Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಕೀರ್ತ - ಕೀರ್ತ 88

ಕೀರ್ತ 88:1-17

Help us?
Click on verse(s) to share them!
1ಹಾಡು; ಕೋರಹೀಯರ ಕೀರ್ತನೆ; ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಮಹಲಾತ್ ಎಂಬ ರಾಗದ ಪ್ರಕಾರ ಹಾಡತಕ್ಕದ್ದು; ಜೇರಹ ಕುಲದವನಾದ ಹೇಮಾನನ ಪದ್ಯ. ಯೆಹೋವನೇ, ನನ್ನನ್ನು ರಕ್ಷಿಸುವ ದೇವರೇ, ಹಗಲಿರುಳು ನಿನಗೆ ಮೊರೆಯಿಡುತ್ತೇನೆ.
2ನನ್ನ ಪ್ರಾರ್ಥನೆಯು ನಿನ್ನ ಸನ್ನಿಧಿಯನ್ನು ಮುಟ್ಟಲಿ; ಕಿವಿಗೊಟ್ಟು ನನ್ನ ಕೂಗನ್ನು ಕೇಳು.
3ನನ್ನ ಜೀವವು ಕಷ್ಟಗಳಿಂದ ತುಂಬಿಹೋಯಿತು; ನನ್ನ ಪ್ರಾಣವು ಪಾತಾಳಕ್ಕೆ ಹತ್ತಿರವಾಯಿತು.
4ಸಮಾಧಿಯಲ್ಲಿ ಸೇರುವವರೊಳಗೆ ಎಣಿಸಲ್ಪಟ್ಟಿದ್ದೇನೆ; ನಿತ್ರಾಣ ಮನುಷ್ಯನಂತಿದ್ದೇನೆ.
5ಸತ್ತವನ ಹಾಗೆ ನನ್ನನ್ನು ಹೊರಗೆ ಹಾಕಿದ್ದಾರೆ; ಹತನಾದವನಂತೆ ಸಮಾಧಿಯಲ್ಲಿ ಬಿದ್ದಿದ್ದೇನೆ. ಹತರಾದವರು ನಿನ್ನ ಪರಿಪಾಲನೆ ಇಲ್ಲದವರು; ಅಂಥವರನ್ನು ನೀನು ನೆನಪು ಮಾಡಿಕೊಳ್ಳುವುದಿಲ್ಲ.
6ಅಧೋಲೋಕದಲ್ಲಿಯೂ, ಗಾಢಾಂಧಕಾರದಲ್ಲಿಯೂ, ಅಗಾಧ ಸ್ಥಳದಲ್ಲಿಯೂ ನನ್ನನ್ನು ತಳ್ಳಿಬಿಟ್ಟಿದ್ದಿ.
7ನಿನ್ನ ಕೋಪಭಾರವು ನನ್ನನ್ನು ಕುಗ್ಗಿಸಿಬಿಟ್ಟಿದೆ; ನಿನ್ನ ಎಲ್ಲಾ ತೆರೆಗಳಿಂದ ನನ್ನನ್ನು ಬಾಧಿಸಿದ್ದಿ. ಸೆಲಾ
8ನನ್ನ ಆಪ್ತರು ನನ್ನನ್ನು ನೋಡಿ ಅಸಹ್ಯಪಟ್ಟರು, ನನ್ನನ್ನು ಅವರು ಹೇಸಿ ಬಿಟ್ಟುಹೋಗುವಂತೆ ಮಾಡಿದ್ದೀ; ಸಿಕ್ಕಿಬಿಟ್ಟಿದ್ದೇನೆ, ಬಿಡಿಸಿಕೊಳ್ಳಲಾರೆನು.
9ಬಾಧೆಯಿಂದ ನನ್ನ ಕಣ್ಣುಗಳು ಮೊಬ್ಬಾಗಿ ಹೋಗಿವೆ. ಯೆಹೋವನೇ, ಹಗಲೆಲ್ಲಾ ಕೈಚಾಚಿ ನಿನಗೆ ಮೊರೆಯಿಡುತ್ತೇನೆ.
10ನೀನು ಸತ್ತವರಿಗೆ ಅದ್ಭುತಕಾರ್ಯಗಳನ್ನು ತೋರಿಸುವಿಯೋ? ಪ್ರೇತಗಳು ಎದ್ದು ನಿನ್ನನ್ನು ಕೊಂಡಾಡುವವೋ? ಸೆಲಾ
11ಸಮಾಧಿಯಲ್ಲಿ ನಿನ್ನ ಕೃಪೆಯನ್ನೂ, ನಾಶನಲೋಕದಲ್ಲಿ ನಿನ್ನ ಸತ್ಯತೆಯನ್ನು ಸಾರುವುದುಂಟೋ?
12ಕತ್ತಲೆಯ ಲೋಕದಲ್ಲಿ ನಿನ್ನ ಮಹತ್ಕಾರ್ಯಗಳೂ, ಮರೆಯುವ ದೇಶದಲ್ಲಿ ನಿನ್ನ ನೀತಿಯು ತಿಳಿಯಲ್ಪಡುವವೋ?
13ನಾನಾದರೋ ಯೆಹೋವನೇ, ನಿನಗೆ ಮೊರೆಯಿಡುತ್ತೇನೆ; ಮುಂಜಾನೆಯಲ್ಲಿ ನನ್ನ ವಿಜ್ಞಾಪನೆಯು ನಿನ್ನ ಮುಂದೆ ಬರುವುದು.
14ಯೆಹೋವನೇ, ನನ್ನ ಪ್ರಾಣವನ್ನೇಕೆ ತಳ್ಳಿಬಿಟ್ಟಿ? ನಿನ್ನ ಮುಖವನ್ನು ಮರೆಮಾಡಿದ್ದೇಕೆ?
15ಯೌವನಾರಭ್ಯ ಕುಗ್ಗಿದವನೂ, ಮೃತಪ್ರಾಯನೂ, ನಿನ್ನ ಗದರಿಕೆಯಿಂದ ದೆಸೆಗೆಟ್ಟವನೂ ಆಗಿದ್ದೇನಲ್ಲಾ.
16ನಿನ್ನ ಕೋಪಜ್ವಾಲೆಯು ನನ್ನನ್ನು ಕವಿದಿದೆ; ನಿನ್ನಿಂದುಂಟಾದ ದಿಗಿಲಿನಿಂದ ಹಾಳಾದೆನು.
17ಅವು ದಿನವೆಲ್ಲಾ ನೀರಿನಂತೆ ನನ್ನನ್ನು ಆವರಿಸಿಕೊಂಡಿವೆ; ಒಟ್ಟುಗೂಡಿ ನನ್ನನ್ನು ಸುತ್ತಿಬಿಟ್ಟಿವೆ.

Read ಕೀರ್ತ 88ಕೀರ್ತ 88
Compare ಕೀರ್ತ 88:1-17ಕೀರ್ತ 88:1-17