Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಯಾಜ - ಯಾಜ 22

ಯಾಜ 22:1-14

Help us?
Click on verse(s) to share them!
1ಯೆಹೋವನು ಮೋಶೆಯೊಂದಿಗೆ ಮಾತನಾಡಿ,
2“ಆರೋನನೂ ಮತ್ತು ಅವನ ಮಕ್ಕಳೂ ತಾವು ಅಶುದ್ಧರಾಗಿರುವಾಗ ಇಸ್ರಾಯೇಲರಿಂದ ನನಗೆ ಸಮರ್ಪಿಸಲ್ಪಟ್ಟ ಪರಿಶುದ್ಧ ದ್ರವ್ಯಗಳನ್ನು ಮುಟ್ಟಬಾರದೆಂದು ಅವರಿಗೆ ಆಜ್ಞಾಪಿಸು. ಅವರು ನನ್ನ ಪರಿಶುದ್ಧ ನಾಮದ ಘನತೆಗೆ ಕುಂದನ್ನು ತರಬಾರದು; ನಾನು ಯೆಹೋವನು.
3ಅವರಿಗೆ ನೀನು ಹೀಗೆ ಆಜ್ಞಾಪಿಸಬೇಕು, ‘ನಿಮ್ಮಲ್ಲಿಯಾಗಲಿ ಅಥವಾ ನಿಮ್ಮ ಸಂತತಿಯವರಲ್ಲಾಗಲಿ ಯಾವನಾದರೂ ಅಶುದ್ಧನಾಗಿರುವಾಗ ಇಸ್ರಾಯೇಲರು ಯೆಹೋವನಿಗೆ ಮೀಸಲೆಂದು ಸಮರ್ಪಿಸುವ ದ್ರವ್ಯಗಳ ಬಳಿಗೆ ಬಂದರೆ, ಅವನು ನನ್ನ ಸಾನ್ನಿಧ್ಯಸೇವೆಯಿಂದ ತೆಗೆದು ಹಾಕಬೇಕು; ನಾನು ಯೆಹೋವನು.
4ಆರೋನನ ಸಂತತಿಯವರಲ್ಲಿ ಯಾವನಿಗಾದರೂ ಕುಷ್ಠರೋಗವಾಗಲಿ ಅಥವಾ ಮೇಹವಾಗಲಿ ಇದ್ದರೆ ಅವನು ಶುದ್ಧನಾಗುವ ತನಕ ದೇವರಿಗೆ ನೈವೇದ್ಯವಾದ ಪದಾರ್ಥಗಳನ್ನು ಊಟಮಾಡಬಾರದು. ಹೆಣದ ಸಂಪರ್ಕದಿಂದ ಅಶುದ್ಧವಾದುದನ್ನು ಮುಟ್ಟಿದವನಾಗಲಿ, ವೀರ್ಯಸ್ಖಲನ ಮಾಡಿಕೊಂಡವನಾಗಲಿ,
5ಹರಿದಾಡುವ ಅಶುದ್ಧವಾದ ಕ್ರಿಮಿಕೀಟ ಅಥವಾ ಅಶುದ್ಧನಾದ ಮನುಷ್ಯನನ್ನು ಮುಟ್ಟಿದವನು ಅಶುದ್ಧನಾಗಿರುವನು.
6“‘ಅಶುದ್ಧವಾದುದನ್ನು ಮುಟ್ಟುವ ಯಾಜಕನು ಆ ದಿನದ ಸಾಯಂಕಾಲದ ವರೆಗೆ ಅಶುದ್ಧನಾಗಿರುವನು. ಆದುದರಿಂದ ಸ್ನಾನಮಾಡುವ ತನಕ ಅವನು ನೈವೇದ್ಯದ್ರವ್ಯವನ್ನು ತಿನ್ನಬಾರದು.
