Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಅರಣ್ಯ - ಅರಣ್ಯ 22

ಅರಣ್ಯ 22:13-33

Help us?
Click on verse(s) to share them!
13ಬೆಳಿಗ್ಗೆ ಬಿಳಾಮನು ಎದ್ದು ಬಾಲಾಕನ ಪ್ರಧಾನರಿಗೆ, “ನೀವು ನಿಮ್ಮ ದೇಶಕ್ಕೆ ಹೋಗಿರಿ. ನಾನು ನಿಮ್ಮ ಜೊತೆಯಲ್ಲಿ ಬರುವುದಕ್ಕೆ ಯೆಹೋವನು ನನಗೆ ಅಪ್ಪಣೆಕೊಡಲಿಲ್ಲ” ಎಂದು ಹೇಳಿದನು.
14ಮೋವಾಬ್ಯರ ಪ್ರಧಾನರು ಹೊರಟು ಬಾಲಾಕನ ಬಳಿಗೆ ಬಂದು, “ಬಿಳಾಮನು ನಮ್ಮ ಜೊತೆಯಲ್ಲಿ ಬರಲ್ಲಿಲ” ಎಂದು ತಿಳಿಸಿದರು.
15ಆದರೆ ಬಾಲಾಕನು ಅವರಿಗಿಂತಲೂ ಘನವಂತರಾದ ಹೆಚ್ಚು ಮಂದಿ ಪ್ರಧಾನರನ್ನು ಕಳುಹಿಸಿದನು.
16ಇವರು ಬಿಳಾಮನ ಬಳಿಗೆ ಬಂದು ಅವನಿಗೆ, “ಚಿಪ್ಪೋರನ ಮಗನಾದ ಬಾಲಾಕನು ಹೀಗೆ ಹೇಳುತ್ತಾನೆ, ‘ನೀನು ದಯಮಾಡಿ ನನ್ನ ಬಳಿಗೆ ಬರುವುದಕ್ಕೆ ಯಾವ ಅಡ್ಡಿಯನ್ನೂ ಹೇಳಬೇಡ.
17ಏಕೆಂದರೆ ನಾನು ನಿನ್ನನ್ನು ಬಹಳವಾಗಿ ಘನಪಡಿಸುವೆನು. ನೀನು ಏನು ಹೇಳಿದರೂ ಅದನ್ನು ಮಾಡುತ್ತೇನೆ. ನೀನು ದಯಮಾಡಿ ಬಂದು ಈ ಜನರನ್ನು ನನಗಾಗಿ ಶಪಿಸಬೇಕು’” ಎಂದನು.
18ಅದಕ್ಕೆ ಬಿಳಾಮನು ಬಾಲಾಕನ ಸೇವಕರಿಗೆ, “ತನ್ನ ಮನೇ ತುಂಬುವಷ್ಟು ಬೆಳ್ಳಿಬಂಗಾರ ಕೊಟ್ಟರೂ ನಾನು ನನ್ನ ದೇವರಾದ ಯೆಹೋವನ ಆಜ್ಞೆಯನ್ನು ಮೀರಿ ಸಣ್ಣ ಕೆಲಸವನ್ನಾಗಲಿ, ದೊಡ್ಡ ಕೆಲಸವನ್ನಾಗಲಿ ಮಾಡಲಾರೆನು.
19ಆದುದರಿಂದ ನೀವೂ ಕೂಡ ಈ ರಾತ್ರಿ ಇಲ್ಲಿಯೇ ಇಳಿದುಕೊಳ್ಳಿರಿ. ಯೆಹೋವನು ಈಗ ಏನು ಹೇಳುವನೋ ಅದನ್ನು ನಿಮಗೆ ತಿಳಿಸುತ್ತೇನೆ” ಎಂದು ಉತ್ತರಕೊಟ್ಟನು.
