Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಕೀರ್ತ - ಕೀರ್ತ 68

ಕೀರ್ತ 68:20-33

Help us?
Click on verse(s) to share them!
20ನಮ್ಮ ದೇವರು ನಮ್ಮನ್ನು ವಿಮೋಚಿಸುವುದಕ್ಕೋಸ್ಕರ ದೇವರಾಗಿದ್ದಾನೆ; ಕರ್ತನಾದ ಯೆಹೋವನು ಮರಣಕ್ಕೆ ತಪ್ಪಿಸ ಶಕ್ತನಾಗಿದ್ದಾನೆ.
21ಆಹಾ, ಆತನು ತನ್ನ ವೈರಿಗಳ ಶಿರಸ್ಸುಗಳನ್ನೂ, ಸ್ವೇಚ್ಛೆಯಿಂದ ಪಾಪದಲ್ಲಿ ಪ್ರವರ್ತಿಸುವವರ ತುಂಬುಗೂದಲಿನ ತಲೆಗಳನ್ನೂ ಒಡೆದು ನಿರ್ಮೂಲ ಮಾಡುವನು.
22ಕರ್ತನು, “ನಾನು ಅವರನ್ನು ಬಾಷಾನಿನಿಂದಲೂ, ಸಮುದ್ರ ತಳದಿಂದಲೂ ಹಿಡಿದು ತರುವೆನು.
23ಆಗ ನೀನು ನಿನ್ನ ಶತ್ರುಗಳ ರಕ್ತದಲ್ಲಿ ಕಾಲಾಡಿಸುವಿ. ನಿನ್ನ ನಾಯಿಗಳ ನಾಲಿಗೆಗಳಿಗೆ ವೈರಿಗಳ ದೇಹದಲ್ಲಿ ಪಾಲುಸಿಕ್ಕುವುದು” ಎಂದು ನುಡಿದನು.
24ದೇವರೇ, ನಿನ್ನ ಮೆರವಣಿಗೆ ಶೋಭಿಸುತ್ತದೆ; ನನ್ನ ಅರಸನಾದ ದೇವರು ತನ್ನ ಪರಿಶುದ್ಧಾಲಯಕ್ಕೆ ಮೆರವಣಿಗೆಯಾಗಿ ಪ್ರವೇಶಿಸುತ್ತಾನೆ.
25ಮುಂಭಾಗದಲ್ಲಿ ಹಾಡುವವರೂ, ಹಿಂಭಾಗದಲ್ಲಿ ವಾದ್ಯಬಾರಿಸುವವರೂ, ಸುತ್ತಲೂ ದಮ್ಮಡಿಬಡಿಯುವ ಸ್ತ್ರೀಯರೂ ಹೋಗುತ್ತಾ,
26“ಇಸ್ರಾಯೇಲ್ ವಂಶಸ್ಥರೇ, ಸಮೂಹವಾಗಿ ದೇವರಾದ ಕರ್ತನನ್ನು ಕೊಂಡಾಡಿರಿ” ಎಂದು ಹಾಡುತ್ತಾರೆ.
27ಅಲ್ಲಿ ಎಲ್ಲರಿಗೆ ನಾಯಕರಾಗಿರುವ ಬೆನ್ಯಾಮೀನ್ ಎಂಬ ಸಣ್ಣ ಗೋತ್ರದವರೂ, ಗುಂಪಾಗಿ ಬರುವ ಯೆಹೂದ ಕುಲದ ಪ್ರಭುಗಳೂ, ಜೆಬುಲೂನ್, ನಫ್ತಾಲಿ ಗೋತ್ರಗಳ ಪ್ರಧಾನರೂ ಇದ್ದಾರೆ.
28ದೇವರೇ, ನಿನ್ನ ಪ್ರತಾಪವನ್ನು ಆಜ್ಞಾಪಿಸು. ನಿನ್ನ ಮಂದಿರದಲ್ಲಿ ಆಸೀನನಾಗಿ ನಮಗೋಸ್ಕರ ಮಹತ್ಕಾರ್ಯಗಳನ್ನು ನಡೆಸಿದ ದೇವರೇ, ನಿನ್ನ ಬಲವನ್ನು ಪ್ರಕಟಿಸು.
29ಅರಸುಗಳು ಯೆರೂಸಲೇಮ್ ಪಟ್ಟಣಕ್ಕೆ ನಿನಗೋಸ್ಕರ ಕಾಣಿಕೆಗಳನ್ನು ತಂದು ಸಮರ್ಪಿಸಲಿ.
30ಆಪಿನೊಳಗೆ ವಾಸಿಸುವ ನೀರಾನೆ, ಕರುಗಳ ಸಹಿತವಾದ ಹೋರಿಗಳ ಗುಂಪು, ಇವುಗಳಂತಿರುವ ಶತ್ರುಜನಾಂಗಗಳನ್ನು ಬೆದರಿಸು. ಅವು ಬೆಳ್ಳಿಗಟ್ಟಿಗಳನ್ನು ತಂದು ನಿನಗೆ ಅಡ್ಡಬೀಳಲಿ. ಯುದ್ಧಾಸಕ್ತ ಜನಾಂಗಗಳನ್ನು ಚದುರಿಸಿಬಿಡು.
31ಐಗುಪ್ತ ದೇಶದಿಂದ ರಾಯಭಾರಿಗಳು ಬರುವರು; ಕೂಷ್ ದೇಶದವರ ಕೈಗಳು ದೇವರಿಗೆ ಕಾಣಿಕೆಗಳನ್ನು ನೀಡಲಿಕ್ಕೆ ಅವಸರಪಡುವವು.
32ಭೂರಾಜ್ಯಗಳೇ, ದೇವರಿಗೆ ಗಾಯನಮಾಡಿರಿ; ಕರ್ತನನ್ನು ಸಂಕೀರ್ತಿಸಿರಿ. ಸೆಲಾ
33ಅನಾದಿಕಾಲದಿಂದಿರುವ ಮಹೋನ್ನತಾಕಾಶದಲ್ಲಿ ವಾಹನಾರೂಢನಾಗಿ ಇರುವಾತನನ್ನು ಸ್ತುತಿಸಿರಿ. ಕೇಳಿರಿ; ಆತನ ಗರ್ಜನೆಯು ಮಹಾಘೋರವಾದದ್ದು.

Read ಕೀರ್ತ 68ಕೀರ್ತ 68
Compare ಕೀರ್ತ 68:20-33ಕೀರ್ತ 68:20-33