Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಅ. ಕೃ. - ಅ. ಕೃ. 4

ಅ. ಕೃ. 4:9-37

Help us?
Click on verse(s) to share them!
9ಒಬ್ಬ ಅಂಗಹೀನನಿಗೆ ಆದ ಉಪಕಾರದ ವಿಷಯದಲ್ಲಿ ಅವನಿಗೆ ಹೇಗೆ ಸ್ವಸ್ಥವಾಯಿತು ಎಂಬುದಾಗಿ ನೀವು ನಮ್ಮನ್ನು ಈ ಹೊತ್ತು ವಿಚಾರಿಸುತ್ತಿದ್ದೀರಿ.
10ನೀವು ಶಿಲುಬೆಗೆ ಹಾಕಿಸಿದಂತಹ ಮತ್ತು ದೇವರು ಸತ್ತವರೊಳಗಿಂದ ಎಬ್ಬಿಸಿದಂತಹ ನಜರೇತಿನ ಯೇಸು ಕ್ರಿಸ್ತನ ಹೆಸರಿನಿಂದಲೇ ಈ ಮನುಷ್ಯನು ಸೌಖ್ಯಹೊಂದಿದದವನಾಗಿ ನಿಮ್ಮೆದುರಿನಲ್ಲಿ ನಿಂತಿದ್ದಾನೆ ಎಂಬುದನ್ನು ನೀವು ಮತ್ತು ಇಸ್ರಾಯೇಲ್ ಜನರೆಲ್ಲರಿಗೂ ಈ ಸಂಗತಿ ತಿಳಿದಿರಲಿ.
11“ಮನೆಕಟ್ಟುವವರಾದ ನೀವು ಬೇಡವೆಂದು ಬಿಟ್ಟಕಲ್ಲೇ ಆತನು; ಆತನೇ ಬಹು ಮುಖ್ಯವಾದ ಮೂಲೆಗಲ್ಲಾದನು.
12ಬರಬೇಕಾದ ರಕ್ಷಣೆಯು ಇನ್ನಾರಲ್ಲಿಯೂ ಸಿಗುವುದಿಲ್ಲ; ಆ ಹೆಸರಿನಿಂದಲೇ ಹೊರತು ಆಕಾಶದ ಕೆಳಗೆ ಮನುಷ್ಯರಿಗೆ ಕೊಟ್ಟಿರುವ ಮತ್ತ್ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವುದಿಲ್ಲ” ಎಂದು ಹೇಳಿದನು.
13ಪೇತ್ರ ಮತ್ತು ಯೋಹಾನನ್ನು ಧೈರ್ಯದಿಂದ ಮಾತನಾಡುವುದನ್ನು ಆ ಜನರೆಲ್ಲರೂ ನೋಡಿ ಅವರು ಶಾಸ್ತ್ರಭ್ಯಾಸಮಾಡದ ಸಾಮಾನ್ಯರೆಂದು ತಿಳಿದು ಆಶ್ಚರ್ಯಪಟ್ಟರು.
14ಇವರು ಯೇಸುವಿನ ಸಂಗಡ ಇದ್ದವರೆಂದು ಗುರುತು ಹಿಡಿದರು. ಮತ್ತು ಕ್ಷೇಮ ಹೊಂದಿದ ಆ ಮನುಷ್ಯನು ಅವರ ಸಂಗಡ ನಿಂತಿರುವುದನ್ನು ನೋಡಿ ಪ್ರತಿಯಾಗಿ ಏನೂ ಮಾತನಾಡಲಾರದೆ ಇದ್ದರು.
