Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಯಾಜ - ಯಾಜ 16

ಯಾಜ 16:20-34

Help us?
Click on verse(s) to share them!
20“ಆರೋನನು ಮಹಾಪವಿತ್ರಸ್ಥಾನ, ದೇವದರ್ಶನದ ಗುಡಾರ, ಯಜ್ಞವೇದಿ ಇವುಗಳಿಗೋಸ್ಕರ ದೋಷಪರಿಹಾರ ಮಾಡಿ ಮುಗಿಸಿದ ಮೇಲೆ ಆ ಸಜೀವವಾದ ಹೋತವನ್ನು ತರಿಸಬೇಕು.
21ಅವನು ಅದರ ತಲೆಯ ಮೇಲೆ ಎರಡು ಕೈಗಳನ್ನು ಇಟ್ಟು, ಇಸ್ರಾಯೇಲರ ಎಲ್ಲಾ ಪಾಪಗಳನ್ನು, ದ್ರೋಹಗಳನ್ನು ಮತ್ತು ಅಪರಾಧಗಳನ್ನು ಯೆಹೋವನಿಗೆ ಅರಿಕೆಮಾಡಿ ಆ ಹೋತದ ತಲೆಯ ಮೇಲೆ ಹೊರಿಸಿ, ಅದನ್ನು ಆ ಕೆಲಸಕ್ಕೆ ನೇಮಕವಾದವನ ಕೈಯಿಂದ ಅರಣ್ಯಕ್ಕೆ ಕಳುಹಿಸಿಬಿಡಬೇಕು.
22ಆ ಹೋತ ಅವರ ಎಲ್ಲಾ ಪಾಪಗಳನ್ನು ತನ್ನ ಮೇಲೆ ಹೊತ್ತುಕೊಂಡು ನಿರ್ಜನವಾದ ಪ್ರದೇಶಕ್ಕೆ ಹೋಗುವಂತೆ ಆ ಮನುಷ್ಯನು ಅದನ್ನು ಅರಣ್ಯಕ್ಕೆ ತೆಗೆದುಕೊಂಡುಹೋಗಿ ಅಲ್ಲೇ ಬಿಟ್ಟುಬಿಡಬೇಕು.
23“ತರುವಾಯ ಆರೋನನು ದೇವದರ್ಶನದ ಗುಡಾರದೊಳಗೆ ಬಂದು ತಾನು ಮಹಾಪವಿತ್ರಸ್ಥಾನದೊಳಗೆ ಹೋಗುವುದಕ್ಕಾಗಿ ಧರಿಸಿಕೊಂಡಿದ್ದ ನಾರುಮಡಿಗಳನ್ನು ತೆಗೆದು ಅಲ್ಲೇ ಇಡಬೇಕು.
24ಅವನು ಪವಿತ್ರ ಸ್ಥಳದ ಪ್ರಾಕಾರದಲ್ಲಿ ಸ್ನಾನಮಾಡಿ, ತನ್ನ ವಸ್ತ್ರಗಳನ್ನು ಧರಿಸಿಕೊಳ್ಳಬೇಕು. ಆಗ ಅವನು ಹೊರಗೆ ಬಂದು ತನಗಾಗಿಯೂ ಮತ್ತು ಜನಸಮೂಹಕ್ಕಾಗಿಯೂ ಸರ್ವಾಂಗಹೋಮಗಳನ್ನು ಸಮರ್ಪಿಸಿ, ತನಗಾಗಿಯೂ ಮತ್ತು ಜನರಿಗಾಗಿಯೂ ದೋಷಪರಿಹಾರ ಮಾಡಬೇಕು.
25ಅವನು ದೋಷಪರಿಹಾರಕ ಯಜ್ಞಪಶುಗಳ ಕೊಬ್ಬನ್ನು ಯಜ್ಞವೇದಿಯ ಮೇಲೆ ಹೋಮಮಾಡಬೇಕು.
26“ಅಜಾಜೇಲನಿಗೆ ಹೋತವನ್ನು ಬಿಟ್ಟುಬಂದವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಿಯೇ ಪಾಳೆಯಕ್ಕೆ ಬರಬೇಕು.
