Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಅ. ಕೃ. - ಅ. ಕೃ. 7

ಅ. ಕೃ. 7:16-42

Help us?
Click on verse(s) to share them!
16ಅವರನ್ನು ಶೇಕೆಮಿಗೆ ತೆಗೆದುಕೊಂಡು ಹೋಗಿ ಅಲ್ಲಿ ಹಮೋರನ ಮಕ್ಕಳಿಂದ ಅಬ್ರಹಾಮನು ಬೆಳ್ಳಿಯನ್ನು ಕೊಟ್ಟು ಕೊಂಡುಕೊಂಡಿದ್ದ ಸಮಾಧಿಯೊಳಗೆ ಇಟ್ಟರು.
17“ಆದರೆ ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದ್ದ ಕಾಲವು ಸಮೀಪಿಸುವಷ್ಟರಲ್ಲಿ ನಮ್ಮ ಜನರು ಐಗುಪ್ತ ದೇಶದಲ್ಲಿ ಹೆಚ್ಚಿ ಬಹಳವಾದರು.
18ಕಡೆಗೆ ಯೋಸೇಫನನ್ನು ಅರಿಯದ ಬೇರೊಬ್ಬ ಅರಸನು ಆಳ್ವಿಕೆಗೆ ಬಂದನು.
19ಈ ಅರಸನು ನಮ್ಮ ಪೂರ್ವಿಕರ ವಿರುದ್ಧವಾಗಿ ಕುಯುಕ್ತಿಯನ್ನು ಯೋಚಿಸಿ ಅವರ ಕೂಸುಗಳನ್ನು ಜೀವದಿಂದುಳಿಸಬಾರದೆಂದು ಹೊರಗೆ ಹಾಕಿಸಿ, ನಮ್ಮ ಪೂರ್ವಿಕರನ್ನು ಕ್ರೂರವಾಗಿ ಹಿಂಸಿಸಿಸನು.
20ಆ ಸಮಯದಲ್ಲೇ ಮೋಶೆಯು ಹುಟ್ಟಿದನು. ಅವನು ದಿವ್ಯಸುಂದರನಾಗಿದ್ದನು ಮತ್ತು ತಂದೆಯ ಮನೆಯಲ್ಲಿ ಮೂರು ತಿಂಗಳು ಸಾಕಲ್ಪಟ್ಟನು.
21ಆ ಮೇಲೆ ಅವನನ್ನು ಹೊರಗೆ ಹಾಕಿದಾಗ, ಫರೋಹನ ಮಗಳು ಅವನನ್ನು ಎತ್ತಿಕೊಂಡು ಹೋಗಿ ತನ್ನ ಮಗನಾಗಿ ಸಾಕಿದಳು.
22ಮೋಶೆಯು ಐಗುಪ್ತದೇಶದವರ ಸರ್ವವಿದ್ಯೆಗಳಲ್ಲಿಯೂ ತಿಳಿವಳಿಕೆಯುಳ್ಳವನಾಗಿ ಮಾತುಗಳಲ್ಲಿಯೂ, ಕಾರ್ಯಗಳಲ್ಲಿಯೂ ಸಮರ್ಥನಾದನು.
23“ಅವನಿಗೆ ನಲವತ್ತು ವರ್ಷ ವಯಸ್ಸು ತುಂಬುತ್ತಾ ಇರಲು, ಇಸ್ರಾಯೇಲ್ ವಂಶಸ್ಥರಾದ ತನ್ನ ಸಹೋದರರನ್ನು ಹೋಗಿ ನೋಡಬೇಕೆಂಬ ಆಸೆಯು ಅವನ ಹೃದಯದಲ್ಲಿ ಹುಟ್ಟಿತು.
24ಅವರಲ್ಲಿ ಒಬ್ಬನಿಗೆ ಅನ್ಯಾಯವಾಗುವುದನ್ನು ಅವನು ನೋಡಿ, ಅವನಿಗೆ ಆಶ್ರಯಕೊಟ್ಟು ಪೀಡಿಸುವ ಐಗುಪ್ತ್ಯನನ್ನು ಹೊಡೆದುಹಾಕಿ ಮುಯ್ಯಿಗೆ ಮುಯ್ಯಿ ತೀರಿಸಿದನು.
25ಹೀಗೆ ದೇವರು ತನ್ನ ಕೈಯಿಂದ ಬಿಡುಗಡೆಯನ್ನು ಉಂಟುಮಾಡುತ್ತಾನೆಂಬುದು ತನ್ನ ಸಹೋದರರಿಗೆ ತಿಳಿದುಬರುವುದೆಂದು ಭಾವಿಸಿದನು; ಆದರೆ ಅವರು ಹಾಗೆ ತಿಳಿದುಕೊಳ್ಳಲಿಲ್ಲ.
