Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಅ. ಕೃ. - ಅ. ಕೃ. 16

ಅ. ಕೃ. 16:24-38

Help us?
Click on verse(s) to share them!
24ಅವನು ಇಂಥಾ ಅಪ್ಪಣೆಯನ್ನು ಹೊಂದಿ ಅವರನ್ನು ಸೆರೆಮನೆಯ ಒಳಕೋಣೆಯಲ್ಲಿ ಹಾಕಿ ಅವರ ಕಾಲುಗಳಿಗೆ ಕೋಳವನ್ನು ಹಾಕಿ ಬಿಗಿಸಿದನು.
25ಮಧ್ಯರಾತ್ರಿಯಲ್ಲಿ ಪೌಲನೂ ಮತ್ತು ಸೀಲನೂ ಪ್ರಾರ್ಥನೆಮಾಡುತ್ತಾ ದೇವರಿಗೆ ಸ್ತುತಿಗೀತೆಗಳನ್ನು ಹಾಡುತ್ತಿದ್ದರು; ಸೆರೆಯಲ್ಲಿದ್ದವರು ಲಕ್ಷ್ಯವಿಟ್ಟು ಕೇಳುತ್ತಿದ್ದರು.
26ಆಕಸ್ಮಾತ್ತಾಗಿ ಮಹಾಭೂಕಂಪವುಂಟಾಯಿತು; ಸೆರೆಮನೆಯ ಅಸ್ತಿವಾರಗಳು ಕದಲಿದವು. ಅದೇ ಕ್ಷಣದಲ್ಲಿ ಕದಗಳೆಲ್ಲಾ ತೆರೆದವು, ಎಲ್ಲರ ಬೇಡಿಗಳು ಕಳಚಿಬಿದ್ದವು.
27ಸೆರೆಯ ಯಜಮಾನನು ನಿದ್ದೆಯಿಂದ ಎಚ್ಚೆತ್ತು ಸೆರೆಮನೆಯ ಕದಗಳು ತೆರೆದಿರುವುದನ್ನು ಕಂಡು ಸೆರೆಯಲ್ಲಿದ್ದವರು ಓಡಿಹೋದರೆಂದು ಭಾವಿಸಿ ಕತ್ತಿಯನ್ನು ಹಿರಿದು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದಿದ್ದನು.
28ಆದರೆ ಪೌಲನು ಮಹಾ ಶಬ್ದದಿಂದ ಕೂಗಿ ಅವನಿಗೆ; “ನೀನೇನೂ ಕೇಡುಮಾಡಿಕೊಳ್ಳಬೇಡ, ನಾವೆಲ್ಲರೂ ಇಲ್ಲೇ ಇದ್ದೇವೆ” ಎಂದು ಹೇಳಿದನು.
29ಆಗ ಅವನು; ದೀಪ ತರಬೇಕೆಂದು ಕೂಗಿ ಒಳಕ್ಕೆ ಹಾರಿ ಭಯದಿಂದ ನಡುಗುತ್ತಾ ಪೌಲ ಮತ್ತು ಸೀಲರ ಮುಂದೆ ಆಡ್ಡಬಿದ್ದನು.
30ಮತ್ತು ಅವರನ್ನು ಹೊರಗೆ ಕರೆದುಕೊಂಡು ಬಂದು; “ಸ್ವಾಮಿಗಳೇ, ನಾನು ರಕ್ಷಣೆಹೊಂದುವುದಕ್ಕೆ ಏನು ಮಾಡಬೇಕೆಂದು?” ಕೇಳಲು,
