9ಇದ್ದದ್ದೇ ಇರುವುದು, ನಡೆದದ್ದೇ ನಡೆಯುವುದು. ಸೂರ್ಯನ ಕೆಳಗೆ ಹೊಸದಾದದ್ದು ಯಾವುದೂ ಇಲ್ಲ.
10‘ನೋಡು, ಇದು ಹೊಸದು’ ಎಂದು ಯಾವ ವಿಷಯದಲ್ಲಾದರೂ ಹೇಳಬಹುದೋ? ನಮಗಿಂತ ಮೊದಲು ಇದ್ದದ್ದು, ಪುರಾತನ ಕಾಲದಿಂದ ಇದ್ದದ್ದೇ.
11ಪುರಾತನ ಕಾಲದಲ್ಲಿ ನಡೆದ ಸಂಗತಿಗಳ ಜ್ಞಾಪಕವು ಈಗಿನ ಜನರಿಗೆ ಇಲ್ಲ. ಮುಂದಿನ ಕಾಲದಲ್ಲಿ ನಡೆಯುವ ಸಂಗತಿಗಳ ಜ್ಞಾಪಕವು ಮುಂದಿನ ಕಾಲದ ಜನರಿಗೆ ಇರುವುದಿಲ್ಲ.”
12ಪ್ರಸಂಗಿಯಾದ ನಾನು ಯೆರೂಸಲೇಮಿನಲ್ಲಿ ಇಸ್ರಾಯೇಲರಿಗೆ ಅರಸನಾಗಿದ್ದೆನು.
13ಆಕಾಶದ ಕೆಳಗಡೆ ನಡೆಯುವ ಎಲ್ಲಾ ಕೆಲಸಗಳನ್ನು ಜ್ಞಾನದಿಂದ ವಿಚಾರಿಸಿ ವಿಮರ್ಶಿಸುವುದಕ್ಕೆ ನನ್ನ ಮನಸ್ಸನ್ನು ಇಟ್ಟೆನು. ದೇವರು ಮನುಷ್ಯರ ಮೇಲೆ ನೇಮಿಸಿರುವ ಕೆಲಸವೆಲ್ಲಾ ಬಹು ಪ್ರಯಾಸವೇ.
14ಲೋಕದಲ್ಲಿ ನಡೆಯುವ ಎಲ್ಲಾ ಕೆಲಸಗಳನ್ನು ನೋಡಿದ್ದೇನೆ. ಆಹಾ, ಗಾಳಿಯನ್ನು ಹಿಂದಟ್ಟುವ ಹಾಗೆ ಸಮಸ್ತವೂ ವ್ಯರ್ಥ.
15ವಕ್ರವಾದದ್ದನ್ನು ಸರಿಮಾಡುವುದಕ್ಕೆ ಆಗುವುದಿಲ್ಲ! ಇಲ್ಲದ್ದನ್ನು ಲೆಕ್ಕಿಸುವುದಕ್ಕೆ ಅಸಾಧ್ಯ!
16ನಾನು ನನ್ನ ಮನಸ್ಸಿನಲ್ಲಿ ಯೋಚಿಸುತ್ತಾ, “ನೋಡು, ನನಗಿಂತ ಮೊದಲು ಯೆರೂಸಲೇಮನ್ನು ಆಳಿದವರೆಲ್ಲರಿಗಿಂತಲೂ ಹೆಚ್ಚು ಜ್ಞಾನವನ್ನು ಸಂಪಾದಿಸಿಕೊಂಡಿದ್ದೇನೆ. ನನ್ನ ಹೃದಯವು ಜ್ಞಾನವನ್ನೂ, ತಿಳಿವಳಿಕೆಯನ್ನೂ ವಿಶೇಷವಾಗಿ ಹೊಂದಿದೆ” ಎಂದುಕೊಂಡೆನು.
17ಆಗ ಜ್ಞಾನವನ್ನೂ, ಹುಚ್ಚುತನವನ್ನೂ, ಬುದ್ಧಿಹೀನತೆಯನ್ನೂ ಗ್ರಹಿಸಲು ನಾನು ಮನಸ್ಸಿಟ್ಟೆನು. ಇದು ಸಹ ಗಾಳಿಯನ್ನು ಹಿಂದಟ್ಟುವ ಹಾಗೆ ಎಂದು ನಾನು ಅರಿತುಕೊಂಡೆನು.
18ಏಕೆಂದರೆ ಬಹಳ ಜ್ಞಾನವಿದ್ದಲ್ಲಿ ಬಹಳ ಸಂಕಟ. ಹೆಚ್ಚು ತಿಳಿವಳಿಕೆಯನ್ನು ಪಡೆದವನಿಗೆ ಹೆಚ್ಚು ವ್ಯಥೆ ಇದೆ.