Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಅ. ಕೃ. - ಅ. ಕೃ. 14

ಅ. ಕೃ. 14:1-15

Help us?
Click on verse(s) to share them!
1ಇಕೋನ್ಯದಲ್ಲಿ ಪೌಲ ಮತ್ತು ಬಾರ್ನಬರು ಅದೇ ಪ್ರಕಾರವಾಗಿ ಯೆಹೂದ್ಯರ ಸಭಾಮಂದಿರದೊಳಗೆ ಹೋಗಿ ಪ್ರೇರಣಾತ್ಮಕವಾದ ಬೋಧನೆ ನೀಡಿ ಮಾತನಾಡಿದ್ದರಿಂದ ಯೆಹೂದ್ಯರಲ್ಲಿಯೂ, ಗ್ರೀಕರಲ್ಲಿಯೂ ಬಹುಮಂದಿ ಕರ್ತನಾದ ಯೇಸುಕ್ರಿಸ್ತನನ್ನು ನಂಬುವವರಾದರು.
2ಆದರೆ ನಂಬದೆ ಹೋದ ಯೆಹೂದ್ಯರು, ಅನ್ಯಜನರ ಮನಸ್ಸನ್ನು ಈ ಸಹೋದರರ ವಿರುದ್ಧವಾಗಿ ಪ್ರಚೋದಿಸಿ ಕೆಡಿಸಿದರು.
3ಹೀಗಿರಲಾಗಿ ಅವರು ಬಹುಕಾಲ ಅಲ್ಲಿದ್ದು ಕರ್ತನು ಅವರ ಕೈಯಿಂದ ಸೂಚಕಕಾರ್ಯಗಳೂ, ಅದ್ಭುತಕಾರ್ಯಗಳೂ ನಡೆಯುವಂತೆ ದಯಪಾಲಿಸಿ ತನ್ನ ಕೃಪಾವಾಕ್ಯಕ್ಕೆ ಸಾಕ್ಷಿಕೊಟ್ಟಿದ್ದರಿಂದ ಆತನ ಮೇಲೆ ಭರವಸವಿಟ್ಟು ಧೈರ್ಯದಿಂದ ಮಾತನಾಡುತ್ತಿದ್ದರು.
4ಆಗ ಆ ಊರಿನ ಜನರು ಎರಡು ಭಾಗವಾದರೂ; ಕೆಲವರು ಯೆಹೂದ್ಯರ ಪಕ್ಷದವರಾದರು, ಕೆಲವರು ಅಪೊಸ್ತಲರ ಪಕ್ಷದವರಾದರು.
5ಅನ್ಯಜನರೂ, ಯೆಹೂದ್ಯರೂ ಕೂಡಿ ತಮ್ಮ ಅಧಿಪತಿಗಳ ಸಮ್ಮತಿಯಿಂದ ಅಪೊಸ್ತಲರನ್ನು ಪೀಡಿಸುವುದಕ್ಕೂ, ಕಲ್ಲೆಸೆದು ಕೊಲ್ಲುವುದಕ್ಕೂ ಪ್ರಯತ್ನಿಸಿದಾಗ,
6ಅಪೊಸ್ತಲರು ಅದನ್ನು ತಿಳಿದು ಅಲ್ಲಿಂದ ಓಡಿಹೋಗಿ ಲುಕವೋನ್ಯದಲ್ಲಿದ್ದ ಲುಸ್ತ್ರ ಮತ್ತು ದೆರ್ಬೆ ಎಂಬ ಊರುಗಳಿಗೂ,
7ಅವುಗಳಿಗೆ ಸೇರಿರುವ ಸೀಮೆಗೂ ಹೋಗಿ ಅಲ್ಲಿ ಸುವಾರ್ತೆಯನ್ನು ಸಾರಿದರು.
8ಲುಸ್ತ್ರ ಪಟ್ಟಣದಲ್ಲಿ ಕಾಲುಗಳಲ್ಲಿ ಬಲವಿಲ್ಲದ ಒಬ್ಬ ಮನುಷ್ಯನು ಕುಳಿತಿದ್ದನು. ಅವನು ಹುಟ್ಟುಕುಂಟನಾಗಿದ್ದು, ಅದುವರೆಗೂ ನಡೆಯಲಾರದೆ ಇದ್ದವನು.