26ಮರುದಿನ ತಾವು ತಾವೇ ಹೊಡೆದಾಡಿಕೊಳ್ಳುತ್ತಿರುವಾಗ ಅವನು ಅವರಿಗೆ ಎದುರಾಗಿ ಬಂದು, ‘ಜನರೇ, ನೀವು ಸಹೋದರರಲ್ಲವೇ, ನೀವೇಕೆ ಒಬ್ಬರಿಗೊಬ್ಬರು ಅನ್ಯಾಯ ಮಾಡುತ್ತೀರಿ?’ ಎಂದು ಹೇಳಿ ಅವರನ್ನು ಸಮಾಧಾನ ಪಡಿಸಲು ಬಂದನು.
27“ಆದರೆ ತನ್ನ ಸ್ವಕುಲದವನಿಗೆ ಅನ್ಯಾಯಮಾಡುತ್ತಿದ್ದವನು, ‘ನಿನ್ನನ್ನು ನಮ್ಮ ಮೇಲೆ ಅಧಿಕಾರಿಯನ್ನಾಗಿಯೂ, ನ್ಯಾಯಾಧಿಪತಿಯನ್ನಾಗಿಯೂ ಇಟ್ಟವರು ಯಾರು?
28ನಿನ್ನೆ ಆ ಐಗುಪ್ತ್ಯನನ್ನು ಕೊಂದಂತೆ ನನ್ನನ್ನೂ ಕೊಲ್ಲಬೇಕೆಂದಿದ್ದೀಯೋ?’ ಎಂದು ಅವನನ್ನು ನೂಕಿಬಿಟ್ಟನು.
29ಈ ಮಾತನ್ನು ಕೇಳಿ ಮೋಶೆಯು ಓಡಿಹೋಗಿ ಮಿದ್ಯಾನ್‍ ದೇಶದಲ್ಲಿ ಪ್ರವಾಸಿಯಾಗಿದ್ದನು. ಅಲ್ಲಿ ಅವನು ಇಬ್ಬರು ಗಂಡು ಮಕ್ಕಳನ್ನು ಪಡೆದನು.
30“ನಲವತ್ತು ವರ್ಷ ತುಂಬಿದ ಮೇಲೆ ದೇವದೂತನು ಸೀನಾಯಿಬೆಟ್ಟದ ಅಡವಿಯಲ್ಲಿ ಮುಳ್ಳಿನ ಪೊದೆಯೊಳಗೆ ಉರಿಯುವ ಬೆಂಕಿಯಲ್ಲಿ ಅವನಿಗೆ ಕಾಣಿಸಿಕೊಂಡನು.
31ಮೋಶೆಯು ಅದನ್ನು ಕಂಡು ಆ ನೋಟಕ್ಕೆ ಆಶ್ಚರ್ಯಪಟ್ಟು ಇದೇನೆಂದು, ಅದನ್ನು ಸ್ಪಷ್ಟವಾಗಿ ನೋಡಬೇಕೆಂದು ಹತ್ತಿರ ಬರಲು,
32‘ನಾನು ನಿನ್ನ ಪೂರ್ವಿಕರಾದ, ಅಬ್ರಹಾಮ ಇಸಾಕ ಯಾಕೋಬರ ದೇವರು’ ಎಂಬ ಕರ್ತನ ಶಬ್ದವುಂಟಾಯಿತು. ಆಗ ಮೋಶೆಯು ನಡುಗುತ್ತಾ ಸ್ಥಿರನಾಗಿ ನೋಡುವುದಕ್ಕೆ ಧೈರ್ಯವಿಲ್ಲದವನಾದನು.
33ಮತ್ತು ಕರ್ತನು ಅವನಿಗೆ, ‘ನಿನ್ನ ಕಾಲಿನ ಕೆರಗಳನ್ನು ತೆಗೆ; ನೀನು ನಿಂತಿರುವ ಸ್ಥಳವು ಪರಿಶುದ್ಧವಾದದ್ದು.
34ಐಗುಪ್ತದೇಶದಲ್ಲಿರುವ ನನ್ನ ಜನರ ದುರವಸ್ಥೆಯನ್ನು ನೋಡೇ ನೋಡಿದ್ದೇನೆ; ಅವರ ಮೊರೆಯನ್ನು ಕೇಳಿ ಅವರನ್ನು ಬಿಡಿಸುವುದಕ್ಕೆ ಇಳಿದುಬಂದಿದ್ದೇನೆ; ಈಗ ನಿನ್ನನ್ನು ಐಗುಪ್ತದೇಶಕ್ಕೆ ಕಳುಹಿಸುತ್ತೇನೆ, ಬಾ’ ಎಂದು ಹೇಳಿದನು.
35“ಅವರು ಯಾವ ಮೋಶೆಯನ್ನು ಬೇಡವೆಂದು ನಿರಾಕರಿಸಿ ‘ನಿನ್ನನ್ನು ಅಧಿಕಾರಿಯನ್ನಾಗಿಯೂ, ನ್ಯಾಯಾಧಿಪತಿಯನ್ನಾಗಿಯೂ ಇಟ್ಟವರು ಯಾರು?’ ಎಂದು ಕೇಳಿದರೋ, ಅವನನ್ನೇ ದೇವರು ಪೊದೆಯಲ್ಲಿ ಕಾಣಿಸಿಕೊಂಡ ದೂತನ ಕೈಯಿಂದ ಅಧಿಕಾರಿಯನ್ನಾಗಿಯೂ, ಬಿಡುಗಡೆಮಾಡುವವನನ್ನಾಗಿಯೂ ನೇಮಿಸಿದನು.
