Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಅ. ಕೃ. - ಅ. ಕೃ. 10

ಅ. ಕೃ. 10:33-48

Help us?
Click on verse(s) to share them!
33ನಾನು ತಡಮಾಡದೆ ನಿಮ್ಮ ಹತ್ತಿರ ಜನರನ್ನು ಕಳುಹಿಸಿದೆನು. ನೀವು ಬಂದದ್ದು ಒಳ್ಳೆಯದಾಯಿತು. ಹೀಗಿರುವುದರಿಂದ ಕರ್ತನು ನಿನಗೆ ಅಪ್ಪಣೆಕೊಟ್ಟಿರುವ ಎಲ್ಲಾ ಮಾತುಗಳನ್ನು ಕೇಳುವುದಕ್ಕೆ ನಾವೆಲ್ಲರು ಈಗ ದೇವರ ಸನ್ನಿಧಾನದಲ್ಲಿ ಸೇರಿಬಂದಿದ್ದೇವೆ” ಅಂದನು.
34ಆಗ ಪೇತ್ರನು ಉಪದೇಶಮಾಡಲಾರಂಭಿಸಿ ಹೇಳಿದ್ದೇನಂದರೆ; “ನಿಜವಾಗಿಯೂ, ದೇವರು ಪಕ್ಷಪಾತಿಯಲ್ಲ,
35ಯಾವ ಜನಾಂಗದವರೇ ಆಗಲಿ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆಂದು ಈಗ ಸಂದೇಹವಿಲ್ಲದೆ ನನಗೆ ತಿಳಿದುಬಂದಿದೆ.
36ಎಲ್ಲಾ ಜನರಿಗೂ ಕರ್ತನಾಗಿರುವ ಯೇಸು ಕ್ರಿಸ್ತನ ಮೂಲಕ ದೇವರು ಸಮಾಧಾನದ ಶುಭಸಮಾಚಾರವನ್ನು ಪ್ರಕಟಿಸುತ್ತಾ ಇಸ್ರಾಯೇಲ್ ಜನರಿಗೆ ಅನುಗ್ರಹಿಸಿದ ವಾಕ್ಯವು ನಿಮಗೇ ತಿಳಿದಿದೆ.
37ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಯೋಹಾನನು ಸಾರಿದ ತರುವಾಯ ಈ ವಾಕ್ಯವು ಗಲಿಲಾಯದಿಂದ ಪ್ರಾರಂಭವಾಗಿ, ಯೂದಾಯದಲ್ಲೆಲ್ಲಾ ಪ್ರಬಲವಾಯಿತು.
38ದೇವರು ನಜರೇತಿನ ಯೇಸುವನ್ನು ಪವಿತ್ರಾತ್ಮದಿಂದಲೂ, ಬಲದಿಂದಲೂ ಅಭಿಷೇಕಿಸಿದನು; ದೇವರು ಆತನ ಸಂಗಡ ಇದ್ದುದರಿಂದ ಆತನು ಎಲ್ಲರಿಗೂ ಒಳ್ಳೆಯದನ್ನು ಮಾಡುತ್ತಾ; ಸೈತಾನನಿಂದ ಬಾಧಿಸಲ್ಪಟ್ಟವರನ್ನು ಗುಣಪಡಿಸುತ್ತಾ ಸಂಚರಿಸಿದನು; ಇದೆಲ್ಲಾ ನಿಮಗೆ ಗೊತ್ತಾಗಿರುವ ಸಂಗತಿಯೇ.
39ಆತನು ಯೆಹೂದ್ಯರ ಸೀಮೆಯಲ್ಲಿಯೂ, ಯೆರೂಸಲೇಮಿನಲ್ಲಿಯೂ ಮಾಡಿದ ಎಲ್ಲಾ ಕಾರ್ಯಗಳಿಗೆ ನಾವು ಸಾಕ್ಷಿಗಳಾಗಿದ್ದೇವೆ.
