Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಯಾಜ - ಯಾಜ 25

ಯಾಜ 25:29-55

Help us?
Click on verse(s) to share them!
29“‘ಯಾವನಾದರೂ ಪೌಳಿ ಗೋಡೆಯುಳ್ಳ ಪಟ್ಟಣದಲ್ಲಿರುವ ಮನೆಯನ್ನು ಮಾರಿದರೆ ಅದನ್ನು ಮಾರಿದ ದಿನ ಮೊದಲುಗೊಂಡು ಒಂದು ವರ್ಷ ಪೂರ್ತಿಯಾಗುವುದರೊಳಗೆ ಈಡುಕೊಟ್ಟು ಬಿಡಿಸಬಹುದು; ಪೂರಾ ಒಂದು ವರ್ಷದ ತನಕ ಅದನ್ನು ಬಿಡಿಸುವ ಅಧಿಕಾರವು ಅವನಿಗಿರುವುದು.
30ಪೌಳಿಗೋಡೆಯುಳ್ಳ ಪಟ್ಟಣದಲ್ಲಿರುವ ಆ ಮನೆ ಒಂದು ವರ್ಷದೊಳಗಾಗಿ ಬಿಡಿಸಿಕೊಳ್ಳಲು ಸಾಧ್ಯವಾಗದೆ ಹೋದರೆ, ಅದು ಜೂಬಿಲಿ ಸಂವತ್ಸರದಲ್ಲಿ ಬಿಡುಗಡೆಯಾಗಿ ಮಾರಿದವನಿಗೆ ಮತ್ತು ಅವನ ಸಂತತಿಯವರಿಗೂ ಶಾಶ್ವತವಾಗಿ ನಿಲ್ಲುವುದು.
31ಪೌಳಿಗೋಡೆಯಿಲ್ಲದ ಊರುಗಳಲ್ಲಿರುವ ಮನೆಗಳು ಬಯಲಿನ ಹೊಲಗಳಂತೆ ಎಣಿಸಲ್ಪಡಬೇಕು; ಅವುಗಳನ್ನು ಬಿಡಿಸುವ ಅಧಿಕಾರವಿದ್ದು, ಜೂಬಿಲಿ ಸಂವತ್ಸರದಲ್ಲಿ ಅವು ಬಿಡುಗಡೆಯಾಗುವವು.
32ಆದರೆ ಲೇವಿಯರ ಸ್ವತ್ತಾಗಿರುವ ಪಟ್ಟಣಗಳಲ್ಲಿನ ಮನೆಗಳು ಮಾರಲ್ಪಟ್ಟರೆ ಅವುಗಳನ್ನು ಬಿಡಿಸುವ ಅಧಿಕಾರವು ಲೇವಿಯರಿಗೆ ಯಾವಾಗಲೂ ಇರುವುದು.
33ಲೇವಿಯರೊಳಗೆ ಯಾರೂ ಅದನ್ನು ಬಿಡಿಸದೆಹೋದರೆ, ಲೇವಿಯರ ಸ್ವಂತವಾಗಿರುವ ಅಂತಹ ಪಟ್ಟಣಗಳಲ್ಲಿ ಮಾರಲ್ಪಟ್ಟ ಮನೆ ಜೂಬಿಲಿ ಸಂವತ್ಸರದಲ್ಲಿ ಬಿಡುಗಡೆಯಾಗುವುದು. ಲೇವಿಯರ ಪಟ್ಟಣಗಳಲ್ಲಿನ ಮನೆಗಳು ಇಸ್ರಾಯೇಲರ ಮಧ್ಯದಲ್ಲಿರುವ ಅವರ ಸ್ವಾಸ್ತ್ಯವಷ್ಡೆ.
34ಅವರು ತಮ್ಮ ಪಟ್ಟಣಗಳಿಗೆ ಸೇರಿರುವ ಹುಲ್ಲುಗಾವಲನ್ನು ಮಾರಲೇಬಾರದು. ಅವು ಅವರಿಗೆ ಶಾಶ್ವತವಾದ ಸ್ವತ್ತು.
35“‘ನಿಮ್ಮಲ್ಲಿ ಒಬ್ಬ ಸಹೋದರನು ಬಡತನದಿಂದ ಗತಿಹೀನನಾದರೆ, ಅವನು ಬದುಕಿಕೊಳ್ಳುವಂತೆ ನೀವು ಅವನನ್ನು ನಿಮ್ಮ ನಡುವೆ ಇಳಿದುಕೊಂಡ ವಿದೇಶೀಯನೆಂದು ಅಥವಾ ಪ್ರವಾಸಿಯೆಂದು ಭಾವಿಸಿ ಸಹಾಯಮಾಡಬೇಕು.
36ನೀವು ಅವನಿಂದ ಬಡ್ಡಿಯನ್ನಾಗಲಿ ಅಥವಾ ಲಾಭವನ್ನಾಗಲಿ ತೆಗೆದುಕೊಳ್ಳಬಾರದು; ಅವನು ನಿಮ್ಮ ಬಳಿಯಲ್ಲಿ ಬದುಕುವಂತೆ ನೀವು ದೇವರಲ್ಲಿ ಭಯಭಕ್ತಿಯುಳ್ಳವರಾಗಿ ನಡೆದುಕೊಳ್ಳಬೇಕು.
