Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ನ್ಯಾಯ - ನ್ಯಾಯ 18

ನ್ಯಾಯ 18:7-24

Help us?
Click on verse(s) to share them!
7ಆ ಐದು ಮಂದಿ ಹೊರಟು ಲಯಿಷಿಗೆ ಬಂದು, ಅಲ್ಲಿನ ಜನರು ನಿರ್ಭೀತರಾಗಿ ಚೀದೋನ್ಯರಂತೆ ಸುಖ ಸಮಾಧಾನಗಳಿಂದ ಜೀವಿಸುತ್ತಾರೆ; ಅವರನ್ನು ಅಡಗಿಸುವ ಅಧಿಕಾರಿಗಳು ದೇಶದಲ್ಲಿಲ್ಲ; ಅವರು ಚೀದೋನ್ಯರಿಗೆ ದೂರವಾಗಿದ್ದು ಯಾರೊಡನೆಯೂ ಒಡನಾಟವಿಲ್ಲದವರು ಎಂಬುದನ್ನು ತಿಳಿದುಕೊಂಡು
8ಹಿಂದಿರುಗಿ ಚೊರ್ಗಾ, ಎಷ್ಟಾವೋಲ್ ಎಂಬ ಊರುಗಳಲ್ಲಿರುವ ತಮ್ಮ ಬಂಧುಗಳ ಬಳಿಗೆ ಬಂದರು. ಅವರ ಬಂಧುಗಳು, “ನೀವು ಯಾವ ವರ್ತಮಾನ ತಂದಿದ್ದೀರಿ” ಎಂದು ಅವರನ್ನು ಕೇಳಲು
9ಅವರು, “ಏಳಿರಿ, ಅವರಿಗೆ ವಿರೋಧವಾಗಿ ಯುದ್ಧಕ್ಕೆ ಹೋಗೋಣ. ನಾವು ಆ ದೇಶವನ್ನು ನೋಡಿದೆವು; ಅದು ಬಹು ಉತ್ತಮದೇಶ. ನೀವು ಸುಮ್ಮನೆ ಕುಳಿತುಕೊಳ್ಳುವುದೇಕೆ? ತಡಮಾಡದೆ ಹೊರಡಿರಿ; ಆ ದೇಶವನ್ನು ಸ್ವಾಧೀನಪಡಿಸಿಕೊಳ್ಳೋಣ.
10ನೀವು ಅಲ್ಲಿಗೆ ಹೋಗುವುದಾದರೆ ಅಲ್ಲಿನ ಜನರು ನಿರ್ಭಯದಿಂದ ಜೀವಿಸುವವರೆಂದೂ, ಅವರ ದೇಶವು ಬಹು ವಿಸ್ತಾರವಾಗಿದೆ ಎಂದೂ ತಿಳಿದುಕೊಳ್ಳುವಿರಿ. ದೇವರು ಅದನ್ನು ನಿಮ್ಮ ಕೈಗೆ ಒಪ್ಪಿಸಿದ್ದಾನೆ; ಅದರಲ್ಲಿ ದೊರಕದಿರುವ ಪದಾರ್ಥಗಳು ಲೋಕದಲ್ಲಿ ಸಿಕ್ಕುವುದಿಲ್ಲ” ಅಂದರು.
11ಆಗ ಚೊರ್ಗಾ ಎಷ್ಟಾವೋಲ್ ಊರುಗಳಿಂದ ಆರುನೂರು ಮಂದಿ ದಾನ್ ಕುಲದವರು ಯುದ್ಧ ಸನ್ನದ್ಧರಾಗಿ ಹೊರಟು,
12ಗಟ್ಟಾಹತ್ತಿ ಯೆಹೂದದ ಕಿರ್ಯತ್ಯಾರೀಮಿನ ಬಳಿಯಲ್ಲಿ ಇಳಿದುಕೊಂಡರು. ಆದುದರಿಂದ ಆ ಸ್ಥಳಕ್ಕೆ ಇಂದಿನವರೆಗೂ ದಾನ್ಯರ ಪಾಳೆಯವೆಂಬ ಹೆಸರಿದೆ; ಅದು ಕಿರ್ಯತ್ಯಾರೀಮಿನ ಪಶ್ಚಿಮದಲ್ಲಿರುತ್ತದೆ.
13ಅವರು ಅಲ್ಲಿಂದ ಮುಂದೆ ಪ್ರಯಾಣಮಾಡಿ ಎಫ್ರಾಯೀಮ್ ಪರ್ವತಪ್ರದೇಶದಲ್ಲಿದ್ದ ಮೀಕನ ಮನೆಯ ಹತ್ತಿರ ಬಂದರು.
14ಆಗ ಲಯಿಷ್ ದೇಶವನ್ನು ಸಂಚರಿಸಿ ನೋಡುವುದಕ್ಕೆ ಹೋಗಿದ್ದ ಐದು ಮಂದಿ ತಮ್ಮ ಬಂಧುಗಳಿಗೆ, “ಈ ಗ್ರಾಮದಲ್ಲಿ ಒಂದು ಏಫೋದೂ, ದೇವತಾಪ್ರತಿಮೆಗಳೂ, ಕೆತ್ತನೆಯ ಮತ್ತು ಎರಕದ ವಿಗ್ರಹಗಳೂ ಇರುತ್ತವೆಂಬುದು ನಿಮಗೆ ಗೊತ್ತುಂಟೋ?
