Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಕೀರ್ತ - ಕೀರ್ತ 7

ಕೀರ್ತ 7:1-11

Help us?
Click on verse(s) to share them!
1ಬೆನ್ಯಾಮೀನ್ ಕುಲದವನಾದ ಕೂಷನ ಮಾತುಗಳ ವಿಷಯದಲ್ಲಿ ದಾವೀದನು ಯೆಹೋವನಿಗಾಗಿ ಹಾಡಿದ ಗೀತೆ. ಯೆಹೋವನೇ, ನನ್ನ ದೇವರೇ, ನಿನ್ನ ಮೊರೆಹೊಕ್ಕಿದ್ದೇನೆ; ಬೆನ್ನಟ್ಟುವವರೆಲ್ಲರಿಂದ ತಪ್ಪಿಸಿ ನನ್ನನ್ನು ಕಾಪಾಡು.
2ಇಲ್ಲವಾದರೆ ನನಗೆ ರಕ್ಷಕನಿಲ್ಲವೆಂದು ತಿಳಿದು, ಶತ್ರುವು ಸಿಂಹದಂತೆ ಮೇಲೆ ಬಿದ್ದು ನನ್ನನ್ನು ಹರಿದುಬಿಟ್ಟಾನು.
3ಯೆಹೋವನೇ, ನನ್ನ ದೇವರೇ, ನಾನು ಕೈಗಳಲ್ಲಿ ಅನ್ಯಾಯವುಳ್ಳವನೂ,
4ಮಿತ್ರದ್ರೋಹಿಯೂ ಆಗಿದ್ದರೆ ಶತ್ರುವು ಹಿಂದಟ್ಟಿ ಬಂದು, ನನ್ನನ್ನು ಹಿಡಿದು, ನೆಲಕ್ಕೆ ಕೆಡವಿ ತುಳಿಯಲಿ;
5ನನ್ನ ಮಾನವನ್ನು ಮಣ್ಣುಪಾಲು ಮಾಡಲಿ. ನಾನಂಥವನಲ್ಲ; ನಿಷ್ಕಾರಣ ವೈರಿಯನ್ನು ರಕ್ಷಿಸಿದೆನಲ್ಲ. ಸೆಲಾ
6ಯೆಹೋವನೇ, ನ್ಯಾಯಸ್ಥಾಪಕನೇ, ನನಗೋಸ್ಕರ ಎಚ್ಚರವಾಗು. ಮಹಾಕೋಪದಿಂದ ಎದ್ದುಬಂದು ನನ್ನ ವಿರೋಧಿಗಳ ಕ್ರೋಧವನ್ನು ಭಂಗಪಡಿಸು.
7ಎಲ್ಲಾ ಜನಾಂಗಗಳು ನಿನ್ನ ಸುತ್ತಲು ಸಭೆಯಾಗಿ ಕೂಡಿರುವಲ್ಲಿ ನೀನು ಪುನಃ ಆರೋಹಣಮಾಡು.
8ಯೆಹೋವನು ಎಲ್ಲಾ ಜನಾಂಗಳಿಗೂ ನ್ಯಾಯತೀರಿಸುವವನಾಗಿದ್ದಾನೆ. ಯೆಹೋವನೇ, ನಿರಪರಾಧಿಯೂ, ನೀತಿವಂತನೂ ಆಗಿರುವ ನನಗೋಸ್ಕರ ನ್ಯಾಯತೀರಿಸು.
9ಮನುಷ್ಯರ ಹೃದಯವನ್ನೂ ಮತ್ತು ಅಂತರಿಂದ್ರಿಯವನ್ನೂ ಪರಿಶೋಧಿಸುವ ನೀತಿಸ್ವರೂಪನಾದ ದೇವರೇ, ದುಷ್ಟರ ಕೆಟ್ಟತನವು ಇಲ್ಲದೆ ಹೋಗುವಂತೆ ಮಾಡು; ನೀತಿವಂತರನ್ನು ದೃಢಪಡಿಸು.
10ನನ್ನನ್ನು ರಕ್ಷಿಸುವ ಗುರಾಣಿಯು ದೇವರೇ; ಆತನು ಯಥಾರ್ಥರನ್ನು ಕಾಪಾಡುತ್ತಾನೆ.
11ದೇವರು ನ್ಯಾಯಕ್ಕೆ ಸರಿಯಾಗಿ ತೀರ್ಪುಕೊಡುವವನು; ಆತನು ಯಾವಾಗಲೂ ದುಷ್ಟರ ವಿಷಯದಲ್ಲಿ ಕೋಪವುಳ್ಳವನು.

Read ಕೀರ್ತ 7ಕೀರ್ತ 7
Compare ಕೀರ್ತ 7:1-11ಕೀರ್ತ 7:1-11