನು ಕಡಿದುಹಾಕುವೆನು; ನಿಮ್ಮ ವಿಗ್ರಹಗಳ ಮೇಲೆ ನಿಮ್ಮ ಹೆಣಗಳನ್ನು ಬೀಸಾಡುವೆನು; ನಾನು ನಿಮ್ಮ ವಿಷಯದಲ್ಲಿ ಅಸಹ್ಯಪಡುವೆನು.
31ನಿಮ್ಮ ಪಟ್ಟಣಗಳನ್ನು ಹಾಳುಮಾಡುವೆನು. ನಿಮ್ಮ ದೇವಸ್ಥಾನಗಳನ್ನು ನಾಶಮಾಡುವೆನು; ನೀವು ಸಮರ್ಪಿಸುವ ಸುಗಂಧದ್ರವ್ಯಗಳ ಪರಿಮಳವನ್ನು ನಾನು ಮೂಸಿಯೂ ನೋಡುವುದಿಲ್ಲ.
32ನಾನು ನಿಮ್ಮ ದೇಶವನ್ನು ಸಂಪೂರ್ಣವಾಗಿ ಹಾಳುಮಾಡುವೆನು; ಅದರಲ್ಲಿ ವಾಸವಾಗಿರುವ ನಿಮ್ಮ ಶತ್ರುಗಳೂ ಅದನ್ನು ನೋಡಿ ಆಶ್ಚರ್ಯಪಡುವರು.
33ನಿಮ್ಮನ್ನು ಅನ್ಯಜನಗಳಲ್ಲಿ ಚದುರಿಸಿ, ನಿಮ್ಮ ಹಿಂದೆ ಕತ್ತಿಯನ್ನು ಬೀಸುವೆನು. ನಿಮ್ಮ ದೇಶವು ಹಾಳಾಗುವುದು, ನಿಮ್ಮ ಪಟ್ಟಣಗಳು ನಾಶವಾಗುವವು.
34ನೀವು ನಿಮ್ಮ ಶತ್ರುಗಳ ದೇಶದಲ್ಲಿ ಸೆರೆ ಇರುವ ದಿನಗಳಲ್ಲೆಲ್ಲಾ ನಿಮ್ಮ ದೇಶವು ಹಾಳುಬಿದ್ದು ತನಗೆ ಸಲ್ಲಬೇಕಾಗಿದ್ದ ಸಬ್ಬತ್ ಕಾಲವನ್ನು ಅನುಭವಿಸುವುದು; ಅದು ವಿಶ್ರಾಂತಿಯನ್ನು ಹೊಂದಿ ಸಬ್ಬತ್ ಕಾಲವನ್ನು ಅನುಭವಿಸುವುದು.
35ನೀವು ಅದರಲ್ಲಿ ವಾಸವಾಗಿದ್ದಾಗ ಅದಕ್ಕೆ ತಕ್ಕ ಸಬ್ಬತ್ ಕಾಲದಲ್ಲಿ ದೊರೆಯದ ವಿಶ್ರಾಂತಿಯನ್ನು, ಅದು ಹಾಳುಬಿದ್ದಿರುವ ಎಲ್ಲಾ ದಿನಗಳಲ್ಲಿ ಅನುಭವಿಸುವುದು.
36“ನಿಮ್ಮಲ್ಲಿ ಯಾರಾರು ಶತ್ರುಗಳ ದೇಶದಲ್ಲಿ ಉಳಿದಿರುವರೋ ಅವರ ಹೃದಯಗಳಲ್ಲಿ ನಾನು ಭೀತಿಯನ್ನು ಹುಟ್ಟಿಸುವೆನು. ಗಾಳಿಯಿಂದ ಬಡಿದಾಡುವ ಉದುರೆಲೆಯ ಸಪ್ಪಳವೂ ಅವರಲ್ಲಿ ದಿಗಿಲು ಹುಟ್ಟಿಸುವುದು. ಅವರು ಆ ಸಪ್ಪಳವನ್ನು ಕೇಳಿ ಕತ್ತಿಯ ಎದುರಿನಿಂದ ಓಡಿಹೋಗುವವರಂತೆ ಓಡಿಹೋಗುವರು. ಯಾರೂ ಬೆನ್ನಟ್ಟಿ ಬಾರದಿರುವಾಗಲೂ ಅವರು ಓಡಿಹೋಗಿ ಬೀಳುವರು.