31ಅವರು; “ಕರ್ತನಾದ ಯೇಸುವಿನ ಮೇಲೆ ನಂಬಿಕೆಯಿಡು, ಆಗ ನೀನು ರಕ್ಷಣೆ ಹೊಂದುವಿ, ನಿನ್ನ ಮನೆಯವರೂ ರಕ್ಷಣೆಹೊಂದುವರು” ಎಂದು ಹೇಳಿ,
32ಅವನಿಗೂ, ಅವನ ಮನೆಯಲ್ಲಿದ್ದವರೆಲ್ಲರಿಗೂ ದೇವರ ವಾಕ್ಯವನ್ನು ತಿಳಿಸಿದರು.
33ಆ ಮೇಲೆ ಅವನು ರಾತ್ರಿಯ ಅದೇ ಗಳಿಗೆಯಲ್ಲಿ ಅವರನ್ನು ಕರೆದುಕೊಂಡು ಹೋಗಿ ಅವರ ಗಾಯಗಳನ್ನು ತೊಳೆದು ಕೂಡಲೆ ತಾನೂ ತನ್ನವರೆಲ್ಲರ ಸಹಿತವಾಗಿ ದೀಕ್ಷಾಸ್ನಾನ ಮಾಡಿಸಿಕೊಂಡನು.
34ತರುವಾಯ ಅವರನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಊಟಮಾಡಿಸಿದನು. ಅವನು ತನ್ನ ಮನೆಯವರೆಲ್ಲರ ಸಂಗಡ ದೇವರನ್ನು ನಂಬಿ ಸಂತೋಷಪಟ್ಟರು.
35ಬೆಳಗಾದ ಮೇಲೆ ಅಧಿಕಾರಿಗಳು; “ಆ ಮನುಷ್ಯರನ್ನು ಬಿಟ್ಟುಬಿಡು” ಎಂದು ಸಿಪಾಯಿಗಳ ಮೂಲಕ ಹೇಳಿ ಕಳುಹಿಸಿದರು.
36ಸೆರೆಮನೆಯ ಯಜಮಾನನು ಈ ಮಾತನ್ನು ಪೌಲನಿಗೆ ತಿಳಿಸಿ; “ಅಧಿಕಾರಿಗಳು ನಿಮ್ಮನ್ನು ಬಿಟ್ಟುಬಿಡಬೇಕೆಂದು ಹೇಳಿಕಳುಹಿಸಿದ್ದಾರೆ, ಆದುದರಿಂದ ಈಗ ನೀವು ಸಮಾಧಾನದಿಂದ ಹೊರಟುಹೋಗಿರಿ” ಎಂದು ಹೇಳಿದನು.
37ಅದಕ್ಕೆ ಪೌಲನು; “ಅವರು ವಿಚಾರಣೆಮಾಡದೆ ರೋಮಾಪುರದ ಹಕ್ಕುದಾರರಾದ ನಮ್ಮನ್ನು ಎಲ್ಲರ ಮುಂದೆ ಹೊಡಿಸಿ ಸೆರೆಮನೆಯೊಳಗೆ ಹಾಕಿಸಿದರು; ಈಗ ನಮ್ಮನ್ನು ಗುಪ್ತವಾಗಿ ಹೊರಗೆ ಕಳುಹಿಸುತ್ತಾರೋ? ಹಾಗೆ ಎಂದಿಗೂ ಆಗಕೂಡದು; ಅವರೇ ಬಂದು ನಮ್ಮನ್ನು ಹೊರಗೆ ಕರದುಕೊಂಡುಹೋದರೆ ಸರಿ” ಎಂದು ಹೇಳಿದನು.
38ಸಿಪಾಯಿಗಳು ಈ ಮಾತುಗಳನ್ನು ಅಧಿಕಾರಿಗಳಿಗೆ ತಿಳಿಸಿದಾಗ ರೋಮಾಪುರದ ಹಕ್ಕುದಾರರು ಎಂಬ ಮಾತನ್ನು ಕೇಳಿದಾಗ ಅವರು ಭಯಪಟ್ಟರು.

Read ಅ. ಕೃ. 16ಅ. ಕೃ. 16
Compare ಅ. ಕೃ. 16:24-38ಅ. ಕೃ. 16:24-38