Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಯಾಜ - ಯಾಜ 16

ಯಾಜ 16:2-19

Help us?
Click on verse(s) to share them!
2“ನಿನ್ನ ಅಣ್ಣನಾದ ಆರೋನನು ಮನಸ್ಸಿಗೆ ಬಂದಾಗೆಲ್ಲಾ ತೆರೆಯನ್ನು ದಾಟಿ ಮಹಾಪವಿತ್ರವಾದ ಸ್ಥಾನದೊಳಕ್ಕೆ ಮಂಜೂಷದ ಮೇಲಣ ಕೃಪಾಸನದ ಹತ್ತಿರಕ್ಕೆ ಬರಬಾರದೆಂದು ಅವನಿಗೆ ಹೇಳು. ನಾನು ಕೃಪಾಸನದ ಮೇಲೆ ಮೇಘದಲ್ಲಿ ಕಾಣಿಸಿಕೊಳ್ಳುವುದರಿಂದ ಅವನು ನಾಶವಾಗುವನು.
3ಆರೋನನು ಮಹಾಪವಿತ್ರಸ್ಥಾನದೊಳಗೆ ಬರುವಾಗ ಮುಂದೆ ಹೇಳುವ ರೀತಿಯಲ್ಲಿ ಬರಬೇಕು. ಅವನು ದೋಷಪರಿಹಾರಕ ಯಜ್ಞಕ್ಕಾಗಿ ಹೋರಿಯನ್ನು ಮತ್ತು ಸರ್ವಾಂಗಹೋಮಕ್ಕಾಗಿ ಟಗರನ್ನು ತರಬೇಕು.
4ಅವನು ಪರಿಶುದ್ಧವಾದ ನಾರಿನ ನಿಲುವಂಗಿಯನ್ನು ತೊಟ್ಟುಕೊಂಡು, ನಾರಿನ ಒಳಉಡುಪನ್ನು ಹಾಕಿಕೊಂಡು, ನಾರಿನ ನಡುಕಟ್ಟನ್ನು ಕಟ್ಟಿಕೊಂಡು ಮತ್ತು ತಲೆಗೆ ನಾರಿನ ಪೇಟವನ್ನು ಸುತ್ತಿಕೊಳ್ಳಬೇಕು. ಅವು ದೀಕ್ಷಾವಸ್ತ್ರಗಳಾದುದರಿಂದ ಅವನು ಅವುಗಳನ್ನು ಧರಿಸಿಕೊಳ್ಳುವುದಕ್ಕೆ ಮುಂಚೆ ಸ್ನಾನಮಾಡಬೇಕು.
5ಇಸ್ರಾಯೇಲರ ಜನಸಮೂಹದಿಂದ ದೋಷಪರಿಹಾರಕ ಯಜ್ಞಕ್ಕಾಗಿ ಎರಡು ಹೋತಗಳನ್ನು ಮತ್ತು ಸರ್ವಾಂಗಹೋಮಕ್ಕಾಗಿ ಒಂದು ಟಗರನ್ನು ತೆಗೆದುಕೊಂಡು ಬರಬೇಕು.
6ಆರೋನನು ತನಗಾಗಿಯೂ ಮತ್ತು ತನ್ನ ಮನೆತನದವರಿಗಾಗಿಯೂ ದೋಷಪರಿಹಾರ ಮಾಡಬೇಕು.
7ಆ ಎರಡು ಹೋತಗಳನ್ನು ಅವನು ದೇವದರ್ಶನದ ಗುಡಾರದ ಬಾಗಿಲಲ್ಲಿ ಯೆಹೋವನ ಸನ್ನಿಧಿಯಲ್ಲಿ ನಿಲ್ಲಿಸಬೇಕು.
