Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಅ. ಕೃ. - ಅ. ಕೃ. 5

ಅ. ಕೃ. 5:18-42

Help us?
Click on verse(s) to share them!
18ಅಸೂಯೆ ತುಂಬಿದವರಾಗಿ ಅಪೊಸ್ತಲರನ್ನು ಹಿಡಿದು ಸೆರೆಯಲ್ಲಿಟ್ಟರು.
19ಆದರೆ ಕರ್ತನ ದೂತನು ರಾತ್ರಿಯಲ್ಲಿ ಸೆರೆಮನೆಯ ದ್ವಾರಗಳನ್ನು ತೆರೆದು ಅವರನ್ನು ಹೊರಕ್ಕೆ ಕರೆದುಕೊಂಡು ಬಂದು,
20“ನೀವು ಹೋಗಿ, ದೇವಾಲಯದಲ್ಲಿ ನಿಂತುಕೊಂಡು ಈ ಜೀವ ವಾಕ್ಯಗಳನ್ನು ಜನರಿಗೆಲ್ಲಾ ತಿಳಿಸಿರಿ” ಅಂದನು.
21ಅದನ್ನು ಕೇಳಿದ ಅವರು ಬೆಳಗಿನ ಜಾವದಲ್ಲಿಯೇ ದೇವಾಲಯದೊಳಗೆ ಹೋಗಿ ಸುವಾರ್ತೆಯನ್ನು ಸಾರಿದರು. ಇತ್ತ ಮಹಾಯಾಜಕನೂ, ಅವನ ಜೊತೆಯಲ್ಲಿದ್ದವರೂ ಬಂದು ಹಿರೀಸಭೆಯನ್ನೂ, ಇಸ್ರಾಯೇಲ್ಯರ ಹಿರಿಯರೆಲ್ಲರನ್ನೂ ಕೂಡಿಸಿ, ಅವರನ್ನು ಕರತರುವುದಕ್ಕೆ ಓಲೇಕಾರರನ್ನು ಸೆರೆಮನೆಗೆ ಕಳುಹಿಸಿದರು.
22ಓಲೇಕಾರರು ಹೋಗಿ ಅವರನ್ನು ಸೆರೆಮನೆಯಲ್ಲಿ ಕಾಣದೆ ಹಿಂತಿರುಗಿ ಬಂದು,
23“ಸೆರೆಮನೆಯು ಭದ್ರವಾಗಿ ಮುಚ್ಚಿರುವುದನ್ನೂ, ಕಾವಲುಗಾರರು ಬಾಗಿಲುಗಳಲ್ಲಿ ನಿಂತಿರುವುದನ್ನೂ ಕಂಡೆವು; ಆದರೆ ತೆರೆದಾಗ ಒಳಗೆ ಒಬ್ಬರನ್ನೂ ಕಾಣಲಿಲ್ಲ” ಎಂದು ತಿಳಿಸಿದರು.
24ದೇವಾಲಯದ ಅಧಿಪತಿಯೂ, ಮುಖ್ಯಯಾಜಕರೂ ಈ ಮಾತುಗಳನ್ನು ಕೇಳಿ ಇದರಿಂದ ಏನು ಪರಿಣಾಮವಾದೀತೋ ಎಂದು ಕಳವಳಗೊಂಡರು.
25ಅಷ್ಟರಲ್ಲಿ ಒಬ್ಬನು ಬಂದು; “ಅಗೋ, ನೀವು ಸೆರೆಮನೆಯಲ್ಲಿಟ್ಟಿದ್ದ ಆ ಮನುಷ್ಯರು ದೇವಾಲಯದಲ್ಲಿ ನಿಂತುಕೊಂಡು ಜನರಿಗೆ ಉಪದೇಶಮಾಡುತ್ತಿದ್ದಾರೆಂದು” ಅವರಿಗೆ ತಿಳಿಸಿದನು.
26ಆಗ ಸೈನ್ಯದ ಅಧಿಕಾರಿಯು ಓಲೇಕಾರರ ಸಂಗಡ ಹೋಗಿ ಅವರನ್ನು ಕರೆದುಕೊಂಡು ಬಂದನು. ಆದರೆ ತಮಗೆ ಜನರು ಕಲ್ಲೆಸೆದಾರೆಂದು ಹೆದರಿ ಅವರನ್ನು ಹಿಂಸಿಸಲಿಲ್ಲ.