37ಯಾರೂ ಓಡಿಸದಿದ್ದರೂ ಕತ್ತಿಗೆ ಹೆದರಿ ಓಡುವವರಂತೆ ಒಬ್ಬರ ಮೇಲೊಬ್ಬರು ಬೀಳುವರು; ಶತ್ರುಗಳ ಮುಂದೆ ನಿಲ್ಲಲಾರದೆ ತತ್ತರಿಸುವಿರಿ.
38ಅನ್ಯಜನಗಳಲ್ಲಿ ಚದರಿಸಲ್ಪಟ್ಟು ಕಾಣಿಸದೆ ಹೋಗುವಿರಿ, ನಿಮ್ಮ ಶತ್ರುಗಳ ದೇಶವು ನಿಮ್ಮನ್ನು ನುಂಗಿಬಿಡುವುದು.
39ನಿಮ್ಮಲ್ಲಿ ಉಳಿದವರು ತಮ್ಮ ಪಾಪದ ದೆಸೆಯಿಂದಲೂ ಮತ್ತು ತಮ್ಮ ಪೂರ್ವಿಕರ ಪಾಪದ ದೆಸೆಯಿಂದಲೂ ಅವರಂತೆಯೇ ಶತ್ರುಗಳ ದೇಶಗಳಲ್ಲಿ ಕ್ಷೀಣವಾಗಿ ಹೋಗುವರು.
40“ಆದರೆ ಅವರು ತಾವೂ ಹಾಗು ತಮ್ಮ ಪೂರ್ವಿಕರು ನನಗೆ ದ್ರೋಹಿಗಳಾಗಿ ಪಾಪಮಾಡಿದವರೆಂದೂ ಅರಿಕೆಮಾಡಿದರೆ, ತಾವು ನನಗೆ ವಿರೋಧವಾಗಿ ನಡೆದುದರಿಂದಲೇ
41ನಾನು ಅವರಿಗೆ ವಿರೋಧವಾಗಿ ನಡೆದುಕೊಂಡು ಶತ್ರುದೇಶದಲ್ಲಿ ಸೆರೆಯವರನ್ನಾಗಿ ಮಾಡಬೇಕಾಯಿತೆಂದೂ ಒಪ್ಪಿ, ತಮ್ಮ ಮೊಂಡತನವನ್ನು ಬಿಟ್ಟು ನನ್ನ ಆಜ್ಞೆಗೆ ತಲೆ ಬಾಗಿ ತಮ್ಮ ಪಾಪದಿಂದುಂಟಾದ ಶಿಕ್ಷೆಯನ್ನು ಸ್ವೀಕರಿಸುವುದಾದರೆ,
42ನಾನು ಯಾಕೋಬ್ ಇಸಾಕ್ ಅಬ್ರಹಾಮ್ ಇವರಿಗೆ ಮಾಡಿದ ಒಡಂಬಡಿಕೆಯನ್ನು ನೆನಪಿಗೆ ತಂದುಕೊಂಡು ನೆರವೇರಿಸುವೆನು; ಅವರ ಸ್ವದೇಶವನ್ನೂ ನಾನು ದಯೆಯಿಂದ ಜ್ಞಾಪಿಸಿಕೊಳ್ಳುವೆನು.
43ಅವರು ಬಿಟ್ಟುಹೋದ ಸ್ವದೇಶವು ನಿರ್ಜನವಾಗಿ ಬಿದ್ದಿರುವಾಗ ತನಗೆ ಸಲ್ಲಬೇಕಾದ ಸಬ್ಬತ್ ವಿಶ್ರಾಂತಿಯನ್ನು ಅನುಭವಿಸಬೇಕು. ಅವರು ಯೆಹೋವನ ಆಜ್ಞೆ ಬೇಡವೆಂದು ಆತನ ವಿಧಿಗಳನ್ನು ತಾತ್ಸಾರ ಮಾಡಿದ ಕಾರಣವೇ ತಮ್ಮ ಪಾಪದ ಫಲವನ್ನು ಅನುಭವಿಸಬೇಕಾಗಿರುವುದು.

Read ಯಾಜ 26ಯಾಜ 26
Compare ಯಾಜ 26:20-43ಯಾಜ 26:20-43