8ಆಗ ಅವನು ಆ ಹೋತಗಳಲ್ಲಿ ಒಂದು ಯೆಹೋವನಿಗೋಸ್ಕರವೆಂದು ಮತ್ತೊಂದು ಅಜಾಜೇಲನಿಗೋಸ್ಕರವೆಂದು ಚೀಟುಗಳನ್ನು ಬರೆದು ಹಾಕಬೇಕು.
9ಯಾವ ಹೋತ ಯೆಹೋವನದೆಂದು ಗೊತ್ತಾಗುವುದೋ ಅದನ್ನು ಆರೋನನು ದೋಷಪರಿಹಾರಕ ಯಜ್ಞವಾಗಿ ಸಮರ್ಪಿಸಬೇಕು.
10ಯಾವ ಹೋತ ಅಜಾಜೇಲನದೆಂದು ಗೊತ್ತಾಗುವುದೋ ಅದನ್ನು ಯೆಹೋವನ ಸನ್ನಿಧಿಯಲ್ಲಿ ಸಜೀವವಾಗಿಯೇ ನಿಲ್ಲಿಸಿ, ಅದರ ಮೇಲೆ ದೋಷವನ್ನು ಹೊರಿಸಿ ಅರಣ್ಯಕ್ಕೆ ಅಜಾಜೇಲನಿಗಾಗಿ ಬಿಡಬೇಕು.
11“ಆರೋನನು ತನಗಾಗಿ ದೋಷಪರಿಹಾರಕ ಯಜ್ಞದ ಹೋರಿಯನ್ನು ಸಮರ್ಪಿಸಿ ತನಗಾಗಿಯೂ ಮತ್ತು ತನ್ನ ಮನೆತನದವರಿಗಾಗಿಯೂ ದೋಷಪರಿಹಾರವನ್ನು ಮಾಡಬೇಕು.
12ಅವನು ತನಗೋಸ್ಕರ ಹೋರಿಯನ್ನು ವಧಿಸಿದ ಮೇಲೆ ಯೆಹೋವನ ಸನ್ನಿಧಿಯಲ್ಲಿರುವ ಯಜ್ಞವೇದಿಯಿಂದ ಕೆಂಡಗಳನ್ನು ಧೂಪಾರತಿಯಲ್ಲಿ ತುಂಬಿಸಿ, ಪರಿಮಳಧೂಪದ್ರವ್ಯದ ಚೂರ್ಣದಲ್ಲಿ ಎರಡು ಹಿಡಿ ತೆಗೆದುಕೊಂಡು ಅವುಗಳನ್ನು ತೆರೆಯೊಳಗೆ ತರಬೇಕು.
13ಅವನು ಆ ಧೂಪವನ್ನು ಯೆಹೋವನ ಸನ್ನಿಧಿಯಲ್ಲಿಯೇ ಕೆಂಡಗಳ ಮೇಲೆ ಹಾಕಬೇಕು. ಅವನಿಗೆ ಪ್ರಾಣನಷ್ಟವಾಗದಂತೆ ಆ ಧೂಪದ ಹೊಗೆಯು ಮೇಘದೋಪಾದಿಯಲ್ಲಿ ಆಜ್ಞಾಶಾಸನಗಳ ಮೇಲಣ ಕೃಪಾಸನವನ್ನು ಆವರಿಸಿಕೊಳ್ಳುವುದು.
14ಆಗ ಅವನು ಆ ಹೋರಿಯ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಕೃಪಾಸನದ ಪೂರ್ವಭಾಗದ ಮೇಲೆ ಬೆರಳಿನಿಂದ ಚಿಮುಕಿಸಿ ಕೃಪಾಸನದ ಎದುರಾಗಿಯೂ ಏಳು ಸಾರಿ ಚಿಮುಕಿಸಬೇಕು.