40ಆತನನ್ನು ಮರದ ಕಂಬಕ್ಕೆ ತೂಗುಹಾಕಿ ಕೊಂದರು. ದೇವರು ಆತನನ್ನು ಮೂರನೆಯ ದಿನದಲ್ಲಿ ಎಬ್ಬಿಸಿ, ಪ್ರತ್ಯಕ್ಷನಾಗುವಂತೆ ಮಾಡಿದನು.
41ಆತನು ಎಲ್ಲರಿಗೂ ಪ್ರತ್ಯಕ್ಷನಾಗದೆ, ದೇವರು ಮುಂಚಿತವಾಗಿ ಆರಿಸಿಕೊಂಡಿದ್ದ ಸಾಕ್ಷಿಗಳಾದ ನಮಗೆ ಪ್ರತ್ಯಕ್ಷನಾದನು. ಆತನು ಸತ್ತವರೊಳಗಿಂದ ಜೀವಿತನಾಗಿ ಎದ್ದು ಬಂದ ಮೇಲೆ ನಾವು ಆತನ ಸಂಗಡ ಊಟ ಮಾಡಿದೆವು.
42ಆತನೇ ಜೀವವಿರುವವರಿಗೂ, ಸತ್ತವರಿಗೂ ನ್ಯಾಯಾಧಿಪತಿಯಾಗಿ ದೇವರಿಂದ ನೇಮಕವಾದವನು ಎಂಬುದನ್ನು ಜನರಿಗೆ ಸಾರಿ, ಸಾಕ್ಷಿ ಹೇಳಬೇಕೆಂದು ದೇವರು ನಮಗೆ ಅಪ್ಪಣೆಕೊಟ್ಟನು.
43ಆತನಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬನು ಆತನ ಹೆಸರಿನ ಮೂಲಕವಾಗಿ ಪಾಪ ಕ್ಷಮಾಪಣೆಯನ್ನು ಹೊಂದುವನೆಂದು ಆತನ ವಿಷಯದಲ್ಲಿ ಪ್ರವಾದಿಗಳೆಲ್ಲರು ಸಾಕ್ಷಿ ಹೇಳಿದ್ದಾರೆ” ಅಂದನು.
44ಪೇತ್ರನು, ಈ ವಾಕ್ಯಗಳನ್ನು ಇನ್ನೂ ಹೇಳುತ್ತಿರುವಾಗಲೇ, ಅವನ ವಾಕ್ಯಗಳನ್ನು ಕೇಳಿದವರೆಲ್ಲರ ಮೇಲೆ ಪವಿತ್ರಾತ್ಮನು ಇಳಿದನು.
45ಅವರು ನಾನಾ ಭಾಷೆಗಳನ್ನಾಡುತ್ತಾ, ದೇವರನ್ನು ಕೊಂಡಾಡುತ್ತಾ ಇರುವುದನ್ನು ಪೇತ್ರನ ಸಂಗಡ ಬಂದಿದ್ದ ಯೆಹೂದ್ಯರಾದ ವಿಶ್ವಾಸಿಗಳು ನೋಡಿ,
46ಅನ್ಯಜನಗಳಿಗೂ ಪವಿತ್ರಾತ್ಮನ ದಾನವಾಯಿತಲ್ಲಾ ಎಂದು ಅತ್ಯಾಶ್ಚರ್ಯಪಟ್ಟರು.
47ನಡೆದ ಸಂಗತಿಯನ್ನು ಪೇತ್ರನು ನೋಡಿ; “ನಮ್ಮ ಹಾಗೆಯೇ ಪವಿತ್ರಾತ್ಮವರವನ್ನು ಹೊಂದಿದ ಇವರಿಗೆ ದೀಕ್ಷಾಸ್ನಾನವಾಗದಂತೆ ಅಡ್ಡಿಪಡಿಸುವವರು ಯಾರು?” ಎಂದು ಹೇಳಿ ಅವರಿಗೆ,
48ನೀವು ಯೇಸು ಕ್ರಿಸ್ತನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಅಪ್ಪಣೆಕೊಟ್ಟನು. ಆ ಮೇಲೆ ಅವರು ಅವನನ್ನು ಇನ್ನೂ ಕೆಲವು ದಿನ ಅವರೊಂದಿಗೆ ಇರಬೇಕೆಂದು ಬೇಡಿಕೊಂಡರು.

Read ಅ. ಕೃ. 10ಅ. ಕೃ. 10
Compare ಅ. ಕೃ. 10:33-48ಅ. ಕೃ. 10:33-48