37ನೀವು ಅವನಿಗೆ ಹಣವನ್ನು ಸಾಲವಾಗಿ ಕೊಟ್ಟರೆ ಬಡ್ಡಿಯನ್ನು ಕೇಳಬಾರದು, ದವಸಕೊಟ್ಟರೆ ಲಾಭವನ್ನು ಕೇಳಬಾರದು.
38ನಾನು ನಿಮ್ಮ ದೇವರಾದ ಯೆಹೋವನು; ನಿಮಗೆ ದೇವರಾಗುವುದಕ್ಕೂ ಮತ್ತು ನಿಮಗೆ ಕಾನಾನ್ ದೇಶವನ್ನು ಕೊಡುವುದಕ್ಕೂ ನಿಮ್ಮನ್ನು ಐಗುಪ್ತ ದೇಶದೊಳಗಿಂದ ಬರಮಾಡಿದವನು ನಾನೇ.
39“‘ನಿಮ್ಮಲ್ಲಿ ಒಬ್ಬ ಸಹೋದರನು ಬಡವನಾಗಿ ತನ್ನನ್ನೇ ಮಾರಿಕೊಂಡರೆ ಅವನನ್ನು ಗುಲಾಮನಂತೆ ಕೆಲಸ ಮಾಡಿಸಿಕೊಳ್ಳಬಾರದು.
40ಅವನು ಕೂಲಿಯವನಂತೆಯೂ ಇಲ್ಲವೇ ಪ್ರವಾಸಿಯಂತೆಯೂ ನಿಮ್ಮ ಬಳಿಯಲ್ಲಿದ್ದು, ಜೂಬಿಲಿ ಸಂವತ್ಸರದ ತನಕ ನಿಮ್ಮ ಸೇವೆಯನ್ನು ಮಾಡಲಿ.
41ಆಗ ಅವನನ್ನೂ ಮತ್ತು ಅವನ ಮಕ್ಕಳನ್ನೂ ಬಿಟ್ಟುಬಿಡಬೇಕು; ಅವನು ಸ್ವಜನರ ಬಳಿಗೂ ಪಿತ್ರಾರ್ಜಿತ ಸ್ವತ್ತಿಗೂ ಹೋಗಬಹುದು.
42ಅವರು ನನಗೆ ಗುಲಾಮರಾಗಿದ್ದಾರೆ; ನಾನು ಅವರನ್ನು ಐಗುಪ್ತದೇಶದೊಳಗಿಂದ ಬರಮಾಡಿದೆನು; ದಾಸರನ್ನು ಮಾರುವಂತೆ ಅವರನ್ನು ಮಾರಬಾರದು.
43ಅವರಿಂದ ಕಠಿಣವಾಗಿ ಸೇವೆಮಾಡಿಸಿಕೊಳ್ಳಬಾರದು; ನಿಮ್ಮ ದೇವರಿಗೆ ಭಯಪಡಬೇಕು.
44ನಿಮಗೆ ದಾಸದಾಸಿಯರು ಬೇಕಾಗಿದ್ದರೆ ಸುತ್ತಲಿರುವ ಅನ್ಯರನ್ನು ಕ್ರಯಕ್ಕೆ ತೆಗೆದುಕೊಳ್ಳಬಹುದು.
45ನಿಮ್ಮ ನಡುವೆ ಇರುವ ವಿದೇಶಿಯರನ್ನೂ ಮತ್ತು ನಿಮ್ಮ ದೇಶದಲ್ಲಿ ಅವರಿಂದ ಹುಟ್ಟಿದವರನ್ನೂ ಕ್ರಯಕ್ಕೆ ತೆಗೆದುಕೊಳ್ಳಬಹುದು; ಅಂಥವರು ನಿಮಗೆ ಸೊತ್ತಾಗಬಹುದು.
46ನೀವು ಅಂಥವರನ್ನು ಸ್ವಾಧೀನಪಡಿಸಿಕೊಂಡು ನಿಮ್ಮ ತರುವಾಯ ನಿಮ್ಮ ಸಂತತಿಯವರಿಗೆ ಸ್ವತ್ತಾಗಿ ಕೊಟ್ಟು ಬಿಡಬಹುದು. ಅವರನ್ನು ಶಾಶ್ವತ ದಾಸರನ್ನಾಗಿ ಮಾಡಿಕೊಳ್ಳಬಹುದು. ಇಸ್ರಾಯೇಲರಾದ ನೀವಾದರೋ ಎಲ್ಲರೂ ಸಹೋದರರಾಗಿರುವುದರಿಂದ ಒಬ್ಬರಿಂದ ಒಬ್ಬರು ಕಠಿಣವಾಗಿ ಸೇವೆಮಾಡಿಸಿಕೊಳ್ಳಬಾರದು.