7ಹೊತ್ತುಮುಣುಗಿದ ನಂತರ ಅವನು ಶುದ್ಧನಾಗಿ ನೈವೇದ್ಯದ್ರವ್ಯವನ್ನು ಊಟಮಾಡಬಹುದು. ಅದು ಅವನ ಆಹಾರವೇ.
8ಅವನು ತಾನಾಗಿ ಸತ್ತುಬಿದ್ದದ್ದನ್ನಾಗಲಿ, ಕಾಡುಮೃಗದಿಂದ ಕೊಲ್ಲಲ್ಪಟ್ಟ ಪ್ರಾಣಿಗಳನ್ನು ತಿಂದು ತನ್ನನ್ನು ಅಪವಿತ್ರಮಾಡಿಕೊಳ್ಳಬಾರದು; ನಾನು ಯೆಹೋವನು.
9ಯಾಜಕರು ಈ ನನ್ನ ಆಜ್ಞೆಗಳನ್ನು ಅನುಸರಿಸಿ ನಡೆಯಬೇಕು. ಇವುಗಳನ್ನು ಮೀರಿ ನನ್ನ ನೈವೇದ್ಯವನ್ನು ಅಪವಿತ್ರಪಡಿಸಿದರೆ ಆ ದೋಷದ ಫಲವನ್ನು ಅನುಭವಿಸಿ ಸತ್ತಾರು. ಅವರನ್ನು ನನ್ನ ಸೇವೆಗೆ ಪ್ರತಿಷ್ಠಿಸಿಕೊಂಡ ಯೆಹೋವನು ನಾನು.
10“‘ಯಾಜಕನಲ್ಲದೆ ಇತರರು ನೈವೇದ್ಯದ ಪದಾರ್ಥವನ್ನು ಊಟಮಾಡಬಾರದು. ಯಾಜಕನ ಬಳಿಯಲ್ಲಿರುವ ಅತಿಥಿಯಾಗಲಿ ಅಥವಾ ಕೂಲಿಯಾಳಾಗಲಿ ಅದನ್ನು ಊಟಮಾಡಬಾರದು.
11ಆದರೆ ಯಾಜಕನು ಕ್ರಯಕ್ಕೆ ತೆಗೆದುಕೊಂಡ ಗುಲಾಮರೂ ಮತ್ತು ಅವನ ಮನೆಯಲ್ಲಿ ಹುಟ್ಟಿದ ಗುಲಾಮರು ಅದನ್ನು ಊಟಮಾಡಬಹುದು.
12ಯಾಜಕನ ಮಗಳು ಯಾಜಕನಲ್ಲದ ಇತರರಿಗೆ ಮದುವೆಯಾಗಿದ್ದರೆ ಅವಳು ನೈವೇದ್ಯದ ಪದಾರ್ಥಗಳನ್ನು ಊಟಮಾಡಬಾರದು.
13ಯಾಜಕನ ಮಗಳು ವಿಧವೆಯಾಗಲಿ ಅಥವಾ ಗಂಡನಿಂದ ಬಿಡಲ್ಪಟ್ಟವಳಾಗಲಿ, ಮಕ್ಕಳಿಲ್ಲದೆ ಇದ್ದರೆ ಬಾಲ್ಯದಲ್ಲಿ ತಂದೆಯ ಬಳಿಯಲ್ಲಿ ಇದ್ದಂತೆಯೇ ಕನ್ಯೆಯಾಗಿಯೇ ತಂದೆಯ ಮನೆಯನ್ನು ಸೇರಿ ತಂದೆಯ ಆಹಾರದಲ್ಲಿ ಭಾಗಿಯಾಗಬಹುದು. ಯಾಜಕರಲ್ಲದ ಇತರರು ಅದನ್ನು ಊಟಮಾಡಲೇಬಾರದು.
14ಯಾವನಾದರೂ ತಿಳಿಯದೆ ನೈವೇದ್ಯವಾದದ್ದನ್ನು ಊಟಮಾಡಿದರೆ ಅದನ್ನು ಮತ್ತು ಅದರ ಐದನೆಯ ಭಾಗವನ್ನು ಯಾಜಕನಿಗೆ ತಂದುಕೊಡಬೇಕು.

Read ಯಾಜ 22ಯಾಜ 22
Compare ಯಾಜ 22:1-14ಯಾಜ 22:1-14