27ದೋಷಪರಿಹಾರಕ ಯಜ್ಞಪಶುಗಳಾದ ಹೋರಿ ಮತ್ತು ಹೋತಗಳ ರಕ್ತವನ್ನು ಮಹಾಪವಿತ್ರಸ್ಥಾನದಲ್ಲಿ ದೋಷಪರಿಹಾರ ಮಾಡುವುದಕ್ಕಾಗಿ ತಂದ ಮೇಲೆ ಅವುಗಳ ಶರೀರಗಳನ್ನು ಪಾಳೆಯದ ಆಚೆಗೆ ತೆಗೆದುಕೊಂಡು ಹೋಗಿ, ಚರ್ಮ, ಮಾಂಸ ಮತ್ತು ಕಲ್ಮಷಗಳೆಲ್ಲವನ್ನು ಬೆಂಕಿಯಿಂದ ಸುಡಿಸಬೇಕು.
28ಅವುಗಳನ್ನು ಸುಟ್ಟವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಿಯೇ ಪಾಳೆಯದೊಳಗೆ ಬರಬೇಕು.
29“ಸ್ವದೇಶಸ್ಥರಾದ ನೀವೂ ಮತ್ತು ನಿಮ್ಮಲ್ಲಿ ವಾಸವಾಗಿರುವ ಅನ್ಯದೇಶದವರು, ಎಲ್ಲರೂ ಏಳನೆಯ ತಿಂಗಳಿನ ಹತ್ತನೆಯ ದಿನದಲ್ಲಿ ಸಕಲ ವಿಧವಾದ ಕೆಲಸಗಳನ್ನು ಬಿಟ್ಟು ಉಪವಾಸಮಾಡಿ ನಿಮ್ಮ ಆತ್ಮಗಳನ್ನು ಕುಂದಿಸಿಕೊಳ್ಳಬೇಕು. ಇದು ನಿಮಗೆ ಶಾಶ್ವತವಾದ ನಿಯಮ.
30ಏಕೆಂದರೆ ನೀವು ಪರಿಶುದ್ಧರಾಗುವುದಕ್ಕಾಗಿ ಈ ದಿನದಲ್ಲಿ ನಿಮಗೋಸ್ಕರ ದೋಷಪರಿಹಾರವಾಗುವುದು, ಯೆಹೋವನ ದೃಷ್ಟಿಯಲ್ಲಿ ನಿಮ್ಮ ಎಲ್ಲಾ ದೋಷಗಳು ನಿವಾರಣೆಯಾಗುವವು.
31ಈ ದಿನ ನೀವು ಸಂಪೂರ್ಣವಾಗಿ ಕೆಲಸವನ್ನು ನಿಲ್ಲಿಸಬೇಕಾದ ಸಬ್ಬತ್ ದಿನವಾಗಿರಬೇಕು; ಇದರಲ್ಲಿ ನೀವು ಉಪವಾಸ ಮಾಡಬೇಕು; ಇದೇ ನಿಮಗೆ ಶಾಶ್ವತನಿಯಮ.
32“ಆರೋನನ ವಂಶದವರಲ್ಲಿ ಯಾವನಿಗೆ ಪಿತೃಸ್ಥಾನದಲ್ಲಿ ಮಹಾಯಾಜಕನ ಸೇವಾವೃತ್ತಿಯನ್ನು ನಡೆಸುವುದಕ್ಕೆ ಪಟ್ಟಾಭಿಷೇಕವಾಗುವುದೋ ಅವನೇ ಈ ದೋಷಪರಿಹಾರ ಕಾರ್ಯವನ್ನು ಆಚರಿಸಬೇಕು. ಅವನೇ ಆ ಪರಿಶುದ್ಧವಾದ ನಾರುಮಡಿಗಳನ್ನು ಧರಿಸಿಕೊಳ್ಳಬೇಕು.
33ಅವನು ದೇವಸ್ಥಾನ, ದೇವದರ್ಶನದ ಗುಡಾರ, ಯಜ್ಞವೇದಿ, ಯಾಜಕರು, ಜನಸಮೂಹದವರು ಈ ಎಲ್ಲರಿಗೋಸ್ಕರ ದೋಷಪರಿಹಾರವನ್ನು ಮಾಡಬೇಕು.
34ಇಸ್ರಾಯೇಲರ ಎಲ್ಲಾ ದೋಷಗಳನ್ನು ನಿವಾರಣೆಮಾಡುವುದಕ್ಕಾಗಿ ಅವರಿಗೋಸ್ಕರ ವರ್ಷಕ್ಕೆ ಒಂದಾವರ್ತಿ ದೋಷಪರಿಹಾರವನ್ನು ಮಾಡಬೇಕೆಂಬುದೇ ನಿಮಗೆ ಶಾಶ್ವತನಿಯಮ” ಎಂದು ಹೇಳಿದನು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಆರೋನನು ಮಾಡಿದನು.

Read ಯಾಜ 16ಯಾಜ 16
Compare ಯಾಜ 16:20-34ಯಾಜ 16:20-34