20ಆ ರಾತ್ರಿ ದೇವರು ಬಿಳಾಮನ ಬಳಿಗೆ ಬಂದು, “ಆ ಮನುಷ್ಯರು ನಿನ್ನನ್ನು ಕರೆಯುವುದಕ್ಕೆ ಬಂದಿರುವುದರಿಂದ ಎದ್ದು ಅವರ ಜೊತೆಯಲ್ಲಿ ಹೋಗು. ಆದರೆ ನಾನು ನಿನಗೆ ಆಜ್ಞಾಪಿಸುವ ಪ್ರಕಾರವೇ ನೀನು ಮಾಡಬೇಕು” ಎಂದನು.
21ಬೆಳಿಗ್ಗೆ ಬಿಳಾಮನು ತನ್ನ ಕತ್ತೆಗೆ ಕಡಿವಾಣ ಹಾಕಿಸಿ ಮೋವಾಬ್ಯರ ಪ್ರಧಾನರ ಜೊತೆಯಲ್ಲಿ ಹೊರಟನು.
22ಅವನು ಹೋದುದರಿಂದ ದೇವರಿಗೆ ಕೋಪವುಂಟಾಯಿತು. ಯೆಹೋವನ ದೂತನು ಅವನಿಗೆ ಎದುರಾಳಿಯಾಗಿ ದಾರಿಯಲ್ಲಿ ನಿಂತುಕೊಂಡನು. ಬಿಳಾಮನು ತನ್ನ ಕತ್ತೆಯ ಮೇಲೆ ಕುಳಿತುಕೊಂಡಿದ್ದನು. ಅವನ ಇಬ್ಬರು ಆಳುಗಳು ಅವನ ಸಂಗಡ ಇದ್ದರು.
23ಯೆಹೋವನ ದೂತನು ಬಿಚ್ಚುಕತ್ತಿಯನ್ನು ಕೈಯಲ್ಲಿ ಹಿಡಿದುಕೊಂಡು ದಾರಿಯಲ್ಲೇ ನಿಂತಿರುವುದನ್ನು ಆ ಕತ್ತೆ ನೋಡಿ ದಾರಿಯನ್ನು ಬಿಟ್ಟು ಅಡವಿಯ ಕಡೆಗೆ ಹೋಯಿತು. ಕತ್ತೆಯನ್ನು ದಾರಿಗೆ ತಿರುಗಿಸುವುದಕ್ಕೆ ಬಿಳಾಮನು ಅದನ್ನು ಹೊಡೆದನು.
24ಆ ಮೇಲೆ ಯೆಹೋವನ ದೂತನು ದ್ರಾಕ್ಷಿತೋಟಗಳ ಸಂದಿನಲ್ಲಿ ನಿಂತುಕೊಂಡನು. ಎರಡು ಕಡೆಯಲ್ಲಿಯೂ ಗೋಡೆಯಿತ್ತು.
25ಕತ್ತೆ ಯೆಹೋವನ ದೂತನನ್ನು ಪುನಃ ನೋಡಿ ಗೋಡೆಗೆ ಒತ್ತಿಕೊಂಡು ಬಿಳಾಮನ ಕಾಲನ್ನು ಆ ಗೋಡೆಗೆ ಇರುಕಿಸಲು ಅವನು ಅದನ್ನು ತಿರುಗಿ ಹೊಡೆದನು.
26ಆಗ ಯೆಹೋವನ ದೂತನು ಮುಂದೆ ಹೋಗಿ ಎಡಬಲಕ್ಕೆ ತಿರುಗಲಿಕ್ಕೆ ದಾರಿಯಿಲ್ಲದ ಇಕ್ಕಟ್ಟಾದ ಸ್ಥಳದಲ್ಲಿ ನಿಂತುಕೊಂಡನು.
27ಕತ್ತೆಯು ಯೆಹೋವನ ದೂತನನ್ನು ನೋಡಿ ಬಿಳಾಮನ ಕೆಳಗೆ ಬಿತ್ತು. ಬಿಳಾಮನು ಸಿಟ್ಟುಗೊಂಡು ತನ್ನ ಕೈಕೋಲಿನಿಂದ ಕತ್ತೆಯನ್ನು ಹೊಡೆದನು.
