Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಅ. ಕೃ. - ಅ. ಕೃ. 13

ಅ. ಕೃ. 13:16-50

Help us?
Click on verse(s) to share them!
16ಆಗ ಪೌಲನು ಎದ್ದು ಕೈಸನ್ನೆ ಮಾಡಿ ಹೇಳಿದ್ದೇನಂದರೆ;
17“ಇಸ್ರಾಯೇಲ್ ಜನರೇ, ಮತ್ತು ಯೆಹೂದ್ಯ ಮತಾವಲಂಬಿಗಳೇ, ಕೇಳಿರಿ. ನಮ್ಮ ಇಸ್ರಾಯೇಲ್ ಜನರ ದೇವರು ಆರಿಸಿಕೊಂಡ ನಮ್ಮ ಪೂರ್ವಿಕರು ಐಗುಪ್ತದೇಶದಲ್ಲಿ ವಾಸಿಸುತ್ತಿದ್ದಾಗ ಅವರನ್ನು ಪ್ರಬಲರನ್ನಾಗಿ ಮಾಡಿ, ಅಭಿವೃದ್ಧಿಗೆ ತಂದು ತನ್ನ ಭುಜಬಲದಿಂದ ಅವರನ್ನು ಆ ದೇಶದಿಂದ ಬರಮಾಡಿದನು.
18ಆತನು ಸುಮಾರು ನಲವತ್ತು ವರ್ಷಗಳವರೆಗೂ ಅಡವಿಯಲ್ಲಿ ಅವರ ನಡವಳಿಕೆಯನ್ನು ಸಹಿಸಿಕೊಂಡು,
19ಕಾನಾನ್ ದೇಶದಲ್ಲಿದ್ದ ಅನ್ಯಜನಗಳ ಏಳು ರಾಜ್ಯಗಳನ್ನು ನಿರ್ಮೂಲಮಾಡಿ, ಆ ಜನರ ದೇಶವನ್ನು ಅವರಿಗೆ ಸ್ವತ್ತಾಗಿ ಹಂಚಿಕೊಟ್ಟನು.
20ಇಷ್ಟರೊಳಗೆ ಸುಮಾರು ನಾನೂರೈವತ್ತು ವರ್ಷಗಳು ಗತಿಸಿದವು. ಇದಾದ ಮೇಲೆ ಪ್ರವಾದಿಯಾದ ಸಮುವೇಲನ ಕಾಲದ ವರೆಗೆ ನ್ಯಾಯಾಧಿಪತಿಗಳನ್ನು ಕೊಟ್ಟನು.
21ತರುವಾಯ ಅವರು ತಮಗೆ ಅರಸನು ಬೇಕೆಂದು ಕೇಳಿಕೊಳ್ಳಲು, ದೇವರು ಅವರಿಗೆ ಬೆನ್ಯಾಮೀನನ ಕುಲದ ಕೀಷನ ಮಗನಾದ ಸೌಲನನ್ನು ರಾಜನನ್ನಾಗಿ ಕೊಟ್ಟನು. ಅವನು ಅವರನ್ನು ನಲವತ್ತು ವರ್ಷ ಆಳಿದನು.
22ಆ ಮೇಲೆ ದೇವರು ಅವನನ್ನು ತೆಗೆದುಹಾಕಿ ದಾವೀದನನ್ನು ಅವರ ಮೇಲೆ ಅರಸನನ್ನಾಗಿ ನೇಮಕಮಾಡಿ; ‘ಇಷಯನ ಮಗನಾದ ದಾವೀದನು ನನಗೆ ಸಿಕ್ಕಿದನು, ಅವನು ನನ್ನ ಹೃದಯಕ್ಕೆ ಒಪ್ಪುವ ಮನುಷ್ಯನು, ಅವನು ನನ್ನ ಇಷ್ಟಾರ್ಥವನ್ನೆಲ್ಲಾ ನೆರವೇರಿಸುವನು’ ಎಂಬುದಾಗಿ ಅವನ ವಿಷಯವಾಗಿ ಸಾಕ್ಷಿಹೇಳಿದನು.
