Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಕೀರ್ತ - ಕೀರ್ತ 18

ಕೀರ್ತ 18:16-36

Help us?
Click on verse(s) to share them!
16ಆತನು ಮೇಲಣ ಲೋಕದಿಂದ ಕೈಚಾಚಿ, ನನ್ನನ್ನು ಹಿಡಿದು, ಮಹಾಜಲರಾಶಿಗಳೊಳಗಿಂದ ಎಳೆದನು.
17ನನಗಿಂತ ಬಲಿಷ್ಠರೂ, ಪುಷ್ಟರೂ ಆಗಿ ದ್ವೇಷಿಸುತ್ತಿದ್ದ ಶತ್ರುಗಳಿಂದ ನನ್ನನ್ನು ಬಿಡಿಸಿ ರಕ್ಷಿಸಿದನು.
18ಅವರು ನನ್ನ ವಿಪತ್ಕಾಲದಲ್ಲಿ ನನ್ನ ಮೇಲೆ ಬಿದ್ದರು, ಆಗ ಯೆಹೋವನು ನನಗೆ ಉದ್ಧಾರಕನಾದನು.
19ಆತನು ನನ್ನನ್ನು ಬಿಡಿಸಿ ವಿಶಾಲ ಸ್ಥಳದಲ್ಲಿ ಸೇರಿಸಿದನು; ನನ್ನನ್ನು ಮೆಚ್ಚಿ ರಕ್ಷಿಸಿದನು.
20ಯೆಹೋವನು ನನ್ನ ನೀತಿಗೆ ಸರಿಯಾಗಿ ಮೇಲನ್ನು ಮಾಡಿದನು, ನನ್ನ ಕೈಗಳ ಶುದ್ಧತ್ವಕ್ಕೆ ತಕ್ಕಂತೆ ಪ್ರತಿಫಲವನ್ನು ಕೊಟ್ಟನು.
21ನಾನು ಯೆಹೋವನ ಮಾರ್ಗವನ್ನೇ ಅನುಸರಿಸಿದೆನಲ್ಲಾ; ನನ್ನ ದೇವರನ್ನು ಬಿಟ್ಟು ದುಷ್ಟನಾಗಲಿಲ್ಲವಲ್ಲಾ.
22ನಾನು ಆತನ ನೀತಿಯ ಆಜ್ಞೆಗಳನ್ನು ಯಾವಾಗಲೂ ನನ್ನ ಎದುರಿನಲ್ಲಿ ಇಟ್ಟುಕೊಂಡೆನು; ಆತನ ವಿಧಿಗಳನ್ನು ಅಲಕ್ಷ್ಯಮಾಡಲೇ ಇಲ್ಲ.
23ನಾನು ಆತನ ದೃಷ್ಟಿಯಲ್ಲಿ ನಿರ್ದೋಷಿಯು; ಪಾಪದಲ್ಲಿ ಬೀಳದಂತೆ ಜಾಗರೂಕತೆಯಿಂದ ನಡೆದುಕೊಂಡೆನು.
24ಆದುದರಿಂದ ನಾನು ನೀತಿವಂತನೂ, ನಿರಪರಾಧಿಯೂ ಎಂದು ನೋಡಿ, ಯೆಹೋವನು ತಕ್ಕ ಪ್ರತಿಫಲವನ್ನು ಕೊಟ್ಟನು.
25ನೀನು ಕೃಪೆಯುಳ್ಳವನಿಗೆ ಕೃಪಾವಂತನೂ, ದೋಷವಿಲ್ಲದವನಿಗೆ ನಿರ್ದೋಷಿಯೂ,
26ಶುದ್ಧನಿಗೆ ಪರಿಶುದ್ಧನೂ, ಮೂರ್ಖನಿಗೆ ವಕ್ರನೂ ಆಗಿರುವಿ.
27ದೀನರನ್ನು ಉದ್ಧರಿಸುವವನೂ, ಗರ್ವದ ಕಣ್ಣುಳ್ಳವರನ್ನು ತಗ್ಗಿಸಿಬಿಡುವವನೂ ನೀನಲ್ಲವೋ?
28ನೀನೇ ನನ್ನ ದೀಪವನ್ನು ಹೊತ್ತಿಸುವವನಲ್ಲವೇ; ನನ್ನ ದೇವರಾದ ಯೆಹೋವನು ನನಗೆ ಬೆಳಕನ್ನು ಕೊಟ್ಟು ಕತ್ತಲನ್ನು ಪರಿಹರಿಸುವವನು.
29ನಿನ್ನ ಬಲದಿಂದ ದಂಡಿನ ಮೇಲೆ ಬೀಳುವೆನು; ನನ್ನ ದೇವರ ಸಹಾಯದಿಂದ ಗೋಡೆಯನ್ನು ಹಾರುವೆನು.
30ದೇವರ ಮಾರ್ಗವು ಯಾವ ದೋಷವೂ ಇಲ್ಲದ್ದು; ಯೆಹೋವನ ವಚನವು ಶುದ್ಧವಾದದ್ದು. ಆತನು ಆಶ್ರಿತರೆಲ್ಲರಿಗೆ ಗುರಾಣಿಯಾಗಿದ್ದಾನೆ.
31ಯೆಹೋವನಲ್ಲದೆ ದೇವರು ಯಾರು? ನಮ್ಮ ದೇವರ ಹೊರತು ಶರಣನು ಎಲ್ಲಿ?
32ನನಗೆ ಶೌರ್ಯವೆಂಬ ನಡುಕಟ್ಟನ್ನು ಬಿಗಿಯುವವನೂ, ನನ್ನ ಮಾರ್ಗವನ್ನು ಸರಾಗ ಮಾಡುವವನೂ ದೇವರೇ.
33ನನ್ನ ಕಾಲನ್ನು ಜಿಂಕೆಯ ಕಾಲಿನಂತೆ ಚುರುಕು ಮಾಡುತ್ತಾನೆ; ನನ್ನನ್ನು ಉನ್ನತಪ್ರದೇಶಗಳಲ್ಲಿ ನಿಲ್ಲಿಸುತ್ತಾನೆ.
34ಆತನೇ ನನಗೆ ಯುದ್ಧವಿದ್ಯೆಯನ್ನು ಕಲಿಸಿದ್ದರಿಂದ ನಾನು ತಾಮ್ರದ ಬಿಲ್ಲನ್ನಾದರೂ ಉಪಯೋಗಿಸಬಲ್ಲೆನು.
35ನೀನೇ ನನಗೋಸ್ಕರ ಗುರಾಣಿಯನ್ನು ಹಿಡಿದು ರಕ್ಷಿಸಿದ್ದೀ. ನಿನ್ನ ಬಲಗೈ ನನಗೆ ಆಧಾರ; ನಿನ್ನ ಕೃಪಾಕಟಾಕ್ಷವು ನನಗೆ ದೊಡ್ಡಸ್ತಿಕೆಯನ್ನು ಉಂಟುಮಾಡಿದೆ.
36ನೀನು ನನ್ನ ಕಾಲುಗಳಿಗೆ ವಿಶಾಲ ಸ್ಥಳವನ್ನು ಕೊಟ್ಟಿದ್ದರಿಂದ ನನ್ನ ಪಾದಗಳು ಕದಲುವುದಿಲ್ಲ.

Read ಕೀರ್ತ 18ಕೀರ್ತ 18
Compare ಕೀರ್ತ 18:16-36ಕೀರ್ತ 18:16-36