27ಅಪೊಸ್ತಲರನ್ನು ಕರತಂದು ಹಿರೀಸಭೆಯ ಮುಂದೆ ನಿಲ್ಲಿಸಲು ಮಹಾಯಾಜಕನು ಅವರನ್ನು ವಿಚಾರಣೆಮಾಡುತ್ತಾ,
28“ನೀವು ಈ ಹೆಸರಿನಲ್ಲಿ ಉಪದೇಶಮಾಡಲೇ ಬಾರದೆಂದು ನಾವು ನಿಮಗೆ ಕಟ್ಟಪ್ಪಣೆ ಕೊಡಲಿಲ್ಲವೇ? ಆದರೂ ನೀವು ಯೆರೂಸಲೇಮನ್ನು ನಿಮ್ಮ ಉಪದೇಶದಿಂದ ತುಂಬಿಸಿದಿರಿ, ಮತ್ತು ಆ ವ್ಯಕ್ತಿಯ ರಕ್ತಕ್ಕೆ ನಾವೇ ಹೊಣೆಗಾರರು ಎಂದು ನಮ್ಮನ್ನು ಜವಾಬ್ಧಾರರನ್ನಾಗಿ ಮಾಡಲು ನೀವು ಪ್ರಯತ್ನಿಸುತ್ತಿದ್ದೀರಿ” ಎಂದು ಹೇಳಿದನು.
29ಪೇತ್ರನೂ ಉಳಿದ ಅಪೊಸ್ತಲರೂ ಅವರಿಗೆ, “ನಾವು ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕಲ್ಲಾ.
30ನೀವು ಮರದ ಕಂಬಕ್ಕೆ ತೂಗಹಾಕಿ ಕೊಂದ ಯೇಸುವನ್ನು ನಮ್ಮ ಪೂರ್ವಿಕರ ದೇವರು ಎಬ್ಬಿಸಿದನು.
31ದೇವರು ಆತನನ್ನೇ ಇಸ್ರಾಯೇಲ್ ಜನರಿಗೆ ಮಾನಸಾಂತರವನ್ನೂ, ಪಾಪಕ್ಷಮಾಪಣೆಯನ್ನೂ ದಯಪಾಲಿಸುವುದಕ್ಕಾಗಿ ಅವನನ್ನು ಪ್ರಭುವನ್ನಾಗಿಯೂ, ರಕ್ಷಕನಾಗಿಯೂ ತನ್ನ ಬಲಗೈಯಿಂದ ಉನ್ನತಸ್ಥಾನಕ್ಕೆ ಏರಿಸಿದನು.
32ಈ ಕಾರ್ಯಗಳಿಗೆ ನಾವು ಸಾಕ್ಷಿ ಹಾಗೂ ದೇವರು ತನಗೆ ವಿಧೇಯರಾಗಿರುವವರಿಗೆ ದಯಪಾಲಿಸಿರುವ ಪವಿತ್ರಾತ್ಮನು ಸಾಕ್ಷಿ” ಎಂದು ಹೇಳಿದರು.
33ಸಭಿಕರು ಈ ಮಾತನ್ನು ಕೇಳಿ ರೌದ್ರಗೊಂಡು ಅವರನ್ನು ಕೊಲ್ಲಿಸಬೇಕೆಂದು ಆಲೋಚಿಸಿದರು.
34ಆದರೆ ಎಲ್ಲಾ ಜನರಿಂದ ಗೌರವಿಸಲ್ಪಟ್ಟ ಧರ್ಮಶಾಸ್ತ್ರಿಯಾದ ಗಮಲಿಯೇಲನೆಂಬ ಒಬ್ಬ ಫರಿಸಾಯನು ಹಿರೀಸಭೆಯಲ್ಲಿ ಎದ್ದುನಿಂತು ಈ ಮನುಷ್ಯರನ್ನು ಸ್ವಲ್ಪ ಹೊತ್ತು ಹೊರಗೆ ಕಳುಹಿಸಬೇಕೆಂದು ಅಪ್ಪಣೆಕೊಟ್ಟನು.
35ಅನಂತರ ಸಭೆಯವರಿಗೆ, “ಇಸ್ರಾಯೇಲ್ ಜನರೇ, ನೀವು ಈ ಮನುಷ್ಯರ ವಿಷಯದಲ್ಲಿ ತೆಗೆದುಕೊಳ್ಳುವ ನಿರ್ಧಾರದ ಕುರಿತು ಎಚ್ಚರಿಕೆಯುಳ್ಳವರಾಗಿರಿ.