23“ಅವನ ಸಂತಾನದಿಂದ ದೇವರು ತನ್ನ ವಾಗ್ದಾನದ ಪ್ರಕಾರ ಇಸ್ರಾಯೇಲರಿಗೆ ಒಬ್ಬ ರಕ್ಷಕನನ್ನು ಹುಟ್ಟಿಸಿದ್ದಾನೆ.
24ಆ ರಕ್ಷಕನೇ ಯೇಸು, ಆತನ ಆಗಮನಕ್ಕೆ ಮೊದಲು ಯೋಹಾನನು ಇಸ್ರಾಯೇಲ್ ಜನರೆಲ್ಲರಿಗೆ, ನೀವು ದೇವರ ಕಡೆಗೆ ತಿರುಗಿಕೊಂಡು ಪಶ್ಚಾತ್ತಾಪದ ದೀಕ್ಷಾಸ್ನಾನಮಾಡಿಸಿಕೊಳ್ಳಬೇಕೆಂದು ಸಾರಿದನು.
25ಯೋಹಾನನು ತನ್ನ ಸೇವೆಯನ್ನು ಪೂರೈಸುತ್ತಿರುವಾಗ ಜನರಿಗೆ; ‘ನನ್ನನ್ನು ಯಾರೆಂದು ಯೋಚಿಸುತ್ತೀರಿ? ನಾನು ಆತನಲ್ಲ, ಆದರೆ ನನ್ನ ಹಿಂದೆ ಒಬ್ಬನು ಬರುತ್ತಾನೆ, ಆತನ ಪಾದರಕ್ಷೆಯನ್ನು ಬಿಚ್ಚುವುದಕ್ಕೆ ನಾನು ಯೋಗ್ಯನಲ್ಲ’ ಎಂದು ಹೇಳಿದನು.
26“ಸಹೋದರರೇ, ಅಬ್ರಹಾಮನ ವಂಶಸ್ಥರೇ, ಮತ್ತು ನಿಮ್ಮೊಂದಿಗಿರುವ ಯೆಹೂದ್ಯಮತಾವಲಂಬಿಗಳೇ, ನಮಗೆ ಈ ರಕ್ಷಣೆಯ ವಾಕ್ಯವು ಕಳುಹಿಸಲ್ಪಟ್ಟಿದೆ.
27ಯೆರೂಸಲೇಮಿನಲ್ಲಿ ವಾಸವಾಗಿರುವವರೂ, ಅವರ ಅಧಿಕಾರಿಗಳೂ, ಆತನನ್ನಾಗಲಿ, ಪ್ರತಿ ಸಬ್ಬತ್ ದಿನದಲ್ಲಿ ಪಾರಾಯಣವಾಗುವ ಪ್ರವಾದಿಗಳ ಮಾತುಗಳನ್ನಾಗಲಿ ಗ್ರಹಿಸದೆ, ಆತನನ್ನು ಅಪರಾಧಿಯೆಂದು ತೀರ್ಪುಮಾಡಿ ಆ ಮಾತುಗಳನ್ನೇ ನೆರವೇರಿಸಿದರು.
28ಮರಣದಂಡನೆಗೆ ಕಾರಣವೇನೂ ತಮಗೆ ಸಿಕ್ಕದಿದ್ದರೂ, ಆತನನ್ನು ಕೊಲ್ಲಿಸಬೇಕೆಂದು ಪಿಲಾತನನ್ನು ಕೇಳಿಕೊಂಡರು.
29ಆತನ ವಿಷಯವಾಗಿ ಶಾಸ್ತ್ರದಲ್ಲಿ ಬರೆದಿರುವುದೆಲ್ಲಾ ನೆರವೇರಿಸಿದ ಮೇಲೆ, ಆತನನ್ನು ಮರದ ಕಂಬದಿಂದ ಇಳಿಸಿ ಸಮಾಧಿಯಲ್ಲಿಟ್ಟರು.
30“ಆದರೆ ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದನು.