15ಆ ಮೇಲೆ ಸಭೆಯಿಂದ ಸ್ವಲ್ಪ ಹೊರಗೆ ಹೋಗಿರೆಂದು ಅವರಿಗೆ ಅಪ್ಪಣೆ ಕೊಟ್ಟು,,
16“ಇವರನ್ನು ನಾವೇನು ಮಾಡೋಣ? ಬಹು ಅಪರೂಪವಾದ ಒಂದು ಸೂಚಕಕಾರ್ಯವು ಇವರ ಮೂಲಕವಾಗಿ ನಡೆಯಿತೆಂಬುದು ಯೆರೂಸಲೇಮಿನ ಜನರೆಲ್ಲರಿಗೂ ಗೊತ್ತಾಗಿದೆ, ಅದನ್ನು ಅಲ್ಲಗಳೆಯುವಂತಿಲ್ಲ.
17ಆದರೆ ಇದು ಜನರಲ್ಲಿ ಇನ್ನೂ ಹರಡದಂತೆ ಮುಂದೆ ಆ ಯೇಸುವಿನ ಹೆಸರನ್ನು ಎತ್ತಿ ಇನ್ನು ಮೇಲೆ ಯಾರ ಸಂಗಡಲೂ ಮಾತನಾಡಬಾರದೆಂದು ಅವರನ್ನು ಬೆದರಿಸೋಣ ಎಂಬುದಾಗಿ ಅವರು ಪರಸ್ಪರ ಆಲೋಚನೆ ಮಾಡಿಕೊಂಡರು.”
18ಆಗ ಅವರನ್ನು ಕರೆಯಿಸಿ ಯೇಸುವಿನ ಹೆಸರನ್ನು ಎಲ್ಲೂ ಎತ್ತಬಾರದು ಹಾಗು ಉಪದೇಶ ಮಾಡಬಾರದು ಎಂದು ಅವರಿಗೆ ಖಂಡಿತವಾಗಿ ಅಪ್ಪಣೆಕೊಟ್ಟರು.
19ಅದಕ್ಕೆ ಪೇತ್ರ ಮತ್ತು ಯೋಹಾನನ್ನು; ಅವರಿಗೆ “ದೇವರ ಮಾತನ್ನು ಕೇಳುವುದಕ್ಕಿಂತ ನಿಮ್ಮ ಮಾತನ್ನು ಕೇಳುವುದು ಸರಿಯೇ? ಅದು ದೇವರ ಮುಂದೆ ನ್ಯಾಯವೋ? ನೀವೇ ತೀರ್ಪು ಮಾಡಿಕೊಳ್ಳಿರಿ;
20ನಾವಂತೂ ಕಂಡು ಕೇಳಿದ್ದನ್ನು ಹೇಳದೆ ಇರಲಾರೆವು” ಎಂದು ಉತ್ತರಕೊಟ್ಟರು.
21ನಡೆದಿದ್ದ ಸೂಚಕ ಕಾರ್ಯಕ್ಕೋಸ್ಕರ ಜನರೆಲ್ಲರು ದೇವರನ್ನು ಕೊಂಡಾಡುತ್ತಿದ್ದ ಕಾರಣ ಅವರ ದೆಸೆಯಿಂದ ಸಭೆಯವರು ಅಪೊಸ್ತಲರನ್ನು ದಂಡಿಸತಕ್ಕ ಉಪಾಯವನ್ನು ಕಾಣದೆ ಅವರನ್ನು ಇನ್ನಷ್ಟು ಬೆದರಿಸಿ ಬಿಟ್ಟು ಬಿಟ್ಟರು.
22ಈ ಸೂಚಕಕಾರ್ಯದಿಂದ ಸ್ವಸ್ಥತೆ ಹೊಂದಿದ ಆ ಮನುಷ್ಯನಿಗೆ ನಲವತ್ತು ವರ್ಷಕ್ಕಿಂತ ಹೆಚ್ಚು ವಯಸ್ಸಾಗಿತ್ತು.
23ಅವರು ಬಿಡುಗಡೆ ಹೊಂದಿ ಸ್ವಂತ ಜನರ ಬಳಿಗೆ ಹೋಗಿ ಮುಖ್ಯಯಾಜಕರೂ ಹಿರಿಯರೂ ತಮಗೆ ಹೇಳಿದ ಮಾತುಗಳನ್ನೆಲ್ಲಾ ತಿಳಿಸಿದರು.
