Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಅ. ಕೃ. - ಅ. ಕೃ. 8

ಅ. ಕೃ. 8:15-39

Help us?
Click on verse(s) to share them!
15ಇವರು ಅಲ್ಲಿಗೆ ಬಂದು ಆ ಜನರಿಗೆ ಪವಿತ್ರಾತ್ಮವರವು ದೊರೆಯಬೇಕೆಂದು ಅವರಿಗೋಸ್ಕರ ಪ್ರಾರ್ಥನೆಮಾಡಿದರು.
16ಏಕೆಂದರೆ ಪವಿತ್ರಾತ್ಮವರವು ಅವರಲ್ಲಿ ಒಬ್ಬನ ಮೇಲಾದರೂ ಇನ್ನೂ ಬಂದಿರಲಿಲ್ಲ. ಅವರು ಕರ್ತನಾದ ಯೇಸುವಿನ ಹೆಸರಿನಲ್ಲಿ ದೀಕ್ಷಾಸ್ನಾನವನ್ನು ಮಾತ್ರ ಮಾಡಿಸಿಕೊಂಡಿದ್ದರು
17ಅಪೊಸ್ತಲರು ಅವರ ಮೇಲೆ ಕೈಗಳನ್ನಿಡಲು ಅವರು ಪವಿತ್ರಾತ್ಮವರವನ್ನು ಹೊಂದಿದರು.
18ಅಪೊಸ್ತಲರು ಕೈಗಳನ್ನಿಡುವುದರ ಮೂಲಕವಾಗಿ ಪವಿತ್ರಾತ್ಮದಾನವಾಗುವುದನ್ನು ಸೀಮೋನನು ಕಂಡು ಹಣವನ್ನು ತಂದು ಅವರ ಮುಂದಿಟ್ಟು,
19“ನಾನು ಯಾರ ಮೇಲೆ ಕೈಗಳನ್ನಿಡುತ್ತೇನೋ ಅವರು ಪವಿತ್ರಾತ್ಮವರವನ್ನು ಹೊಂದುವಂತೆ ಈ ಅಧಿಕಾರವನ್ನು ನನಗೂ ಕೊಡಿರಿ” ಅಂದನು.
20ಆದರೆ ಪೇತ್ರನು ಅವನಿಗೆ, “ನಿನ್ನ ಬೆಳ್ಳಿಯು ನಿನ್ನ ಕೂಡ ಹಾಳಾಗಿಹೋಗಲಿ. ದೇವರ ವರವನ್ನು ಹಣಕ್ಕೆ ಕೊಂಡುಕೊಳ್ಳಬಹುದೆಂದು ಭಾವಿಸುತ್ತೀಯೋ?
21ಈ ಕಾರ್ಯದಲ್ಲಿ ನಿನಗೆ ಭಾಗವೂ ಇಲ್ಲ, ಯಾವ ಪಾಲೂ ಇಲ್ಲ; ಏಕೆಂದರೆ ನಿನ್ನ ಹೃದಯವು ದೇವರ ಮುಂದೆ ಸರಿಯಲ್ಲ.
22ಆದುದರಿಂದ ಈ ನಿನ್ನ ಕೆಟ್ಟತನವನ್ನು ಬಿಟ್ಟು ಪಶ್ಚಾತ್ತಾಪದಿಂದ ದೇವರ ಕಡೆಗೆ ತಿರುಗಿಕೋ ಕರ್ತನು ನಿನ್ನ ಮನಸ್ಸಿನ ಆಲೋಚನೆಯನ್ನು ಕ್ಷಮಿಸುವನೋ ಏನೋ ಆತನನ್ನು ಬೇಡಿಕೋ.
23ನೀನು ಕಡು ಕಹಿಯಾದ ದ್ವೇಷದಿಂದಲೂ ಮತ್ತು ವಿಷಕಾರಕವಾದ ಅನೀತಿಯಿಂದಲೂ ತುಂಬಿದವನಾಗಿರುವುದನ್ನು ನಾನು ಕಾಣುತ್ತಿದ್ದೇನೆ” ಅಂದನು
24ಅದಕ್ಕೆ ಸೀಮೋನನು, “ನೀವು ಹೇಳಿರುವ ಸಂಗತಿಗಳಲ್ಲಿ ಯಾವುದೂ ನನ್ನ ಮೇಲೆ ಬಾರದಂತೆ ನನಗೋಸ್ಕರ ಕರ್ತನನ್ನು ಬೇಡಿಕೊಳ್ಳಿರಿ” ಎಂದು ಹೇಳಿದನು.