31ಮತ್ತು ಆತನು ಗಲಿಲಾಯದಿಂದ ಯೆರೂಸಲೇಮಿಗೆ ತನ್ನ ಜೊತೆಯಲ್ಲಿ ಬಂದವರಿಗೆ ಅನೇಕ ದಿನಗಳವರೆಗೂ ಕಾಣಿಸಿಕೊಂಡನು; ಈಗ ಅವರು ಜನರಿಗೆ ಆತನ ಸಾಕ್ಷಿಗಳಾಗಿದ್ದಾರೆ.
32“ದೇವರು ನಮ್ಮ ಪೂರ್ವಿಕರಿಗೆ ಮಾಡಿದ ವಾಗ್ದಾನವನ್ನು ನಮ್ಮ ಮಕ್ಕಳಿಗೋಸ್ಕರ ನೆರವೇರಿಸಿದ್ದಾನೆಂಬ ಶುಭಸಮಾಚಾರವನ್ನು ನಾವು ನಿಮಗೆ ಸಾರುವವರಾಗಿದ್ದೇವೆ. ಆತನು ಯೇಸುವನ್ನು ಮರಣದಿಂದ ಎಬ್ಬಿಸಿದ್ದರಲ್ಲಿ;
33‘ನನಗೆ ನೀನು ಮಗನು, ನಾನೇ ಈ ಹೊತ್ತು ನಿನ್ನನ್ನು ಪಡೆದಿದ್ದೇನೆ’ ಎಂದು ಎರಡನೆಯ ಕೀರ್ತನೆಯಲ್ಲಿ ಬರೆದಿರುವ ಮಾತು ನೆರವೇರಿತು.
34“ಇದಲ್ಲದೆ ದೇವರು ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದ್ದರಿಂದ ಆತನು ಇನ್ನೆಂದಿಗೂ ಕೊಳೆಯುವ ಅವಸ್ಥೆಗೆ ಸೇರತಕ್ಕವನಲ್ಲವೆಂಬುದರ ಕುರಿತು ದೇವರು ಹೇಳಿರುವುದು ಏನೆಂದರೆ; ‘ದಾವೀದನಿಗೆ ಖಂಡಿತವಾಗಿ ವಾಗ್ದಾನಮಾಡಿದ ಕೃಪಾವರಗಳನ್ನು ನಿಮಗೂ ಕೊಡುತ್ತೇನೆ, ಅವು ನಂಬತಕ್ಕವುಗಳೇ’ ಎಂಬುದೆ.
35ಅದಕ್ಕೆ ಅನುಸಾರವಾಗಿ ಆತನು; ‘ನೀನು ನಿನ್ನ ಪ್ರಿಯನಿಗೆ ಕೊಳೆಯುವ ಅವಸ್ಥೆಯನ್ನು ನೋಡಗೊಡಿಸುವುದಿಲ್ಲವೆಂದು’ ಬೇರೊಂದು ಕೀರ್ತನೆಯಲ್ಲಿ ಹೇಳಿದ್ದಾನೆ.
36“ದಾವೀದನಾದರೋ ತನ್ನ ಜೀವಮಾನ ಕಾಲದಲ್ಲಿ ದೇವರ ಸಂಕಲ್ಪಕ್ಕನುಸಾರವಾಗಿ ಸೇವೆಮಾಡಿದ ನಂತರ, ಸತ್ತಾಗ ತನ್ನ ಪೂರ್ವಜರ ಬಳಿ ಅವನನ್ನು ಸಮಾಧಿಮಾಡಲಾಯಿತು, ಅವನ ದೇಹವು ಕೊಳೆಯುವ ಅವಸ್ಥೆಯನ್ನು ಅನುಭವಿಸಿತು.
37ಆದರೆ ದೇವರು ಮರಣದಿಂದ ಎಬ್ಬಿಸಿದ ಯೇಸುವು ಕೊಳೆಯುವ ಅವಸ್ಥೆಯನ್ನು ಅನುಭವಿಸಲಿಲ್ಲ.
