Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಯಾಜ - ಯಾಜ 26

ಯಾಜ 26:13-32

Help us?
Click on verse(s) to share them!
13ನೀವು ಐಗುಪ್ತ್ಯರಿಗೆ ಗುಲಾಮರಾಗಿರಬಾರದೆಂದು ನಿಮ್ಮನ್ನು ಅವರ ದೇಶದೊಳಗಿಂದ ಬರಮಾಡಿದ ನಿಮ್ಮ ದೇವರಾದ ಯೆಹೋವನು ನಾನೇ; ನಿಮ್ಮನ್ನು ಕುಗ್ಗಿಸಿದ ನೊಗವನ್ನು ಮುರಿದು ನೀವು ನೆಟ್ಟಗೆ ನಿಂತು ನಡೆಯುವಂತೆ ಮಾಡಿದವನು ನಾನು.
14“ಆದರೆ ನೀವು ನನ್ನ ಮಾತನ್ನು ಕೇಳದೆ ಈ ಆಜ್ಞೆಗಳನ್ನೆಲ್ಲಾ ಅನುಸರಿಸದೆ,
15ನನ್ನ ನಿಯಮಗಳನ್ನು ಬೇಡವೆಂದು ನನ್ನ ವಿಧಿಗಳನ್ನು ತಳ್ಳಿಬಿಟ್ಟರೆ ನೀವು ನನ್ನ ಆಜ್ಞೆಗಳನ್ನು ಅನುಸರಿಸದೆ ನನ್ನ ನಿಬಂಧನೆಯನ್ನು ಮೀರಿ ನಡೆದರೆ,
16ನಾನು ನಿಮಗೆ ಮಾಡುವುದೇನೆಂದರೆ, ಕ್ಷಯರೋಗ, ಚಳಿಜ್ವರ ಮುಂತಾದ ಭಯಂಕರ ವ್ಯಾಧಿಗಳನ್ನು ನಿಮ್ಮಲ್ಲಿ ಇರುವಂತೆ ಮಾಡುವೆನು; ಇವುಗಳ ದೆಸೆಯಿಂದ ನೀವು ಕಂಗೆಟ್ಟವರಾಗಿಯೂ, ಮನಗುಂದಿದವರಾಗಿಯೂ ಇರುವಿರಿ. ನೀವು ಬೀಜಬಿತ್ತಿದಾಗ ಅದರ ಫಲವು ನಿಮಗೆ ದೊರೆಯದೆ ಹೋಗುವುದು; ಶತ್ರುಗಳು ಬಂದು ಅದನ್ನು ತಿಂದುಬಿಡುವರು.
17ನಾನು ನಿಮ್ಮ ಮೇಲೆ ಉಗ್ರಕೋಪಗೊಳ್ಳುವುದರಿಂದ ನೀವು ನಿಮ್ಮ ಶತ್ರುಗಳ ಮುಂದೆ ಸೋತು ಹೋಗುವಿರಿ; ನಿಮ್ಮ ವೈರಿಗಳು ನಿಮ್ಮನ್ನು ಆಳುವರು; ಯಾರೂ ಬೆನ್ನಟ್ಟಿ ಬರದಿದ್ದರು ನೀವು ಹೆದರಿ ಓಡುವಿರಿ.
18“ಇಷ್ಟಾದರೂ ನೀವು ನನ್ನ ಮಾತಿಗೆ ಲಕ್ಷ್ಯಕೊಡದೆ ಹೋದರೆ ನಾನು ನಿಮ್ಮ ಪಾಪಗಳ ನಿಮಿತ್ತ ಏಳರಷ್ಟಾಗಿ ನಿಮ್ಮನ್ನು ಶಿಕ್ಷಿಸುವೆನು.
19ನಿಮ್ಮ ಗರ್ವಕ್ಕೆ ಕಾರಣವಾದ ಬಲವನ್ನು ಮುರಿಯುವೆನು. ನಿಮ್ಮ ಮೇಲಿರುವ ಆಕಾಶವನ್ನು ಕಬ್ಬಿಣದಂತೆಯೂ ಹಾಗು ನೀವು ಸಾಗುವಳಿಮಾಡುವ ಭೂಮಿಯನ್ನು ತಾಮ್ರದಂತೆಯೂ ಮಾಡುವೆನು.
20ನೀವು ದುಡಿದದ್ದೆಲ್ಲಾ ವ್ಯರ್ಥವಾಗುವುದು; ನಿಮ್ಮ ಭೂಮಿಯಲ್ಲಿ ಬೆಳೆಯಾಗುವುದಿಲ್ಲ, ತೋಟಗಳ ಮರಗಳು ಫಲ ಕೊಡುವುದಿಲ್ಲ.
21“ನೀವು ನನ್ನ ಮಾತನ್ನು ಕೇಳದೆ ನನ್ನ ವಿರುದ್ಧವಾಗಿ ನಡೆದರೆ ನಾನು ನಿಮ್ಮ ಪಾಪಗಳ ನಿಮಿತ್ತ ಇನ್ನೂ ಏಳರಷ್ಟಾಗಿ ನಿಮ್ಮನ್ನು ಬಾಧಿಸುವೆನು.
