Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಅ. ಕೃ. - ಅ. ಕೃ. 9

ಅ. ಕೃ. 9:28-38

Help us?
Click on verse(s) to share them!
28ಆ ಮೇಲೆ ಸೌಲನು ಯೆರೂಸಲೇಮಿನಲ್ಲಿದ್ದುಕೊಂಡು ಅವರಲ್ಲಿ ಬರುತ್ತಾ ಹೋಗುತ್ತಾ ಕರ್ತನ ಹೆಸರಿನಲ್ಲಿ ಧೈರ್ಯದಿಂದ ಬೋಧಿಸತೊಡಗಿದನು.
29ಮತ್ತು ಗ್ರೀಕ್ ಭಾಷೆಯನ್ನಾಡುವ ಯೆಹೂದ್ಯರ ಸಂಗಡ ಮಾತನಾಡಿ ತರ್ಕಮಾಡುತ್ತಿದ್ದನು. ಆದರೆ ಅವರು ಅವನನ್ನು ಕೊಲ್ಲುವುದಕ್ಕೆ ಪ್ರಯತ್ನ ಮಾಡುತ್ತಿದ್ದರು.
30ಇದು ಸಹೋದರರಿಗೆ ತಿಳಿದು ಬರಲು, ಅವರು ಅವನನ್ನು ಕೈಸರೈಯಕ್ಕೆ ಕರೆದುಕೊಂಡು ಹೋಗಿ, ಅಲ್ಲಿಂದ ತಾರ್ಸಕ್ಕೆ ಕಳುಹಿಸಿದರು.
31ಹೀಗಿರಲಾಗಿ ಯೂದಾಯ, ಗಲಿಲಾಯ, ಸಮಾರ್ಯ ಸೀಮೆಗಳಲ್ಲಿದ್ದ ಸಭೆಯು ಸಮಾಧಾನ ಹೊಂದಿತು; ಮತ್ತು ಭಕ್ತಿಯಲ್ಲಿ ಬೆಳೆದು ಕರ್ತನ ಭಯದಲ್ಲಿ ನಡೆದು, ಪವಿತ್ರಾತ್ಮನಿಂದ ಪ್ರೋತ್ಸಾಹವನ್ನು ಹೊಂದಿ ಬೆಳೆಯುತ್ತಾ ಬಂದಿತು.
32ಪೇತ್ರನು ಎಲ್ಲಾ ಕಡೆಗಳಲ್ಲಿಯೂ ಸಂಚಾರಮಾಡುತ್ತಿರುವಾಗ, ಲುದ್ದದಲ್ಲಿ ವಾಸವಾಗಿದ್ದ ದೇವಜನರ ಬಳಿಗೂ ಬಂದನು.
33ಅಲ್ಲಿ ಪಾರ್ಶ್ವವಾಯುರೋಗಿಯಾಗಿ ಎಂಟು ವರ್ಷಗಳಿಂದ ಹಾಸಿಗೆಯ ಮೇಲೆ ಬಿದ್ದಿದ್ದ ಐನೇಯನೆಂಬ ಒಬ್ಬ ಮನುಷ್ಯನನ್ನು ಕಂಡನು.
34ಪೇತ್ರನು ಅವನಿಗೆ, “ಐನೇಯನೇ, ಯೇಸು ಕ್ರಿಸ್ತನು ನಿನ್ನನ್ನು ವಾಸಿಮಾಡುತ್ತಾನೆ; ಎದ್ದು ನಿನ್ನ ಹಾಸಿಗೆಯನ್ನು ನೀನೇ ಹಾಸಿಕೋ” ಎಂದು ಹೇಳಿದನು. ಕೂಡಲೆ ಅವನು ಎದ್ದನು.
35ಮತ್ತು ಲುದ್ದದಲ್ಲಿಯೂ, ಶಾರೋನಿನಲ್ಲಿಯೂ ವಾಸವಾಗಿದ್ದವರೆಲ್ಲರು ಅವನನ್ನು ನೋಡಿ, ಅವರು ಕರ್ತನ ಕಡೆಗೆ ತಿರುಗಿಕೊಂಡರು.
36ಯೊಪ್ಪ ಪಟ್ಟಣದಲ್ಲಿ ತಬಿಥಾ ಎಂಬ ಒಬ್ಬ ಶಿಷ್ಯಳಿದ್ದಳು. ಆ ಹೆಸರಿಗೆ ಗ್ರೀಕ್ ಭಾಷೆಯಲ್ಲಿ “ದೊರ್ಕ” ಅಂದರೆ ಜಿಂಕೆ ಎಂದರ್ಥ. ಆಕೆಯು ಸತ್ಕ್ರಿಯೆಗಳನ್ನೂ, ದಾನಧರ್ಮಗಳನ್ನೂ ಬಹಳವಾಗಿ ಮಾಡುತ್ತಿದ್ದಳು.
37ಆ ಕಾಲದಲ್ಲಿ ಆಕೆ ರೋಗಕ್ಕೆ ತುತ್ತಾಗಿ ಸತ್ತಳು. ಆಕೆಯ ಶವವನ್ನು ಸ್ನಾನಮಾಡಿಸಿ ಮೇಲಂತಸ್ತಿನಲ್ಲಿಟ್ಟರು.
38ಯೊಪ್ಪಕ್ಕೆ ಲುದ್ದವು ಹತ್ತಿರವಾಗಿರಲಾಗಿ ಪೇತ್ರನು ಅಲ್ಲಿ ಇದ್ದಾನೆಂದು ಶಿಷ್ಯರು ಕೇಳಿ ಇಬ್ಬರು ಮನುಷ್ಯರನ್ನು ಅವನ ಬಳಿಗೆ ಕಳುಹಿಸಿ, “ತಡಮಾಡದೆ ನಮ್ಮ ಹತ್ತಿರಕ್ಕೆ ಬರಬೇಕೆಂದು” ಬೇಡಿಕೊಂಡರು.

Read ಅ. ಕೃ. 9ಅ. ಕೃ. 9
Compare ಅ. ಕೃ. 9:28-38ಅ. ಕೃ. 9:28-38