Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಕೀರ್ತ - ಕೀರ್ತ 69

ಕೀರ್ತ 69:3-28

Help us?
Click on verse(s) to share them!
3ಮೊರೆಯಿಟ್ಟು ಬೇಸತ್ತು ಹೋಗಿದ್ದೇನೆ; ಗಂಟಲು ಒಣಗಿಹೋಯಿತು. ನನ್ನ ದೇವರನ್ನು ನಿರೀಕ್ಷಿಸುತ್ತಾ ಕಣ್ಣುಗಳು ಕ್ಷೀಣಿಸುತ್ತವೆ.
4ನಿಷ್ಕಾರಣ ದ್ವೇಷಿಗಳು ನನ್ನ ತಲೆಗೂದಲುಗಳಿಗಿಂತ ಹೆಚ್ಚಾಗಿದ್ದಾರೆ; ನಿರಾಕಾರಣವಾಗಿ ನನ್ನನ್ನು ಮುಗಿಸಿಬಿಡಬೇಕೆಂದಿರುವ ವೈರಿಗಳು ಬಲಿಷ್ಠರಾಗಿದ್ದಾರೆ. ನಾನು ಅಪಹರಿಸದಿದ್ದರೂ ನನ್ನಿಂದ ದಂಡ ತೆಗೆದುಕೊಂಡರಲ್ಲಾ.
5ದೇವರೇ, ನನ್ನ ಮೂರ್ಖತನವು ನಿನಗೆ ಗೊತ್ತು; ನನ್ನ ಅಪರಾಧಗಳು ನಿನಗೆ ಮರೆಯಾಗಿಲ್ಲ.
6ಸೇನಾಧೀಶ್ವರನೇ, ಯೆಹೋವನೇ, ನಿನ್ನನ್ನು ನಂಬಿದವರಿಗೆ ನನ್ನಿಂದ ನಿರಾಶೆಯಾಗದಿರಲಿ; ಇಸ್ರಾಯೇಲರ ದೇವರೇ, ನಿನ್ನ ದರ್ಶನವನ್ನು ಬಯಸುವವರು ನನ್ನಿಂದ ಅಪಮಾನಕ್ಕೆ ಗುರಿಯಾಗದಿರಲಿ.
7ನಿನಗೋಸ್ಕರವಾಗಿ ನಿಂದೆಗೆ ಒಳಗಾದೆನಲ್ಲಾ; ನಾಚಿಕೆಯು ನನ್ನ ಮುಖವನ್ನು ಕವಿದಿದೆ.
8ನನ್ನ ಅಣ್ಣತಮ್ಮಂದಿರಿಗೆ ಅಪರಿಚಿತನಂತಾದೆನು; ಒಡಹುಟ್ಟಿದವರಿಗೆ ಪರದೇಶಿಯಂತೆ ಇದ್ದೇನೆ.
9ನಿನ್ನ ಆಲಯದ ಅಭಿಮಾನವು ನನ್ನನ್ನು ಬೆಂಕಿಯಂತೆ ದಹಿಸಿದೆ. ನಿನ್ನನ್ನು ದೂಷಿಸುವವರ ದೂಷಣೆಗಳು ನನ್ನ ಮೇಲೆ ಬಂದಿವೆ.
10ನಾನು ದುಃಖದಿಂದ ಅತ್ತು ಉಪವಾಸ ಮಾಡಿ ನನ್ನ ಆತ್ಮವನ್ನು ಕುಗ್ಗಿಸಿಕೊಂಡಿದ್ದೇನೆ, ಪರಿಹಾಸ್ಯಕ್ಕೆ ಕಾರಣವಾಯಿತು.
11ನಾನು ಗೋಣಿತಟ್ಟು ಕಟ್ಟಿಕೊಂಡದ್ದು, ಅವರ ಗಾದೆಗೆ ಆಸ್ಪದವಾಯಿತು.
12ಊರ ಬಾಗಿಲಲ್ಲಿ ಕುಳಿತುಕೊಳ್ಳುವವರ ಆಡು ಮಾತಿಗೆ ಗುರಿಯಾಗಿದ್ದೇನೆ. ಕುಡುಕರು ನನ್ನ ವಿಷಯವನ್ನು ಹಾಡಿ ಪರಿಹಾಸ್ಯ ಮಾಡುತ್ತಾರೆ.
13ಯೆಹೋವನೇ, ನಾನಾದರೋ ನಿನಗೆ ಮೊರೆಯಿಟ್ಟಿದ್ದೇನೆ; ಇದು ನಿನ್ನ ಪ್ರಸನ್ನತೆಗೆ ಸಕಾಲ. ಪ್ರೇಮಪೂರ್ಣನಾದ ದೇವನೇ, ಸತ್ಯವಂತನಾದ ರಕ್ಷಕನೇ, ಸದುತ್ತರವನ್ನು ದಯಪಾಲಿಸು.
