Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಯಾಜ - ಯಾಜ 22

ಯಾಜ 22:12-28

Help us?
Click on verse(s) to share them!
12ಯಾಜಕನ ಮಗಳು ಯಾಜಕನಲ್ಲದ ಇತರರಿಗೆ ಮದುವೆಯಾಗಿದ್ದರೆ ಅವಳು ನೈವೇದ್ಯದ ಪದಾರ್ಥಗಳನ್ನು ಊಟಮಾಡಬಾರದು.
13ಯಾಜಕನ ಮಗಳು ವಿಧವೆಯಾಗಲಿ ಅಥವಾ ಗಂಡನಿಂದ ಬಿಡಲ್ಪಟ್ಟವಳಾಗಲಿ, ಮಕ್ಕಳಿಲ್ಲದೆ ಇದ್ದರೆ ಬಾಲ್ಯದಲ್ಲಿ ತಂದೆಯ ಬಳಿಯಲ್ಲಿ ಇದ್ದಂತೆಯೇ ಕನ್ಯೆಯಾಗಿಯೇ ತಂದೆಯ ಮನೆಯನ್ನು ಸೇರಿ ತಂದೆಯ ಆಹಾರದಲ್ಲಿ ಭಾಗಿಯಾಗಬಹುದು. ಯಾಜಕರಲ್ಲದ ಇತರರು ಅದನ್ನು ಊಟಮಾಡಲೇಬಾರದು.
14ಯಾವನಾದರೂ ತಿಳಿಯದೆ ನೈವೇದ್ಯವಾದದ್ದನ್ನು ಊಟಮಾಡಿದರೆ ಅದನ್ನು ಮತ್ತು ಅದರ ಐದನೆಯ ಭಾಗವನ್ನು ಯಾಜಕನಿಗೆ ತಂದುಕೊಡಬೇಕು.
15ಇಸ್ರಾಯೇಲರು ಯೆಹೋವನಿಗೆ ಮೀಸಲೆಂದು ಇಟ್ಟ ನೈವೇದ್ಯದ ಪದಾರ್ಥಗಳನ್ನು ಯಾಜಕರು ಸಾಧಾರಣವೆಂದು ಎಣಿಸಬಾರದು.
16ಹಾಗೆ ಎಣಿಸಿದರೆ ತಾವು ಆ ನೈವೇದ್ಯಪದಾರ್ಥಗಳನ್ನು ಊಟಮಾಡುವುದರಿಂದ ಪಾಪಕ್ಕೆ ಒಳಗಾಗಿ ಶಿಕ್ಷೆಹೊಂದುವರು. ನನ್ನ ಸೇವೆಗೆ ಅವರನ್ನು ಪ್ರತಿಷ್ಠಿಸಿಕೊಂಡ ಯೆಹೋವನು ನಾನು’” ಎಂದು ಹೇಳಿದನು.
17ಯೆಹೋವನು ಮೋಶೆಯೊಂದಿಗೆ ಮಾತನಾಡಿ,
18“ನೀನು ಆರೋನನಿಗೂ, ಅವನ ಮಕ್ಕಳಿಗೂ ಹಾಗೂ ಇಸ್ರಾಯೇಲರೆಲ್ಲರಿಗೂ ಹೀಗೆ ಆಜ್ಞಾಪಿಸಬೇಕು, ‘ಇಸ್ರಾಯೇಲರಲ್ಲಿ ಆಗಲಿ, ಅವರ ನಡುವೆ ವಾಸಿಸುವ ಇತರರಲ್ಲಿಯಾಗಲಿ ಯಾವನಾದರೂ ಹರಕೆಯಾಗಿ ಅಥವಾ ಕಾಣಿಕೆಯಾಗಿ ಯೆಹೋವನಿಗೆ ಸರ್ವಾಂಗಹೋಮ ಮಾಡುವಾಗ,
19ಅದು ಸಮರ್ಪಕವಾಗುವಂತೆ ದನಗಳಿಂದಾಗಲಿ ಅಥವಾ ಆಡು ಮತ್ತು ಕುರಿಗಳಿಂದಾಗಲಿ ಪೂರ್ಣಾಂಗವಾದ ಗಂಡನ್ನೇ ಸಮರ್ಪಿಸಬೇಕು.
20ಕುಂದುಕೊರತೆ ಇರುವಂಥದ್ದನ್ನು ತರಬಾರದು; ಅಂಥದು ಸಮರ್ಪಣೆ ಆಗುವುದಿಲ್ಲ.
