Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಯಾಜ - ಯಾಜ 23

ಯಾಜ 23:18-39

Help us?
Click on verse(s) to share them!
18ಆ ರೊಟ್ಟಿಗಳೊಡನೆ ಒಂದು ವರ್ಷದ ಪೂರ್ಣಾಂಗವಾದ ಏಳು ಕುರಿಗಳನ್ನು, ಒಂದು ಹೋರಿಯನ್ನು ಮತ್ತು ಎರಡು ಟಗರುಗಳನ್ನು ಸಮರ್ಪಿಸಬೇಕು. ಇವು ಧಾನ್ಯದ್ರವ್ಯದೊಡನೆ ಮತ್ತು ಪಾನದ್ರವ್ಯದೊಡನೆ ಅಗ್ನಿಯ ಮೂಲಕ ಯೆಹೋವನಿಗೆ ಪರಿಮಳವನ್ನು ಉಂಟುಮಾಡುವ ಸರ್ವಾಂಗಹೋಮವಾಗುವವು.
19ಅದಲ್ಲದೆ ದೋಷಪರಿಹಾರಕ ಯಜ್ಞವಾಗಿ ಒಂದು ಹೋತವನ್ನು ಮತ್ತು ಸಮಾಧಾನ ಯಜ್ಞಕ್ಕಾಗಿ ಒಂದು ವರ್ಷದ ಎರಡು ಟಗರುಗಳನ್ನು ಸಮರ್ಪಿಸಬೇಕು.
20ಯಾಜಕನು ಇವುಗಳನ್ನು, ಪ್ರಥಮಫಲದ ರೊಟ್ಟಿಗಳನ್ನು ಮತ್ತು ಎರಡು ಕುರಿಗಳನ್ನು ಯೆಹೋವನ ಸನ್ನಿಧಿಯಲ್ಲಿ ನೈವೇದ್ಯವಾಗಿ ನಿವಾಳಿಸಬೇಕು. ಅವು ಯೆಹೋವನಿಗೆ ಮೀಸಲಾಗಿ ಯಾಜಕನಿಗೆ ಸಲ್ಲಬೇಕು.
21ಆ ದಿನದಲ್ಲಿ ದೇವಾರಾಧನೆಗಾಗಿ ಸಭೆಸೇರಬೇಕೆಂಬುದಾಗಿ ಪ್ರಕಟಪಡಿಸಬೇಕು. ಆ ದಿನದಲ್ಲಿ ಯಾವ ಉದ್ಯೋಗವನ್ನು ನಡೆಸಬಾರದು. ಇದು ನಿಮಗೂ, ನಿಮ್ಮ ಸಂತತಿಯವರಿಗೂ ಮತ್ತು ನಿಮ್ಮ ಎಲ್ಲಾ ನಿವಾಸಗಳಲ್ಲಿ ಶಾಶ್ವತನಿಯಮ.
22“‘ನಿಮ್ಮ ದೇಶದ ಪೈರನ್ನು ಕೊಯ್ಯುವಾಗ ಹೊಲಗಳ ಮೂಲೆಗಳಲ್ಲಿರುವುದನ್ನೆಲ್ಲಾ ಕೊಯ್ಯಬಾರದು ಮತ್ತು ಹಕ್ಕಲಾಯಬಾರದು. ಇವುಗಳನ್ನು ಬಡವರಿಗೋಸ್ಕರವು ಹಾಗು ಪರದೇಶದವರಿಗೋಸ್ಕರವು ಬಿಟ್ಟುಬಿಡಬೇಕು. ನಾನು ನಿಮ್ಮ ದೇವರಾಗಿರುವ ಯೆಹೋವನು’” ಎಂದು ಹೇಳಿದನು.
23ಯೆಹೋವನು ಮೋಶೆಯೊಂದಿಗೆ ಮಾತನಾಡಿ,
24“ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸಬೇಕು, ‘ಏಳನೆಯ ತಿಂಗಳಿನ ಮೊದಲನೆಯ ದಿನದಲ್ಲಿ ನಿಮಗೆ ಸಂಪೂರ್ಣ ವಿರಾಮವಿರಬೇಕು. ಅದನ್ನು ತುತ್ತೂರಿಗಳ ಧ್ವನಿಯಿಂದ ಪ್ರಕಟಪಡಿಸಬೇಕು. ದೇವಾರಾಧನೆಗಾಗಿ ಸಭೆಸೇರಬೇಕು.