9ಪೌಲನು ಆಡುವ ಮಾತುಗಳನ್ನು ಅವನು ಕಿವಿಗೊಟ್ಟು ಕೇಳುತ್ತಿದ್ದನು. ಪೌಲನು ಅವನನ್ನು ದಿಟ್ಟಿಸಿ ನೋಡಿ ವಾಸಿಯಾಗುವುದಕ್ಕೆ ಬೇಕಾದ ನಂಬಿಕೆಯು ಅವನಲ್ಲಿ ಉಂಟೆಂದು ತಿಳಿದು;
10“ನಿನ್ನ ಕಾಲೂರಿ ನೆಟ್ಟಗೆ ನಿಂತುಕೋ” ಎಂದು ಮಹಾಧ್ವನಿಯಿಂದ ಹೇಳಿದನು. ಕೂಡಲೆ ಆ ಮನುಷ್ಯನು ಹಾರಿ ನಡೆದಾಡಿದನು.
11ಪೌಲನು ಮಾಡಿದ್ದನ್ನು ಗುಂಪು ಕೂಡಿದ್ದ ಜನರು ನೋಡಿ; “ದೇವರುಗಳು ಮನುಷ್ಯರ ರೂಪದಿಂದ ನಮ್ಮ ಬಳಿಗೆ ಇಳಿದುಬಂದರು” ಎಂದು ಲುಕವೋನ್ಯ ಭಾಷೆಯಲ್ಲಿ ಕೂಗಾಡಿದರು.
12ಬಾರ್ನಬನನ್ನು ‘ದ್ಯೌಸ್’ ದೇವರೆಂತಲೂ ಪೌಲನು ಪ್ರಮುಖ ಭಾಷಣಕಾರನಾದ್ದರಿಂದ ಅವನನ್ನು ‘ಹೆರ್ಮೆ’ ದೇವರೆಂತಲೂ ಅಂದುಕೊಂಡರು.
13ಊರ ಮುಂದಿದ್ದ ದ್ಯೌಸ್ ದೇವರ ಗುಡಿಯ ಪೂಜಾರಿಯು ಎತ್ತುಗಳನ್ನೂ, ಹೂವಿನ ಹಾರಗಳನ್ನೂ ಊರಬಾಗಿಲಿನ ಹತ್ತಿರಕ್ಕೆ ತಂದು ಜನರೊಂದಿಗೆ ಅವರಿಗೆ ಬಲಿಕೊಡಬೇಕೆಂದಿದ್ದನು.
14ಇದನ್ನು ಕೇಳಿ ಅಪೊಸ್ತಲರಾದ ಬಾರ್ನಬ ಮತ್ತು ಪೌಲರು ತಮ್ಮ ವಸ್ತ್ರಗಳನ್ನು ಹರಿದುಕೊಂಡು ಜನರ ಗುಂಪಿನೊಳಗೆ ನುಗ್ಗಿ ಹೀಗೆಂದು ಕೂಗಿ ಹೇಳಿದರು;
15“ಜನರೇ, ನೀವು ಹೀಗೇಕೆ ಮಾಡುತ್ತೀರೀ? ನಾವೂ ಮನುಷ್ಯರೇ, ನಿಮ್ಮಂಥ ಸ್ವಭಾವವುಳ್ಳವರು. ನೀವು ಈ ವ್ಯರ್ಥವಾದ ಕೆಲಸಗಳನ್ನು ಬಿಟ್ಟುಬಿಟ್ಟು ಭೂಮ್ಯಾಕಾಶಗಳನ್ನೂ, ಸಮುದ್ರವನ್ನೂ, ಅವುಗಳಲ್ಲಿರುವ ಸಮಸ್ತವನ್ನೂ ಸೃಷ್ಟಿಮಾಡಿದ ಜೀವಸ್ವರೂಪನಾದ ದೇವರ ಕಡೆಗೆ ತಿರುಗಿಕೊಳ್ಳಬೇಕೆಂಬ ಸುವಾರ್ತೆಯನ್ನು ನಿಮಗೆ ಸಾರಿಹೇಳುವವರಾಗಿದ್ದೇವೆ.

Read ಅ. ಕೃ. 14ಅ. ಕೃ. 14
Compare ಅ. ಕೃ. 14:1-15ಅ. ಕೃ. 14:1-15