21ಯಾವನಾದರೂ ಸಮಾಧಾನಯಜ್ಞಕ್ಕಾಗಿ ಹರಕೆಯಾಗಿ ಅಥವಾ ಕಾಣಿಕೆಯಾಗಿ ದನವನ್ನು ಅಥವಾ ಹಿಂಡಿನ ಆಡು ಇಲ್ಲವೇ ಕುರಿಗಳನ್ನು ತಂದರೆ ಅವು ಯೆಹೋವನಿಗೆ ಸಮರ್ಪಕವಾಗುವುದಕ್ಕಾಗಿ ಅದು ಪೂರ್ಣಾಂಗವಾಗಿಯೇ ಇರಬೇಕು; ಅದರಲ್ಲಿ ಯಾವ ಕುಂದುಕೊರತೆಯೂ ಇರಬಾರದು.
22ಕುರುಡಾದದ್ದು, ಕುಂಟಾದದ್ದು, ಗಾಯವಾದದ್ದು, ಹುಣ್ಣುಳ್ಳದ್ದು, ಕಜ್ಜಿ ತುರಿಯುಳ್ಳದ್ದು ಇಂಥವುಗಳನ್ನು ಯೆಹೋವನಿಗೆ ಸಮರ್ಪಿಸಲೇಬಾರದು, ಯಜ್ಞವೇದಿಯ ಮೇಲೆ ಹೋಮ ಮಾಡಲೇಬಾರದು.
23ಹೋರಿಯ ಇಲ್ಲವೆ ಕುರಿಯ ಅವಯವಗಳಲ್ಲಿ ಏನಾದರೂ ಹೆಚ್ಚುಕಡಿಮೆ ಇದ್ದರೆ ಅದನ್ನು ಕಾಣಿಕೆಯಾಗಿ ಸಮರ್ಪಿಸಬಹುದೇ ಹೊರತು ಹರಕೆಯಾಗಿ ಒಪ್ಪಿಸಿದರೆ ಅದು ಸಮರ್ಪಣೆ ಆಗುವುದಿಲ್ಲ.
24ಬೀಜಹೊಡೆದ, ಕುಟ್ಟಿದ, ಒಡೆದ ಮತ್ತು ಕೊಯ್ದ ಪಶುವನ್ನು ಯೆಹೋವನಿಗೆ ಸಮರ್ಪಿಸಬಾರದು, ಮತ್ತು ನಿಮ್ಮ ದೇಶದಲ್ಲಿ ಪಶುಗಳಿಗೆ ಹಾಗೆ ಮಾಡಲೇ ಬಾರದು.
25ಅನ್ಯದೇಶದವನಿಂದ ತೆಗೆದುಕೊಂಡ ಅಂತಹ ಪಶುವನ್ನು ನಿಮ್ಮ ದೇವರಿಗೆ ಆಹಾರವಾಗಿ ಒಪ್ಪಿಸಬಾರದು; ಅದು ಕುಂದುಳ್ಳದ್ದು, ಪೂರ್ಣಾಂಗವಾದುದಲ್ಲ; ಆದಕಾರಣ ಸಮರ್ಪಣೆ ಆಗುವುದಿಲ್ಲ’” ಅಂದನು.
26ಯೆಹೋವನು ಮೋಶೆಯೊಂದಿಗೆ ಮಾತನಾಡಿ,
27“ಕರುವಾಗಲಿ, ಕುರಿಮರಿಯಾಗಲಿ ಅಥವಾ ಆಡುಮರಿಯಾಗಲಿ ಹುಟ್ಟಿದಾಗ ಅದು ಏಳು ದಿನಗಳ ವರೆಗೆ ತಾಯಿಯ ಬಳಿಯಲ್ಲಿ ಇರಬೇಕು. ಎಂಟನೆಯ ದಿನದಿಂದ ಅದನ್ನು ಯೆಹೋವನಿಗೆ ಹೋಮವಾಗಿ ಸಮರ್ಪಿಸಿದರೆ ಅದು ಅಂಗೀಕಾರವಾಗುವುದು.
28ಹೆತ್ತ ಆಕಳನ್ನು, ಅದರ ಕರುವನ್ನು ಇಲ್ಲವೆ ಈದ ಆಡು, ಕುರಿಗಳನ್ನು, ಅವುಗಳ ಮರಿಗಳನ್ನು ಒಂದೇ ದಿನದಲ್ಲಿ ವಧಿಸಬಾರದು.

Read ಯಾಜ 22ಯಾಜ 22
Compare ಯಾಜ 22:12-28ಯಾಜ 22:12-28