24ಅವರು ಕೇಳಿ ಏಕಮನಸ್ಸು ಉಳ್ಳವರಾಗಿ ದೇವರನ್ನು ಗಟ್ಟಿಯಾದ ಧ್ವನಿಯಿಂದ ಹೀಗೆ ಪ್ರಾರ್ಥಿಸಿದರು;, “ಕರ್ತನೇ, ಭೂಮ್ಯಾಕಾಶಗಳನ್ನೂ, ಸಮುದ್ರಗಳನ್ನೂ, ಅವುಗಳಲ್ಲಿರುವ ಸಮಸ್ತವನ್ನೂ ಉಂಟುಮಾಡಿದಾತನೇ,
25ನೀನು ಪವಿತ್ರಾತ್ಮನ ಮೂಲಕವಾಗಿ ನಿನ್ನ ಸೇವಕನಾಗಿದ್ದ ನಮ್ಮ ಪಿತೃವಾದ ದಾವೀದನ ಬಾಯಿಂದ, “‘ಅನ್ಯಜನಗಳು ಏಕೆ ಆಕ್ರೋಶಗೊಂಡರು? ಜನಾಂಗಗಳವರು ಏಕೆ ವ್ಯರ್ಥಕಾರ್ಯಗಳನ್ನು ಯೋಚಿಸುವರು?
26ಕರ್ತನಿಗೂ ಆತನು ಅಭಿಷೇಕಿಸಿದವನಿಗೂ ವಿರೋಧವಾಗಿ ಭೂಲೋಕದ ರಾಜರು, ಸನ್ನದ್ಧರಾಗಿ ನಿಂತರು, ಅಧಿಕಾರಿಗಳು ಒಟ್ಟಾಗಿ ಕೂಡಿಕೊಂಡರು’ ಎಂದು ಹೇಳಿಸಿದಿಯಲ್ಲವೇ?
27ಆ ಮಾತಿಗೆ ಅನುಸಾರವಾಗಿಯೇ ಈ ಪಟ್ಟಣದಲ್ಲಿ ಹೆರೋದನೂ, ಪೊಂತ್ಯ ಪಿಲಾತನೂ, ನೀನು ಅಭಿಷೇಕಿಸಿದ ನಿನ್ನ ಪವಿತ್ರ ಸೇವಕನಾದ ಯೇಸುವಿಗೆ ವಿರೋಧವಾಗಿ ಅನ್ಯಜನರೊಡನೆ ಮತ್ತು ಇಸ್ರಾಯೇಲ್ ಜನರೊಡನೆ ಒಟ್ಟಾಗಿ ಸೇರಿಕೊಂಡು,
28ನಿನ್ನ ಕೈಯೂ ನಿನ್ನ ಸಂಕಲ್ಪವೂ ಮೊದಲು ನೇಮಿಸಿದ್ದನ್ನೇ ನಡಿಸಿದರು.
29ಕರ್ತನೇ, ಈಗ ನೀನು ಅವರ ಬೆದರಿಕೆಗಳನ್ನು ನೋಡಿ ನಿನ್ನ ಪವಿತ್ರ ಸೇವಕನಾದ ಯೇಸುವಿನ ಹೆಸರಿನ ಮೂಲಕವಾಗಿ ರೋಗ ಪರಿಹಾರವೂ, ಸೂಚಕಕಾರ್ಯಗಳೂ, ಅದ್ಭುತಕಾರ್ಯಗಳೂ ಜರಗುವಂತೆ
30ನಿನ್ನ ಕೈಚಾಚುತ್ತಿರುವಲ್ಲಿ, ನಿನ್ನ ದಾಸರು, ನಿನ್ನ ವಾಕ್ಯವನ್ನು ಧೈರ್ಯದಿಂದ ಹೇಳುವ ಹಾಗೆ ಅನುಗ್ರಹಿಸು” ಅಂದರು.