36ಇದಕ್ಕಿಂತ ಮೊದಲು ಥೈದನು ಎಂಬ ಒಬ್ಬನು ಎದ್ದು ತಾನೊಬ್ಬ ಮಹಾಪುರುಷನೆಂದು ಹೇಳಿಕೊಂಡನು. ಅವನ ಪಕ್ಷಕ್ಕೆ ಸುಮಾರು ನಾನೂರು ಜನರು ಸೇರಿಕೊಂಡರು, ಅವನು ಕೊಲ್ಲಲ್ಪಟ್ಟನು, ಮತ್ತು ಅವನನ್ನು ನಂಬಿದವರೆಲ್ಲರು ಚದರಿಸಲ್ಪಟ್ಟು ಇಲ್ಲವಾದರು.
37ಅವನ ತರುವಾಯ ಜನಗಣತಿ ಕಾಲದಲ್ಲಿ ಗಲಿಲಾಯದ ಯೂದನು ತಿರುಗಿಬೀಳುವುದಕ್ಕೆ ಎದ್ದು, ಜನರನ್ನು ತನ್ನ ಪಕ್ಷ ಸೇರುವುದಕ್ಕೆ ಅನೇಕರನ್ನು ಪ್ರೇರೇಪಿಸಿದನು. ಅವನೂ ನಾಶವಾದನು, ಮತ್ತು ಅವನನ್ನು ನಂಬಿದವರೆಲ್ಲರು ಚದರಿಹೋದರು.
38ಹೀಗಿರುವುದರಿಂದ ನಾನು ನಿಮಗೆ ಹೇಳುವುದೇನಂದರೆ ನೀವು ಆ ಮನುಷ್ಯರ ಗೊಡವೆಗೆ ಹೋಗಬೇಡಿರಿ, ಅವರನ್ನು ಬಿಡಿರಿ. ಏಕೆಂದರೆ ಈ ಯೋಚನೆಯು ಅಥವಾ ಈ ಕೆಲಸವು ಮನುಷ್ಯರಿಂದಾಗಿದ್ದರೆ ತಾನೇ ಕೆಡುವುದು;
39ಅದು ದೇವರಿಂದಾಗಿದ್ದರೆ ಅದನ್ನು ಕೆಡಿಸುವುದಕ್ಕೆ ನಿಮ್ಮಿಂದ ಸಾಧ್ಯವಾಗುವುದಿಲ್ಲ; ನೀವು ಒಂದು ವೇಳೆ ದೇವರ ವಿರುದ್ಧ ಯುದ್ಧಮಾಡುವವರಾಗಿ ಕಾಣಿಸಿಕೊಂಡೀರಿ” ಎಂದು ಹೇಳಿದನು.
40ಅವರು ಅವನ ಮಾತಿಗೆ ಒಪ್ಪಿ ಅಪೊಸ್ತಲರನ್ನು ಕರೆಯಿಸಿ, ಹೊಡಿಸಿ ಯೇಸುವಿನ ಹೆಸರನ್ನು ಹೇಳಿ ಮಾತನಾಡಲೇಬಾರದೆಂದು ಅಪ್ಪಣೆಕೊಟ್ಟು ಅವರನ್ನು ಬಿಟ್ಟುಬಿಟ್ಟರು.
41ಅಪೊಸ್ತಲರು ತಾವು ಯೇಸುವಿನ ಹೆಸರಿನ ನಿಮಿತ್ತವಾಗಿ ಅವಮಾನಪಡುವುದಕ್ಕೆ ಯೋಗ್ಯರೆನಿಸಿಕೊಂಡೆವೆಂದು ಸಂತೋಷಪಟ್ಟರು.
42ಹಿರೀಸಭೆಯ ಎದುರಿನಿಂದ ಹೊರಟುಹೋಗಿ, ಪ್ರತಿದಿನ ಎಡೆಬಿಡದೆ ದೇವಾಲಯದಲ್ಲಿಯೂ, ಮನೆಮನೆಗಳಲ್ಲಿಯೂ, ಉಪದೇಶಮಾಡುತ್ತಾ ಕ್ರಿಸ್ತನಾದ ಯೇಸುವಿನ ಕುರಿತು ಶುಭವರ್ತಮಾನವನ್ನು ಸಾರುತ್ತಾ ಇದ್ದರು.

Read ಅ. ಕೃ. 5ಅ. ಕೃ. 5
Compare ಅ. ಕೃ. 5:18-42ಅ. ಕೃ. 5:18-42