15“ತರುವಾಯ ಅವನು ಜನರಿಗಾಗಿ ಮಾಡಿದ ದೋಷಪರಿಹಾರಕ ಯಜ್ಞದ ಹೋತವನ್ನು ವಧಿಸಿ, ಅದರ ರಕ್ತವನ್ನು ತೆರೆಯೊಳಗೆ ತಂದು, ಹೋರಿಯ ರಕ್ತದಿಂದ ಮಾಡಿದಂತೆಯೇ ಇದರ ರಕ್ತದಿಂದಲೂ ಮಾಡಿ, ಕೃಪಾಸನದ ಮೇಲೆಯೂ ಮತ್ತು ಅದರ ಎದುರಾಗಿಯೂ ಚಿಮುಕಿಸಬೇಕು.
16ಹೀಗೆ ಇಸ್ರಾಯೇಲರು ನಾನಾ ವಿಧವಾದ ಅಶುದ್ಧತ್ವ, ಅಪರಾಧ, ದ್ರೋಹ ಇವುಗಳಿಂದ ಮಹಾಪವಿತ್ರಸ್ಥಾನಕ್ಕೆ ಉಂಟುಮಾಡಿದ ದೋಷವನ್ನು ಆರೋನನು ಪರಿಹರಿಸುವನು. ಅಶುದ್ಧರಾದ ಅವರ ನಡುವೆ ಇರುವ ದೇವದರ್ಶನದ ಗುಡಾರಕ್ಕೋಸ್ಕರವೂ ಅವನು ಹಾಗೆಯೇ ದೋಷಪರಿಹಾರ ಮಾಡುವನು.
17ಅವನು ದೋಷಪರಿಹಾರ ಮಾಡುವುದಕ್ಕಾಗಿ ಮಹಾ ಪವಿತ್ರಸ್ಥಾನದೊಳಗೆ ಹೋಗಿ ಹೊರಗೆ ಬರುವ ತನಕ ಯಾರೂ ದೇವದರ್ಶನದ ಗುಡಾರದಲ್ಲಿ ಹೋಗಬಾರದು. ಹಾಗೆ ತನಗಾಗಿಯೂ, ತನ್ನ ಮನೆತನದವರಿಗಾಗಿಯೂ ಮತ್ತು ಇಸ್ರಾಯೇಲರ ಎಲ್ಲಾ ಜನಸಮೂಹಕ್ಕಾಗಿಯೂ ದೋಷಪರಿಹಾರ ಮಾಡುವನು.
18ತರುವಾಯ ಅವನು ಹೊರಗೆ ಬಂದು ಯೆಹೋವನ ಸನ್ನಿಧಿಯಲ್ಲಿರುವ ಯಜ್ಞವೇದಿಯ ಬಳಿಗೆ ಹೋಗಿ ಅದಕ್ಕಾಗಿ ದೋಷಪರಿಹಾರ ಮಾಡಬೇಕು. ಆ ಹೋರಿಯ ರಕ್ತದಲ್ಲಿಯೂ ಹಾಗೂ ಆ ಹೋತದ ರಕ್ತದಲ್ಲಿಯೂ ಸ್ವಲ್ಪವನ್ನು ತೆಗೆದುಕೊಂಡು ಯಜ್ಞವೇದಿಯ ಕೊಂಬುಗಳಿಗೆ ಸುತ್ತಲೂ ಹಚ್ಚಬೇಕು.
19ಅವನು ಆ ರಕ್ತದಲ್ಲಿ ಸ್ವಲ್ಪವನ್ನು ಅದರ ಮೇಲೆ ಏಳು ಸಾರಿ ಬೆರಳಿನಿಂದ ಚಿಮುಕಿಸಿ ಇಸ್ರಾಯೇಲರಿಂದ ಅದಕ್ಕೆ ಉಂಟಾದ ಅಶುದ್ಧತ್ವವನ್ನು ಹೋಗಲಾಡಿಸಿ ಅದನ್ನು ಪರಿಶುದ್ಧಪಡಿಸಬೇಕು.

Read ಯಾಜ 16ಯಾಜ 16
Compare ಯಾಜ 16:2-19ಯಾಜ 16:2-19