22ನಿಮ್ಮ ಮೇಲೆ ಕಾಡುಮೃಗಗಳನ್ನು ಬರಮಾಡುವೆನು; ಅವು ನಿಮ್ಮ ಮಕ್ಕಳನ್ನು ಕದ್ದುಕೊಂಡು ಹೋಗುವವು, ನಿಮ್ಮ ಪಶುಗಳನ್ನು ಕೊಲ್ಲುವವು, ನಿಮ್ಮನ್ನು ಸ್ವಲ್ಪ ಜನರನ್ನಾಗಿ ಮಾಡುವವು; ನಿಮ್ಮ ದಾರಿಗಳು ಪಾಳು ಬೀಳುತ್ತದೆ.
23“ಇಷ್ಟು ಶಿಕ್ಷೆಗಳಿಂದಲೂ ನೀವು ನನ್ನ ಆಜ್ಞೆಗೆ ಒಳಗಾಗದೆ ನನಗೆ ವಿರೋಧವಾಗಿ ನಡೆದರೆ,
24ನಿಮ್ಮ ಪಾಪಗಳ ನಿಮಿತ್ತ ನಾನೇ ನಿಮ್ಮನ್ನು ಏಳರಷ್ಟಾಗಿ ಬಾಧಿಸುವೆನು.
25ಶತ್ರುಗಳ ಕತ್ತಿಯ ಮೂಲಕವಾಗಿ ನಿಮ್ಮನ್ನು ಸಂಹರಿಸುವೆನು; ನೀವು ನನ್ನ ನಿಬಂಧನೆಯನ್ನು ಮೀರಿದ್ದರಿಂದ ಆ ಕತ್ತಿಯು ಪ್ರತಿದಂಡನೆಮಾಡುವುದು. ನೀವು ನಿಮ್ಮ ಪಟ್ಟಣಗಳಲ್ಲಿ ಕೂಡಿರುವಾಗ ನಿಮ್ಮಲ್ಲಿ ಅಂಟುರೋಗ ಉಂಟಾಗುವಂತೆ ಮಾಡುವೆನು; ಹೀಗೆ ನೀವು ಶತ್ರುಗಳ ಕೈಗೆ ಬೀಳುವಿರಿ.
26ನಾನು ನಿಮ್ಮ ಜೀವನಾಧಾರವನ್ನು ತೆಗೆದುಬಿಟ್ಟಾಗ ಹತ್ತು ಜನರು ಹೆಂಗಸರು ಒಂದೇ ಒಲೆಯಲ್ಲಿ ರೊಟ್ಟಿಸುಟ್ಟು, ಅದನ್ನು ತೂಕದ ಪ್ರಕಾರ ಹಂಚಿಕೊಡುವರು; ನೀವು ಅದನ್ನು ಊಟಮಾಡಿದಾಗ ತೃಪ್ತಿಹೊಂದುವುದಿಲ್ಲ.
27“ಇದನ್ನೆಲ್ಲಾ ನೀವು ಅನುಭವಿಸಿದ ಮೇಲೆಯೂ ಇನ್ನೂ ನನ್ನ ಮಾತನ್ನು ಕೇಳದೆ ನನಗೆ ವಿರೋಧವಾಗಿ ನಡೆದರೆ,
28ನಾನು ನಿಮ್ಮ ಮೇಲೆ ಕೋಪಗೊಂಡವನಾಗಿ ನಿಮ್ಮ ಪಾಪಗಳ ನಿಮಿತ್ತ ಏಳರಷ್ಟಾಗಿ ಶಿಕ್ಷಿಸುವೆನು.
29ನೀವು ನಿಮ್ಮ ಗಂಡು ಮತ್ತು ಹೆಣ್ಣುಮಕ್ಕಳ ಮಾಂಸವನ್ನೇ ತಿನ್ನುವಿರಿ.
30ನಿಮ್ಮ ಪೂಜಾಸ್ಥಳಗಳನ್ನು ಇಲ್ಲದಂತೆ ಮಾಡುವೆನು; ನೀವು ಸೂರ್ಯನ ಪೂಜೆಗೆ ಇಟ್ಟಿರುವ ಕಂಬಗಳನ್ನು ಕಡಿದುಹಾಕುವೆನು; ನಿಮ್ಮ ವಿಗ್ರಹಗಳ ಮೇಲೆ ನಿಮ್ಮ ಹೆಣಗಳನ್ನು ಬೀಸಾಡುವೆನು; ನಾನು ನಿಮ್ಮ ವಿಷಯದಲ್ಲಿ ಅಸಹ್ಯಪಡುವೆನು.
31ನಿಮ್ಮ ಪಟ್ಟಣಗಳನ್ನು ಹಾಳುಮಾಡುವೆನು. ನಿಮ್ಮ ದೇವಸ್ಥಾನಗಳನ್ನು ನಾಶಮಾಡುವೆನು; ನೀವು ಸಮರ್ಪಿಸುವ ಸುಗಂಧದ್ರವ್ಯಗಳ ಪರಿಮಳವನ್ನು ನಾನು ಮೂಸಿಯೂ ನೋಡುವುದಿಲ್ಲ.
32ನಾನು ನಿಮ್ಮ ದೇಶವನ್ನು ಸಂಪೂರ್ಣವಾಗಿ ಹಾಳುಮಾಡುವೆನು; ಅದರಲ್ಲಿ ವಾಸವಾಗಿರುವ ನಿಮ್ಮ ಶತ್ರುಗಳೂ ಅದನ್ನು ನೋಡಿ ಆಶ್ಚರ್ಯಪಡುವರು.

Read ಯಾಜ 26ಯಾಜ 26
Compare ಯಾಜ 26:13-32ಯಾಜ 26:13-32