36ಅವನೇ ಐಗುಪ್ತ ದೇಶದಲ್ಲಿಯೂ, ಕೆಂಪು ಸಮುದ್ರದಲ್ಲಿಯೂ, ನಲವತ್ತು ವರ್ಷ ಮರುಭೂಮಿಯಲ್ಲಿಯೂ, ಅದ್ಭುತಕಾರ್ಯಗಳನ್ನೂ ಸೂಚಕ ಕಾರ್ಯಗಳನ್ನೂ ಮಾಡುತ್ತಾ ಅವರನ್ನು ನಡೆಸಿಕೊಂಡು ಬಂದನು.
37“ಆ ಮೋಶೆಯೇ, ‘ದೇವರು ನನ್ನನ್ನು ಎಬ್ಬಿಸಿದಂತೆ ನಿಮ್ಮ ಸಹೋದರರಲ್ಲಿ ಮತ್ತೊಬ್ಬ ಪ್ರವಾದಿಯನ್ನು ನಿಮ್ಮೊಳಗೆ ಎಬ್ಬಿಸುವನು’ ಎಂದು ಇಸ್ರಾಯೇಲ್ ಜನರಿಗೆ ಹೇಳಿದನು.
38ಅವನೇ ಸೀನಾಯಿಬೆಟ್ಟದಲ್ಲಿ, ತನ್ನೊಡನೆ ಮಾತನಾಡಿದ ದೇವದೂತನಿಗೂ ನಮ್ಮ ಪೂರ್ವಿಕರಿಗೂ ಅಡವಿಯಲ್ಲಿದ್ದ ಸಭೆಯೊಳಗೆ ಇದ್ದು ಜೀವಕರವಾದ ದೈವೋಕ್ತಿಗಳನ್ನು ಹೊಂದಿ ನಮಗೆ ಕೊಟ್ಟವನು ಆಗಿದ್ದಾನೆ.
39“ಆದರೆ ನಮ್ಮ ಪೂರ್ವಿಕರು ಅವನ ಮಾತುಗಳನ್ನು ಕೇಳುವುದಕ್ಕೆ ಮನಸ್ಸಿಲ್ಲದೆ ಅವನನ್ನು ತಳ್ಳಿಬಿಟ್ಟು, ಪುನಃ ಐಗುಪ್ತದೇಶದ ಕಡೆಗೆ ಮನಸ್ಸಿಟ್ಟರು.
40“ಅವರು ಆರೋನನಿಗೆ, ‘ಐಗುಪ್ತ ದೇಶದಿಂದ ನಮ್ಮನ್ನು ಕರೆದುಕೊಂಡು ಬಂದ ಆ ಮೋಶೆಯು ಏನಾದನೋ ಗೊತ್ತಿಲ್ಲ, ಆದುದರಿಂದ ನಮಗೆ ಮುಂದಾಗಿ ಹೋಗುವುದಕ್ಕೆ ದೇವರುಗಳನ್ನು ನಮಗೆ ಮಾಡಿಕೊಡು’ ಎಂದು ಕೇಳಿಕೊಂಡರು.
41ಆ ದಿನಗಳಲ್ಲಿ ಅವರು ಒಂದು ಬಸವನನ್ನು ಮಾಡಿ ಆ ವಿಗ್ರಹಕ್ಕೆ ಬಲಿಯನ್ನು ಅರ್ಪಿಸಿ ತಮ್ಮ ಕೈಗಳಿಂದ ನಿರ್ಮಿಸಿದ ವಸ್ತುವಿನಲ್ಲಿ ಉಲ್ಲಾಸ ಪಟ್ಟರು.
42ಆದರೆ ದೇವರು ಅವರಿಗೆ ವಿಮುಖನಾಗಿ, ಆಕಾಶದ ನಕ್ಷತ್ರಗಣಗಳನ್ನು ಪೂಜಿಸುವುದಕ್ಕೆ ಅವರನ್ನು ಒಪ್ಪಿಸಿಬಿಟ್ಟನು. ಪ್ರವಾದಿಗಳ ಗ್ರಂಥದಲ್ಲಿ ಬರೆದಿರುವುದೇನಂದರೆ, “‘ಇಸ್ರಾಯೇಲ್ ವಂಶದವರೇ, ನೀವು ಅರಣ್ಯದಲ್ಲಿದ್ದ ನಲವತ್ತು ವರ್ಷ ನನಗೆ ಯಜ್ಞಗಳನ್ನೂ, ಬಲಿಗಳನ್ನೂ ಅರ್ಪಿಸುತ್ತಿದ್ದಿರೋ? ಇಲ್ಲವಲ್ಲಾ;

Read ಅ. ಕೃ. 7ಅ. ಕೃ. 7
Compare ಅ. ಕೃ. 7:16-42ಅ. ಕೃ. 7:16-42