31ಹೀಗೆ ಪ್ರಾರ್ಥನೆ ಮಾಡಿದ ಕೂಡಲೇ ಅವರು ನೆರೆದಿದ್ದ ಸ್ಥಳವು ನಡುಗಿತು. ಅವರೆಲ್ಲರು ಪವಿತ್ರಾತ್ಮ ಭರಿತರಾಗಿ ದೇವರ ವಾಕ್ಯವನ್ನು ಧೈರ್ಯದಿಂದ ಹೇಳತೊಡಗಿದರು.
32ಕ್ರಿಸ್ತನನ್ನು ನಂಬಿದವರ ಹೃದಯವೂ, ಪ್ರಾಣವೂ ಒಂದೇ ಆಗಿತ್ತು. ಯಾರೂ ತಮ್ಮ ಸ್ವತ್ತನ್ನು ತನ್ನದು ಎಂದು ಭಾವಿಸದೆ ಎಲ್ಲರೂ ಅದನ್ನು ಹುದುವಾಗಿ ಹಂಚಿಕೊಳ್ಳುತ್ತಿದ್ದರು.
33ಮತ್ತು ಕರ್ತನಾದ ಯೇಸುವಿನ ಪುನರುತ್ಥಾನಕ್ಕೆ ಅಪೊಸ್ತಲರು ಬಹು ಬಲವಾಗಿ ಸಾಕ್ಷಿ ಹೇಳುತ್ತಿದ್ದರು; ದೇವರ ದಯವು ಅವರೆಲ್ಲರ ಮೇಲೆ ಪೂರ್ಣವಾಗಿತ್ತು.
34ಅವರಲ್ಲಿ ಕೊರತೆಪಡುತ್ತಿದ್ದವನೂ ಒಬ್ಬನೂ ಇರಲಿಲ್ಲ, ಏಕೆಂದರೆ ಹೊಲಮನೆಗಳಿದ್ದವರು ಅವುಗಳನ್ನು ಮಾರಿ ಬಂದ ಹಣವನ್ನು ತಂದು
35ಅಪೊಸ್ತಲರ ಪಾದಗಳ ಬಳಿಯಲ್ಲಿ ಇಡುತ್ತಿದ್ದರು; ಅದನ್ನು ಪ್ರತಿಯೊಬ್ಬನಿಗೆ ಅವನವನ ಅವಶ್ಯಕತೆಗೆ ತಕ್ಕಂತೆ ಹಂಚಿ ಕೊಡುತ್ತಿದ್ದರು.
36ಈ ಪ್ರಕಾರ ಮಾಡಿದವರೊಳಗೆ ಕುಪ್ರದ್ವೀಪದಲ್ಲಿ ಹುಟ್ಟಿದ ಲೇವಿಯನಾಗಿದ್ದ ಯೋಸೇಫನೆಂಬವನು ಒಬ್ಬನು. ಅವನಿಗೆ ಅಪೊಸ್ತಲರು ಬಾರ್ನಬ ಎಂದು ಹೆಸರಿಟ್ಟಿದ್ದರು, ಅಂದರೆ ಧೈರ್ಯದಾಯಕ ಎಂದರ್ಥ.
37ಅವನು ತನಗಿದ್ದ ಭೂಮಿಯನ್ನು ಮಾರಿ ಬಂದ ಹಣವನ್ನು ತಂದು ಅಪೊಸ್ತಲರ ಪಾದಗಳ ಬಳಿಯಲ್ಲಿ ಒಪ್ಪಿಸಿದನು.

Read ಅ. ಕೃ. 4ಅ. ಕೃ. 4
Compare ಅ. ಕೃ. 4:9-37ಅ. ಕೃ. 4:9-37