38“ಆದುದರಿಂದ ಸಹೋದರರೇ, ಆತನ ಮೂಲಕವಾಗಿ ಪಾಪ ಕ್ಷಮಾಪಣೆಯು ದೊರೆಯುತ್ತದೆಂಬುದು ನಿಮಗೆ ಸಾರೋಣವಾಗಿತ್ತೆಂದು ನಿಮಗೆ ತಿಳಿದಿರಲಿ.
39ಮೋಶೆಯ ಧರ್ಮಶಾಸ್ತ್ರದ ಮೂಲಕ ನೀವು ಬಿಡುಗಡೆಯಾಗಿ ನೀತಿವಂತರೆನಿಸಿಕೊಳ್ಳದೆ ಇದ್ದಿರಿ. ಆದರೆ ಆತನನ್ನು ನಂಬುವವರೆಲ್ಲರೂ ಆತನ ಮೂಲಕವಾಗಿ ಬಿಡುಗಡೆಹೊಂದಿ ನೀತಿವಂತರೆನಿಸಿ ಕೊಳ್ಳುತ್ತಾರೆ.
40ಹೀಗಿರಲಾಗಿ ಪ್ರವಾದಿಗಳ ಗ್ರಂಥದಲ್ಲಿ ಹೇಳಿರುವುದು ನಿಮಗೆ ಸಂಭವಿಸದಂತೆ ನೋಡಿಕೊಳ್ಳಿರಿ. ಆದೇನಂದರೆ;
41“‘ಎಲೈ, ತಿರಸ್ಕಾರ ಮಾಡುವವರೇ, ಆಶ್ಚರ್ಯಪಡಿರಿ, ನಾಶವಾಗಿಹೋಗಿರಿ. ನಿಮ್ಮ ಕಾಲದಲ್ಲಿ ನಾನು ಒಂದು ಕಾರ್ಯವನ್ನು ಮಾಡುವೆನು; ಆ ಕಾರ್ಯವನ್ನು ಒಬ್ಬನು ನಿಮಗೆ ವಿವರಿಸಿದರೂ ನೀವು ಅದನ್ನು ಸ್ವಲ್ಪವೂ ನಂಬುವುದಿಲ್ಲ’” ಎಂಬುದೇ ಎಂದು ಹೇಳಿದನು.
42ಪೌಲನೂ, ಬಾರ್ನಬನೂ ಸಭಾಮಂದಿರವನ್ನು ಬಿಟ್ಟು ಹೋಗುತ್ತಿರುವಾಗ ಜನರು ಈ ಮಾತುಗಳನ್ನು ಬರುವ ಸಬ್ಬತ್ ದಿನದಲ್ಲಿಯೂ ತಮಗೆ ಹೇಳಬೇಕೆಂದು ಕೇಳಿಕೊಂಡರು.
43ಸಭೆಯು ಮುಗಿದ ತರುವಾಯ ಯೆಹೂದ್ಯರಲ್ಲಿ, ದೈವಭಕ್ತರಾಗಿದ್ದ ಯೆಹೂದ್ಯ ಮತಾವಲಂಬಿಗಳಲ್ಲಿ ಅನೇಕರು ಪೌಲ ಮತ್ತು ಬಾರ್ನಬನನ್ನು ಹಿಂಬಾಲಿಸಿದರು. ಇವರು ಅವರ ಸಂಗಡ ಮಾತನಾಡಿ ದೇವರ ಕೃಪಾಶ್ರಯದಲ್ಲಿ ನೆಲೆಗೊಂಡಿರಬೇಕೆಂದು ಅವರನ್ನು ಪ್ರೋತ್ಸಾಹಪಡಿಸಿದರು.
44ಮುಂದಿನ ಸಬ್ಬತ್ ದಿನದಲ್ಲಿ ಹೆಚ್ಚುಕಡಿಮೆ ಇಡೀ ಊರಿನವರು ದೇವರ ವಾಕ್ಯವನ್ನು ಕೇಳುವುದಕ್ಕೆ ಸೇರಿಬಂದರು.