25ಹೀಗಿರಲಾಗಿ ಅವರು ಕರ್ತನ ವಾಕ್ಯವನ್ನು ಪ್ರಮಾಣಪೂರ್ವಕವಾಗಿ ಹೇಳಿದ ಮೇಲೆ ಯೆರೂಸಲೇಮಿಗೆ ಹಿಂತಿರುಗಿ ಬಂದು ಸಮಾರ್ಯದವರ ಅನೇಕ ಊರುಗಳಲ್ಲಿ ಸುವಾರ್ತೆಯನ್ನು ಸಾರಿದರು.
26ಅಷ್ಟರಲ್ಲಿ ಕರ್ತನ ದೂತನು ಫಿಲಿಪ್ಪನಿಗೆ, “ನೀನು ಎದ್ದು ದಕ್ಷಿಣದ ಕಡೆಗೆ ಯೆರೂಸಲೇಮಿನಿಂದ ಗಾಜಕ್ಕೆ ಹೋಗುವ ದಾರಿಯಲ್ಲಿ ಹೋಗು, ಅದು ಅಡವಿ” ಎಂದು ಹೇಳಿದನು.
27ಅವನು ಎದ್ದು ಹೊರಟು ಹೋಗುತ್ತಿರುವಾಗ ಇಥಿಯೋಪ್ಯ ದೇಶದ ಒಬ್ಬ ಮನುಷ್ಯನನ್ನು ಕಂಡನು. ಅವನು ಕಂಚುಕಿಯೂ ಇಥಿಯೋಪ್ಯದವರ ರಾಣಿಯಾಗಿದ್ದ ಕಂದಾಕೆಯ ಕೈಕೆಳಗೆ ದೊಡ್ಡ ಅಧಿಕಾರಿಯೂ ಹಾಗೂ ಆಕೆಯ ಎಲ್ಲಾ ಖಜಾನೆಯ ಮೇಲ್ವಿಚಾರಕನೂ ಆಗಿದ್ದನು.
28ಅವನು ದೇವಾರಾಧನೆಗೋಸ್ಕರ ಯೆರೂಸಲೇಮಿಗೆ ಬಂದು ಹಿಂತಿರುಗಿ ಹೋಗುವಾಗ ತನ್ನ ರಥದಲ್ಲಿ ಕುಳಿತುಕೊಂಡು ಪ್ರವಾದಿ ಯೆಶಾಯನ ಗ್ರಂಥವನ್ನು ಓದುತ್ತಿದ್ದನು.
29ದೇವರಾತ್ಮನು ಫಿಲಿಪ್ಪನಿಗೆ, “ನೀನು ಆ ರಥದ ಹತ್ತಿರ ಹೋಗಿ ಅದರೊಂದಿಗೆ ಸೇರಿ ನಡೆ” ಎಂದು ಹೇಳಿದನು.
30ಫಿಲಿಪ್ಪನು ಓಡಿಹೋಗಿ ಆ ಮನುಷ್ಯನು ಪ್ರವಾದಿಯಾದ ಯೆಶಾಯನ ಗ್ರಂಥವನ್ನು ಓದುತ್ತಿರುವುದನ್ನು ಕೇಳಿ, “ಎಲೈ, ನೀನು ಓದುತ್ತಿರುವುದು ನಿನಗೆ ಅರ್ಥವಾಗುತ್ತಿದೆಯೋ?” ಎಂದು ಕೇಳಿದನು.
31ಅದಕ್ಕೆ ಅವನು, “ಯಾರಾದರೂ ನನಗೆ ಅರ್ಥ ತಿಳಿಸಿಕೊಡದ ಹೊರತು ಅದು ನನಗೆ ಹೇಗೆ ತಿಳಿದೀತು?” ಎಂದು ಹೇಳಿ, ನೀನು ರಥವನ್ನು ಹತ್ತಿ ನನ್ನ ಬಳಿಯಲ್ಲಿ ಕುಳಿತುಕೋ ಎಂಬುದಾಗಿ ಫಿಲಿಪ್ಪನನ್ನು ಕೇಳಿಕೊಂಡನು.