28ಆಗ ಯೆಹೋವನು ಆ ಕತ್ತೆಗೆ ಮಾತನಾಡುವ ಶಕ್ತಿಯನ್ನು ಕೊಡಲಾಗಿ ಅದು ಬಿಳಾಮನನ್ನು, “ನೀನು ಮೂರು ಸಾರಿ ನನ್ನನ್ನು ಹೊಡೆದದ್ದೇಕೆ? ನಾನು ನಿನಗೇನು ಮಾಡಿದ್ದೇನೆ” ಎಂದು ಕೇಳಿತು.
29ಅದಕ್ಕೆ ಬಿಳಾಮನು ಕತ್ತೆಗೆ, “ನೀನು ಇಷ್ಟ ಬಂದಂತೆ ನನ್ನನ್ನು ಆಡಿಸಿದೆಯಲ್ಲಾ. ನನ್ನ ಕೈಯಲ್ಲಿ ಕತ್ತಿಯಿದ್ದರೆ ನಿನ್ನನ್ನು ಕೊಂದು ಹಾಕಿಬಿಡುತ್ತಿದ್ದೆ” ಎಂದನು.
30ಅದಕ್ಕೆ ಆ ಕತ್ತೆಯು ಬಿಳಾಮನಿಗೆ, “ನಿನ್ನ ಜೀವಮಾನವೆಲ್ಲಾ ಇಂದಿನವರೆಗೂ ನೀನು ಹತ್ತುತ್ತಾ ಇರುವ ನಿನ್ನ ಕತ್ತೆಯು ನಾನಲ್ಲವೇ? ನಾನು ಯಾವಾಗಲಾದರೂ ಈ ರೀತಿಯಾಗಿ ಮಾಡಿದ್ದುಂಟೋ?” ಎಂದಾಗ ಬಿಳಾಮನು “ಇಲ್ಲ” ಎಂದನು.
31ಅಷ್ಟರಲ್ಲೇ ಯೆಹೋವನು ಬಿಳಾಮನ ಕಣ್ಣುಗಳನ್ನು ತೆರೆದನು. ಯೆಹೋವನ ದೂತನು ಬಿಚ್ಚು ಕತ್ತಿಯನ್ನು ಹಿಡಿದು ದಾರಿಯಲ್ಲೇ ನಿಂತಿರುವುದನ್ನು ಕಂಡು ಬೋರಲುಬಿದ್ದು ನಮಸ್ಕರಿಸಿದನು.
32ಯೆಹೋವನ ದೂತನು ಅವನಿಗೆ, “ನೀನು ಮೂರು ಸಾರಿ ಕತ್ತೆಯನ್ನು ಹೊಡೆದದ್ದೇಕೆ? ನೀನು ನನಗೆ ವಿರುದ್ಧವಾದ ಮಾರ್ಗವನ್ನು ಹಿಡಿದುದರಿಂದ ನಿನ್ನನ್ನು ತಡೆಯುವುದಕ್ಕೆ ನಾನೇ ಬಂದಿದ್ದೇನೆ.
33ಆ ಕತ್ತೆ ನನ್ನನ್ನು ನೋಡಿ ಮೂರು ಸಾರಿ ನನ್ನ ಎದುರಿನಿಂದ ವಾರೆಯಾಗಿ ತಿರುಗಿಕೊಂಡಿತು. ಹಾಗೆ ತಿರುಗಿಕೊಳ್ಳದಿದ್ದರೆ ನಾನು ಕತ್ತೆಯ ಪ್ರಾಣವನ್ನು ಉಳಿಸಿ ನಿನ್ನನ್ನು ಕೊಂದು ಹಾಕಿಬಿಡುತ್ತಿದ್ದೆನು” ಎಂದು ಹೇಳಿದನು.

Read ಅರಣ್ಯ 22ಅರಣ್ಯ 22
Compare ಅರಣ್ಯ 22:13-33ಅರಣ್ಯ 22:13-33