45ಆದರೆ ಜನರು ಗುಂಪುಗುಂಪಾಗಿ ಬರುವುದನ್ನು ನೋಡಿ ಯೆಹೂದ್ಯರು ಮತ್ಸರವುಳ್ಳವರಾಗಿ ಪೌಲನು ಹೇಳಿದ ಮಾತುಗಳಿಗೆ ವಿರೋಧವಾಗಿ ದೂಷಣೆಯ ಮಾತುಗಳನ್ನಾಡುತ್ತಾ ಇದ್ದರು.
46ಆಗ ಪೌಲನೂ, ಬಾರ್ನಬನೂ ಧೈರ್ಯದಿಂದ ಮಾತನಾಡಿ; ದೇವರ ವಾಕ್ಯವನ್ನು ಮೊದಲು ನಿಮಗೇ ಹೇಳುವುದು ಅಗತ್ಯವಾಗಿತ್ತು; ಆದರೆ ನೀವು ಅದನ್ನು ತಳ್ಳಿಬಿಟ್ಟು ನಿಮ್ಮನ್ನು ನಿತ್ಯಜೀವಕ್ಕೆ ಅಪಾತ್ರರೆಂದು ತೀರ್ಪು ಮಾಡಿಕೊಂಡಿದ್ದರಿಂದ ಇಗೋ, ನಾವು ನಿಮ್ಮನ್ನು ಬಿಟ್ಟು ಅನ್ಯಜನರ ಕಡೆಗೆ ಹೋಗುತ್ತೇವೆ.
47ಹಾಗೆಯೇ ಕರ್ತನು ನಮಗೆ ಅಪ್ಪಣೆ ಕೊಟ್ಟಿದ್ದಾನೆ, ಹೇಗೆಂದರೆ; ನೀನು ಲೋಕದ ಕಟ್ಟಕಡೆಯ ವರೆಗೆ ರಕ್ಷಕನಾಗಿರುವಂತೆ ನಿನ್ನನ್ನು ಅನ್ಯಜನಾಂಗಗಳಿಗೂ ಬೆಳಕನ್ನಾಗಿ ನೇಮಿಸಿದ್ದೇನೆ ಎಂದು ದೇವರು ಹೇಳಿದ್ದಾನೆ ಎಂದರು.
48ಅಲ್ಲಿದ್ದ ಅನ್ಯಜನರು ಆ ಮಾತನ್ನು ಕೇಳಿ ಸಂತೋಷಪಟ್ಟು, ದೇವರ ವಾಕ್ಯವನ್ನು ಹೊಗಳಿದರು. ಮತ್ತು ನಿತ್ಯಜೀವಕ್ಕೆ ನೇಮಿಸಲ್ಪಟ್ಟವರೆಲ್ಲರೂ ನಂಬಿದರು.
49ಕರ್ತನ ವಾಕ್ಯವು ಆ ಸೀಮೆಯ ಎಲ್ಲಾ ಕಡೆಗಳಲ್ಲಿ ಹಬ್ಬುತ್ತಾ ಬಂದಿತು.
50ಆದರೆ ಯೆಹೂದ್ಯರು ತಮ್ಮ ಮತಕ್ಕೆ ಸೇರಿದ್ದ ಭಕ್ತೆಯರಾದ ಕುಲೀನ ಸ್ತ್ರೀಯರನ್ನೂ, ಊರಿನ ಪ್ರಮುಖರನ್ನೂ, ಹುರಿದುಂಬಿಸಿ ಪೌಲ ಮತ್ತು ಬಾರ್ನಬರ ವಿರೋಧವಾಗಿ ಹಿಂಸೆಯನ್ನೆಬ್ಬಿಸಿ ಅವರನ್ನು ತಮ್ಮ ಪ್ರದೇಶದಿಂದ ಆಚೆಗೆ ಅಟ್ಟಿಬಿಟ್ಟರು.

Read ಅ. ಕೃ. 13ಅ. ಕೃ. 13
Compare ಅ. ಕೃ. 13:16-50ಅ. ಕೃ. 13:16-50