1ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು. ದಾವೀದನ ಕೀರ್ತನೆ; ಹಾಡು. ದೇವರು ಎದ್ದು ಹೊರಡುವಾಗ, ಆತನ ವೈರಿಗಳು ಚದರಿಹೋಗಲಿ; ಆತನ ಹಗೆಗಾರರು ಆತನ ಎದುರಿನಿಂದ ಓಡಿಹೋಗಲಿ.
2ಹೊಗೆಯು ಗಾಳಿಯಿಂದ ಹೇಗೋ, ಹಾಗೆ ಅವರು ಆತನಿಂದ ಹಾರಿಹೋಗಲಿ; ಬೆಂಕಿಯ ಮುಂದೆ ಮೇಣವು ಕರಗಿ ಲಯವಾಗಿ ಹೋಗುವಂತೆ, ದೇವರ ಎದುರಿನಲ್ಲಿ ದುಷ್ಟರು ನಾಶವಾಗಿ ಹೋಗಲಿ.
3ನೀತಿವಂತರಾದರೋ ದೇವರ ಸನ್ನಿಧಿಯಲ್ಲಿ ಹರ್ಷಿಸಲಿ; ಉಲ್ಲಾಸಿಸಲಿ, ಆನಂದಧ್ವನಿಮಾಡಲಿ.
4ದೇವರಿಗೆ ಗಾಯನಮಾಡಿರಿ; ಆತನ ನಾಮವನ್ನು ಭಜಿಸಿರಿ; ಅರಣ್ಯದಲ್ಲಿ ಸವಾರಿಮಾಡುತ್ತಾ ಬರುವಾತನಿಗೆ ರಾಜಮಾರ್ಗವನ್ನು ಸಿದ್ಧಮಾಡಿರಿ. ಆತನ ನಾಮಧೇಯ ಯಾಹು; ಆತನ ಸನ್ನಿಧಿಯಲ್ಲಿ ಉಲ್ಲಾಸಿಸಿರಿ.
5ಪರಿಶುದ್ಧ ವಾಸಸ್ಥಾನದಲ್ಲಿರುವ ದೇವರು ದಿಕ್ಕಿಲ್ಲದವರಿಗೆ ತಂದೆಯೂ, ವಿಧವೆಯರಿಗೆ ಸಹಾಯಕನೂ ಆಗಿದ್ದಾನೆ.