25ಆ ದಿನದಲ್ಲಿ ಯಾವ ಉದ್ಯೋಗವನ್ನು ನಡೆಸಬಾರದು; ಯೆಹೋವನಿಗೆ ಹೋಮವನ್ನು ಮಾಡಬೇಕು’” ಅಂದನು.
26ಯೆಹೋವನು ಮೋಶೆಯೊಂದಿಗೆ ಮಾತನಾಡಿ,
27“ಅದೇ ಏಳನೆಯ ತಿಂಗಳಿನ ಹತ್ತನೆಯ ದಿನ ದೋಷಪರಿಹಾರಕ ದಿನ. ಅದರಲ್ಲಿ ದೇವಾರಾಧನೆಗಾಗಿ ಸಭೆಸೇರಬೇಕು; ನೀವು ಪೂರ್ಣವಾಗಿ ಉಪವಾಸಮಾಡಬೇಕು ಮತ್ತು ಯೆಹೋವನ ಸನ್ನಿಧಿಯಲ್ಲಿ ಹೋಮವನ್ನು ಮಾಡಬೇಕು.
28ಆ ದಿನದಲ್ಲಿ ಯಾವ ಉದ್ಯೋಗವನ್ನೂ ನಡೆಸಬಾರದು. ಅದು ದೋಷಪರಿಹಾರಕ ದಿನವಾಗಿದೆ, ಅದರಲ್ಲಿ ನಿಮಗೋಸ್ಕರ ಯೆಹೋವನ ಸನ್ನಿಧಿಯಲ್ಲಿ ದೋಷಪರಿಹಾರಕ ಆಚರಣೆ ನಡೆಯುವುದು.
29ಯಾವನಾದರೂ ಆ ದಿನದಲ್ಲಿ ಉಪವಾಸ ಮಾಡದೆಹೋದರೆ ಅವನನ್ನು ಕುಲದಿಂದ ಹೊರಗೆ ಹಾಕಬೇಕು.
30ಯಾವನಾದರೂ ಆ ದಿನದಲ್ಲಿ ಕೆಲಸವನ್ನು ಮಾಡಿದರೆ ಅವನನ್ನು ಇಸ್ರಾಯೇಲರಲ್ಲಿ ಇರದಂತೆ ನಾಶಮಾಡುವೆನು.
31ಆ ದಿನದಲ್ಲಿ ಯಾವ ಕೆಲಸವನ್ನು ಮಾಡಬಾರದು. ಇದು ನಿಮಗೂ, ನಿಮ್ಮ ಸಂತತಿಯವರಿಗೂ ಮತ್ತು ನಿಮ್ಮ ಎಲ್ಲಾ ನಿವಾಸಗಳಲ್ಲಿ ಶಾಶ್ವತನಿಯಮ.
32ಆ ಸಬ್ಬತ್ ದಿನವು ಸಂಪೂರ್ಣವಿರಾಮವುಳ್ಳ ದಿನವಾಗಿರಬೇಕು. ಆ ದಿನದಲ್ಲಿ ಉಪವಾಸದಿಂದಿರಬೇಕು. ಆ ತಿಂಗಳಿನ ಒಂಭತ್ತನೆಯ ದಿನದ ಸಾಯಂಕಾಲದಲ್ಲಿ ಪ್ರಾರಂಭಿಸಿ ಮರುದಿನದ ಸಾಯಂಕಾಲದ ವರೆಗೆ ನೀವು ಆ ವಿರಾಮದಿನವನ್ನು ಆಚರಿಸಬೇಕು” ಎಂದು ಹೇಳಿದನು.
33ಯೆಹೋವನು ಮೋಶೆಯೊಂದಿಗೆ ಮಾತನಾಡಿ,
34“ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸು, ‘ಏಳನೆಯ ತಿಂಗಳಿನ ಹದಿನೈದನೆಯ ದಿನ ಮೊದಲುಗೊಂಡು ಏಳು ದಿನಗಳ ವರೆಗೆ ಪರ್ಣಶಾಲೆಗಳ ಜಾತ್ರೆಯನ್ನು ಯೆಹೋವನಿಗೋಸ್ಕರ ಆಚರಿಸಬೇಕು.