32ಅವನು ಓದುತ್ತಿದ್ದ ಶಾಸ್ತ್ರವಚನವು ಯಾವುದೆಂದರೆ, “ವಧಿಸುವಸ್ಥಾನಕ್ಕೆ ಒಯ್ಯಲ್ಪಡುವ ಕುರಿಮರಿಯಂತೆ ಆತನು ಒಯ್ಯಲ್ಪಟ್ಟನು; ಮತ್ತು ಕುರಿಮರಿಯು ಉಣ್ಣೆ ಕತ್ತರಿಸುವವನ ಮುಂದೆ ಮೌನವಾಗಿರುವಂತೆ ಆತನು ಬಾಯಿ ತೆರೆಯದೆ ಮೌನವಾಗಿದ್ದನು.
33ಆತನಿಗಾದ ಅವಮಾನದ ನ್ಯಾಯವಿಚಾರಣೆಯಲ್ಲಿ ಆತನಿಗೆ ನ್ಯಾಯ ಸಿಗಲಿಲ್ಲ. ಆತನ ಪೀಳಿಗೆಯ ಕುರಿತಾಗಿ ಯಾರು ವಿವರಿಸಬಲ್ಲರು? ಆತನ ಜೀವವನ್ನು ಭೂಮಿಯಿಂದ ತೆಗೆದುಬಿಟ್ಟರಲ್ಲಾ” ಎಂಬುದೇ.
34ಕಂಚುಕಿಯು ಈ ವಚನವನ್ನು ಕುರಿತು, “ಪ್ರವಾದಿಯು ಇದನ್ನು ಯಾರ ಬಗ್ಗೆ ಹೇಳಿದ್ದಾನೆ? ತನ್ನನ್ನು ಕುರಿತೋ ಅಥವಾ ಮತ್ತೊಬ್ಬನ ವಿಷಯದಲ್ಲಿಯೋ?” ದಯಮಾಡಿ ಹೇಳಬೇಕು ಎಂದು ಫಿಲಿಪ್ಪನನ್ನು ಕೇಳಲು
35ಫಿಲಿಪ್ಪನು ಬೋಧಿಸುವುದಕ್ಕೆ ತೊಡಗಿ ಅದೇ ವಚನವನ್ನು ಆಧಾರಮಾಡಿಕೊಂಡು ಅವನಿಗೆ ಯೇಸುವಿನ ವಿಷಯವಾದ ಸುವಾರ್ತೆಯನ್ನು ತಿಳಿಸಿದನು.
36ಅವರು ದಾರಿಯಲ್ಲಿ ಹೋಗುತ್ತಿರುವಾಗ ನೀರಿರುವ ಜಾಗಕ್ಕೆ ಬಂದರು.
37ಕಂಚುಕಿಯು, “ಆಗೋ, ನೀರು; ನನಗೆ ದೀಕ್ಷಾಸ್ನಾನವಾಗುವುದಕ್ಕೆ ಅಡ್ಡಿ ಏನು?” ಎಂದು ಹೇಳಿ ರಥವನ್ನು ನಿಲ್ಲಿಸು ಎಂದು ಅಪ್ಪಣೆ ಕೊಟ್ಟನು;
38ಫಿಲಿಪ್ಪನು ಕಂಚುಕಿಯು ಇಬ್ಬರೂ ನೀರಿನೊಳಗೆ ಇಳಿದರು. ಫಿಲಿಪ್ಪನು ಅವನಿಗೆ ದೀಕ್ಷಾಸ್ನಾನ ಮಾಡಿಸಿದನು.
39ಅವರು ನೀರನ್ನು ಬಿಟ್ಟು ಮೇಲಕ್ಕೆ ಬಂದಾಗ ಕರ್ತನ ಆತ್ಮ ಫಿಲಿಪ್ಪನನ್ನು ಎತ್ತಿಕೊಂಡು ಹೋಗಲಾಗಿ ಆ ಕಂಚುಕಿಯು ಫಿಲಿಪ್ಪನನ್ನು ಪುನಃ ಕಾಣಲಿಲ್ಲ. ಅವನು ಸಂತೋಷವುಳ್ಳವನಾಗಿ ತನ್ನ ಪ್ರಯಾಣವನ್ನು ಮುಂದುವರಿಸಿದನು.

Read ಅ. ಕೃ. 8ಅ. ಕೃ. 8
Compare ಅ. ಕೃ. 8:15-39ಅ. ಕೃ. 8:15-39