15ಈ ವಿಷಯದಲ್ಲಿ ಏನು ಮಾಡಬೇಕೆಂಬುದನ್ನು ಆಲೋಚಿಸಿರಿ” ಎಂದು ಹೇಳಿ ತಾವು ಅಲ್ಲಿಂದ ಮೀಕನ ಮನೆಯಲ್ಲಿದ್ದ ಆ ಯೌವನಸ್ಥನಾದ ಲೇವಿಯನ ಬಳಿಗೆ ಬಂದು ಅವನ ಕ್ಷೇಮಸಮಾಚಾರವನ್ನು ವಿಚಾರಿಸ ತೊಡಗಿದರು.
16ಇಷ್ಟರಲ್ಲಿ ಯುದ್ಧಸನ್ನದ್ಧರಾದ ಆರುನೂರು ಮಂದಿ ದಾನ್ಯರು ಬಂದು ಬಾಗಿಲಲ್ಲಿ ನಿಂತರು.
17ಯಾಜಕನೂ ಬಂದು ಇವರೊಡನೆ ಬಾಗಿಲಲ್ಲಿ ನಿಂತಿದ್ದಾಗ, ಆ ಐದು ಮಂದಿ ಮನೆಯನ್ನು ಹೊಕ್ಕು, ಕೆತ್ತನೆಯ ಮತ್ತು ಎರಕದ ವಿಗ್ರಹಗಳನ್ನೂ, ಏಫೋದನ್ನೂ, ದೇವತಾಪ್ರತಿಮೆಗಳನ್ನೂ ತೆಗೆದುಕೊಂಡರು.
18ಅವರು ಮೀಕನ ಮನೆಯನ್ನು ಹೊಕ್ಕು ಅವುಗಳನ್ನು ತೆಗೆದುಕೊಂಡು ಬರುವಾಗ ಯಾಜಕನು ಅದನ್ನು ಕಂಡು ಅವರಿಗೆ, “ನೀವು ಮಾಡಿದ್ದೇನು” ಅಂದನು.
19ಅವರು ಅವನಿಗೆ, “ಸುಮ್ಮನಿರು; ಬಾಯಿ ಮುಚ್ಚಿಕೊಂಡು; ನಮ್ಮ ಜೊತೆಯಲ್ಲಿ ಬಂದು ನಮಗೆ ತಂದೆಯೂ, ಯಾಜಕನೂ ಆಗಿರು. ಒಂದು ಮನೆಗೆ ಯಾಜಕನಾಗಿರುವುದು ಉತ್ತಮವೋ ಅಥವಾ ಇಸ್ರಾಯೇಲ್ಯರ ಒಂದು ಕುಲಕ್ಕೂ, ಗೋತ್ರಕ್ಕೂ ಯಾಜಕನಾಗಿರುವುದು ಉತ್ತಮವೋ?” ಎಂದು ಕೇಳಿದರು.
20ಯಾಜಕನು ಈ ಮಾತನ್ನು ಕೇಳಿ ಸಂತೋಷಪಟ್ಟು ಏಫೋದನ್ನೂ ದೇವತಾಪ್ರತಿಮೆಗಳನ್ನೂ, ಕೆತ್ತನೆಯ ವಿಗ್ರಹವನ್ನೂ, ತೆಗೆದುಕೊಂಡು ಅವರ ಬಳಿಗೆ ಬಂದನು.
21ತರುವಾಯ ಅವರು ತಮ್ಮ ಹೆಂಡತಿ ಮಕ್ಕಳನ್ನೂ, ಕುರಿದನ ಮೊದಲಾದ ಸೊತ್ತನ್ನೂ ಮುಂದಾಗಿ ಕಳುಹಿಸಿ ತಾವು ಹಿಂದಿನಿಂದ ಹೊರಟರು.
22ಅವರು ಮೀಕನ ಮನೆಯಿಂದ ದೂರವಾದ ಮೇಲೆ ಮೀಕನೂ ಅವನ ನೆರೆಹೊರೆಯವರೆಲ್ಲರೂ ದಾನ್ಯರನ್ನು ಹಿಂದಟ್ಟಿ
23ಅವರ ಸಮೀಪಕ್ಕೆ ಹೋಗಿ ಅವರನ್ನು ಕೂಗಿದರು. ದಾನ್ಯರು ಹಿಂದಿರುಗಿ ನೋಡಿ ಮೀಕನಿಗೆ, “ನಿನಗೇನಾಯಿತು? ಗುಂಪನ್ನು ಕೂಡಿಸಿಕೊಂಡು ಬಂದದ್ದೇಕೆ” ಎಂದು ಕೇಳಲು
24ಅವನು, “ನೀವು ಯಾಜಕನನ್ನೂ ನಾವು ಮಾಡಿಸಿಕೊಂಡ ದೇವರುಗಳನ್ನೂ ಅಪಹರಿಸಿಕೊಂಡಿದ್ದೀರಿ, ನನಗೆ ಇನ್ನೇನಿದೆ; ಹೀಗಿರಲಾಗಿ ನಿನಗೇನಾಯಿತೆಂದು ನೀವು ನನ್ನನ್ನು ಕೇಳುವುದು ಹೇಗೆ?” ಅಂದನು.

Read ನ್ಯಾಯ 18ನ್ಯಾಯ 18
Compare ನ್ಯಾಯ 18:7-24ನ್ಯಾಯ 18:7-24