14ನಾನು ಕೆಸರಿನಲ್ಲಿ ಮುಳುಗಿಹೋಗದಂತೆ ಮೇಲೆತ್ತು; ವೈರಿಗಳ ಕೈಯೊಳಗಿಂದ ಬಿಡಿಸು; ಮಹಾಜಲರಾಶಿಯಿಂದ ಎಳೆದುಕೋ.
15ಪ್ರವಾಹವು ನನ್ನನ್ನು ಬಡಕೊಂಡು ಹೋಗದಿರಲಿ; ಅಗಾಧವು ನನ್ನನ್ನು ಒಳಗೆ ಎಳೆದುಕೊಳ್ಳದಿರಲಿ; ಪಾತಾಳವು ನನ್ನನ್ನು ನುಂಗದಿರಲಿ.
16ಯೆಹೋವನೇ, ನನ್ನ ಮೊರೆಯನ್ನು ಲಾಲಿಸು; ನಿನ್ನ ಕೃಪೆಯು ಶುಭಕರವಾಗಿದೆಯಲ್ಲಾ. ಕರುಣಾನಿಧಿಯೇ, ನನ್ನನ್ನು ಕಟಾಕ್ಷಿಸು.
17ನಿನ್ನ ದಾಸನಿಗೆ ವಿಮುಖನಾಗಬೇಡ, ಇಕ್ಕಟ್ಟಿನಲ್ಲಿದ್ದೇನೆ, ತಡಮಾಡದೆ ಸಹಾಯಮಾಡು.
18ಸಮೀಪಿಸಿ ನನ್ನ ಪ್ರಾಣವನ್ನು ವಿಮೋಚಿಸು. ಶತ್ರು ನಿಮಿತ್ತವಾಗಿ ನನ್ನನ್ನು ರಕ್ಷಿಸು.
19ನನಗುಂಟಾದ ನಿಂದೆ, ಲಜ್ಜೆ, ಅಪಮಾನ ಇವು ನಿನಗೇ ಗೊತ್ತು; ನನ್ನ ವಿರೋಧಿಗಳು ನಿನಗೆ ಮರೆಯಾಗಿಲ್ಲವಲ್ಲಾ.
20ನಿಂದೆಯಿಂದ ನಿರಾಶೆಗೊಂಡು ಕುಂದಿಹೋಗಿದ್ದೇನೆ. ಕರುಣಾಳುಗಳನ್ನು ನಿರೀಕ್ಷಿಸಿದೆ; ದೊರೆಯಲಿಲ್ಲ. ಸಂತೈಸುವವರನ್ನು ಹಾರೈಸಿದೆ; ಸಿಕ್ಕಲಿಲ್ಲ.
21ನನಗೆ ಉಣ್ಣುವುದಕ್ಕೆ ಕಹಿಯಾದ ವಸ್ತುವನ್ನೂ, ಬಾಯಾರಿದಾಗ, ಹುಳಿ ದ್ರಾಕ್ಷಾರಸವನ್ನೂ ಕೊಟ್ಟರು.
22ಅವರ ಸಂಪತ್ತು ಅವರಿಗೆ ಉರುಲಾಗಲಿ; ನಿಶ್ಚಿಂತರಾಗಿರುವಾಗಲೇ ಅದು ಅವರಿಗೆ ಬೋನಾಗಲಿ.
23ಅವರ ಕಣ್ಣು ಮೊಬ್ಬಾಗಿ ಕಾಣದೆ ಹೋಗಲಿ; ಅವರ ನಡುವು ಯಾವಾಗಲೂ ನಡಗುತ್ತಿರಲಿ.
24ನಿನ್ನ ರೌದ್ರವನ್ನು ಅವರ ಮೇಲೆ ಸುರಿದುಬಿಡು; ನಿನ್ನ ಕೋಪಾಗ್ನಿಯು ಅವರನ್ನು ದಹಿಸಲಿ.
25ಅವರ ಪಾಳೆಯವು ಹಾಳುಬೀಳಲಿ; ಅವರ ನಿವಾಸಗಳು ಜನಶೂನ್ಯವಾಗಲಿ.
26ನೀನು ಹೊಡೆದವನನ್ನು ಅವರು ಹಿಂಸಿಸುತ್ತಾರೆ; ನೀನು ಗಾಯಮಾಡಿದವರ ನೋವು ಅವರ ಪರಿಹಾಸ್ಯಕ್ಕೆ ಕಾರಣವಾಗಿದೆ.
27ಅವರ ಅಪರಾಧಗಳು ಒಂದೊಂದಾಗಿ ಹೆಚ್ಚುತ್ತಾ ಬರಲಿ. ನಿನ್ನ ನೀತಿಯಲ್ಲಿ ಅವರಿಗೆ ಪಾಲುಕೊಡಬೇಡ.
28ಜೀವಿತರ ಪಟ್ಟಿಯಿಂದ ಅವರ ಹೆಸರು ತೆಗೆದು ಹಾಕು, ಸದ್ಭಕ್ತರ ಹೆಸರಿನ ಸಂಗಡ ಅವರ ಹೆಸರು ಬರೆಯಲ್ಪಡದಿರಲಿ.

Read ಕೀರ್ತ 69ಕೀರ್ತ 69
Compare ಕೀರ್ತ 69:3-28ಕೀರ್ತ 69:3-28