47“‘ನಿಮ್ಮ ಸಹೋದರರಲ್ಲಿ ಒಬ್ಬನು ಬಡವನಾಗಿದ್ದು ನಿಮ್ಮ ನಡುವೆ ಮನೆಮಾಡಿಕೊಂಡ ಧನವಂತನಾದ ಅನ್ಯದೇಶದವನಿಗಾಗಲಿ ಅಥವಾ ಅವನಿಗೆ ಸೇರಿದವನಿಗಾಗಲಿ ತನ್ನನ್ನು ಮಾರಿಕೊಂಡಿದ್ದರೂ ಅವನಿಗೆ ಬಿಡುಗಡೆಯಾಗಬಹುದು.
48ಅವನ ಬಂಧುಗಳಲ್ಲಿ ಯಾರಾದರೂ ಈಡುಕೊಟ್ಟು ಅವನನ್ನು ಬಿಡಿಸಬಹುದು.
49ಅವನ ದೊಡ್ಡಪ್ಪ, ಚಿಕ್ಕಪ್ಪಂದಿರಾಗಲಿ, ಇವರ ಮಕ್ಕಳಾಗಲಿ ಅಥವಾ ಸಮೀಪಬಂಧುಗಳಲ್ಲಿ ಯಾರೇ ಆಗಲಿ ಈಡುಕೊಟ್ಟು ಅವನನ್ನು ಬಿಡಿಸಬಹುದು. ಬೇಕಾದಷ್ಟು ಹಣವು ದೊರೆತರೆ ತನ್ನನ್ನು ತಾನೇ ಬಿಡಿಸಿಕೊಳ್ಳಬಹುದು.
50ಅವನು ತನ್ನನ್ನು ಮಾರಿಕೊಂಡ ವರ್ಷ ಮೊದಲುಗೊಂಡು ಮುಂದಣ ಜೂಬಿಲಿ ಸಂವತ್ಸರದ ತನಕ ದಣಿಯ ಸಂಗಡ ವರ್ಷಗಳ ಲೆಕ್ಕವನ್ನು ಮಾಡಿ ಆ ಲೆಕ್ಕದ ಮೇರೆಗೆ ಬಿಡುಗಡೆಯ ಕ್ರಯವನ್ನು ಕೊಡಬೇಕು. ಕೂಲಿಯವನ ವಿಷಯದಲ್ಲಿ ಲೆಕ್ಕ ಮಾಡುವಂತೆ ಅವನ ವಿಷಯದಲ್ಲಿಯೂ ಲೆಕ್ಕ ಮಾಡಬೇಕು.
51ಜೂಬಿಲಿ ಸಂವತ್ಸರವು ಬರುವುದಕ್ಕೆ ಇನ್ನು ಅನೇಕ ವರ್ಷಗಳಿದ್ದರೆ ಅವುಗಳ ಪ್ರಕಾರವೇ ತನ್ನ ಬಿಡುಗಡೆಯ ಕ್ರಯವನ್ನೂ ಕೊಡಬೇಕು.
52ಕೆಲವು ವರ್ಷಗಳು ಮಾತ್ರ ಉಳಿದರೆ ಸ್ವಲ್ಪಭಾಗವನ್ನೂ ದಣಿಗೆ ಕೊಟ್ಟು ತನ್ನನ್ನು ಬಿಡಿಸಿಕೊಳ್ಳಬೇಕು.
53ಅವನು ವರ್ಷವರ್ಷಕ್ಕೆ ಗೊತ್ತುಮಾಡಿಕೊಂಡ ಕೂಲಿಯವನಂತೆಯೇ ದಣಿಯ ಬಳಿಯಲ್ಲಿರಬೇಕು. ಆ ದಣಿ ಅವನಿಂದ ಕಠಿಣವಾಗಿ ಸೇವೆಮಾಡಿಸಿಕೊಳ್ಳುವುದನ್ನು ನೀವು ನೋಡಿ ಸುಮ್ಮನೆ ಇರಬಾರದು.
54ಮೇಲೆ ಹೇಳಿದ ರೀತಿಯಲ್ಲಿ ಅವನು ಬಿಡಿಸಿಕೊಳ್ಳದೆ ಹೋದರೆ ಜೂಬಿಲಿ ಸಂವತ್ಸರದಲ್ಲಿ ಅವನೂ ಮತ್ತು ಅವನ ಮಕ್ಕಳೂ ಬಿಡುಗಡೆಯಾಗಬೇಕು.
55ಏಕೆಂದರೆ ಇಸ್ರಾಯೇಲರು ನನ್ನ ದಾಸರೇ; ನಾನು ಅವರನ್ನು ಐಗುಪ್ತದೇಶದೊಳಗಿಂದ ಬರಮಾಡಿದೆನಲ್ಲವೇ. ನಾನು ನಿಮ್ಮ ದೇವರಾದ ಯೆಹೋವನು’” ಎಂದು ಹೇಳಿದನು.

Read ಯಾಜ 25ಯಾಜ 25
Compare ಯಾಜ 25:29-55ಯಾಜ 25:29-55