35ಮೊದಲನೆಯ ದಿನದಲ್ಲಿ ದೇವಾರಾಧನೆಗಾಗಿ ಸಭೆಸೇರಬೇಕು; ಯಾವ ಉದ್ಯೋಗವನ್ನು ನಡೆಸಬಾರದು.
36ಆ ಏಳು ದಿನಗಳಲ್ಲಿಯೂ ನೀವು ಯೆಹೋವನ ಸನ್ನಿಧಿಯಲ್ಲಿ ಹೋಮಮಾಡಬೇಕು. ಎಂಟನೆಯ ದಿನದಲ್ಲಿಯೂ ದೇವಾರಾಧನೆಗಾಗಿ ಸಭೆಸೇರಬೇಕು, ಯೆಹೋವನ ಸನ್ನಿಧಿಯಲ್ಲಿ ಹೋಮಮಾಡಬೇಕು. ಅದು ಸಭೆಸೇರುವ ದಿನವಾದುದರಿಂದ ಆ ದಿನದಲ್ಲಿ ಯಾವ ಉದ್ಯೋಗವನ್ನು ಮಾಡಬಾರದು.
37“‘ಯೆಹೋವನು ನೇಮಿಸಿರುವ ಸಬ್ಬತ್ ದಿನಗಳ ಹೊರತಾಗಿ ಮೇಲೆ ಹೇಳಿದ ದಿನಗಳೇ ಯೆಹೋವನ ಹಬ್ಬದ ದಿನಗಳು. ಆ ದಿನಗಳಲ್ಲಿ ದೇವಾರಾಧನೆಗಾಗಿ ಸಭೆಸೇರುವಂತೆ ನೀವು ಪ್ರಕಟಿಸಬೇಕು. ಆಯಾ ದಿನಕ್ಕೆ ನೇಮಿಸಿರುವ ಪ್ರಕಾರ ಸರ್ವಾಂಗಹೋಮ, ಧಾನ್ಯನೈವೇದ್ಯ, ಸಮಾಧಾನಯಜ್ಞ, ಪಾನದ್ರವ್ಯ ಇವುಗಳನ್ನು ತಂದು ಯೆಹೋವನ ಸನ್ನಿಧಿಯಲ್ಲಿ ಹೋಮಮಾಡಬೇಕು.
38ಯೆಹೋವನಿಗೆ ಒಪ್ಪಿಸಬೇಕಾದ ಕಪ್ಪ, ಕಾಣಿಕೆ, ಹರಕೆ ಇವುಗಳನ್ನು ನೀವು ಯೆಹೋವನು ನೇಮಿಸಿರುವ ಸಬ್ಬತ್ ದಿನದಲ್ಲಿ ಮಾತ್ರವಲ್ಲದೆ ಮೇಲೆ ಸೂಚಿಸಿರುವ ಹಬ್ಬದ ದಿನಗಳಲ್ಲಿಯೂ ಸಮರ್ಪಿಸಬೇಕು.
39“‘ಏಳನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ ನೀವು ತೋಟ ಮತ್ತು ತೋಪುಗಳ ಬೆಳೆಯನ್ನು ಕೂಡಿಸಿದ ನಂತರ ಯೆಹೋವನು ನೇಮಿಸಿದ ಪರ್ಣಶಾಲೆಗಳ ಜಾತ್ರೆಯನ್ನು ಏಳು ದಿನಗಳ ವರೆಗೂ ಆಚರಿಸಬೇಕು. ಮೊದಲನೆಯ ದಿನದಲ್ಲಿಯೂ ಮತ್ತು ಎಂಟನೆಯ ದಿನದಲ್ಲಿಯೂ ಯಾವ ಕೆಲಸವನ್ನು ಮಾಡದೆ ಸಂಪೂರ್ಣ ವಿರಾಮದಿಂದಿರಬೇಕು.

Read ಯಾಜ 23ಯಾಜ 23
Compare ಯಾಜ 23:18-39ಯಾಜ 23:18-39