Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಅರಣ್ಯ - ಅರಣ್ಯ 18

ಅರಣ್ಯ 18:7-28

Help us?
Click on verse(s) to share them!
7ನೀನೂ, ನಿನ್ನ ಸಂತತಿಯವರೂ ಯಾಜಕೋದ್ಯೋಗವನ್ನು ಕೈಕೊಂಡವರಾಗಿ ಯಜ್ಞವೇದಿಯ ಮತ್ತು ತೆರೆಯ ಒಳಗಿನ ಕಾರ್ಯಗಳನ್ನು ನಡೆಸಬೇಕು. ಅವುಗಳ ಸೇವಾಕಾರ್ಯವನ್ನು ನೀವೇ ಮಾಡಬೇಕು. ನಾನು ಯಾಜಕತ್ವವನ್ನು ನಿಮಗೆ ದಾನವಾಗಿ ಅನುಗ್ರಹಿಸಿದ್ದೇನೆ. ಇತರರು ಅದಕ್ಕೆ ಕೈಹಾಕಿದರೆ ಅವರಿಗೆ ಮರಣಶಿಕ್ಷೆಯಾಗಬೇಕು” ಎಂದನು.
8ಯೆಹೋವನು ಆರೋನನಿಗೆ ಆಜ್ಞಾಪಿಸಿದ್ದೇನೆಂದರೆ, “ಇಸ್ರಾಯೇಲರು ನನಗೋಸ್ಕರ ಪ್ರತ್ಯೇಕಿಸಿ ಸಮರ್ಪಿಸುವ ಪದಾರ್ಥಗಳನ್ನೆಲ್ಲಾ ಹಾಗೂ ದೇವರ ಪರಿಶುದ್ಧ ವಸ್ತುಗಳನ್ನೆಲ್ಲಾ ನಾನು ನಿನ್ನ ಮತ್ತು ನಿನ್ನ ಸಂತತಿಯವರ ಪಾಲಾಗುವುದಕ್ಕೆ ದಾನಮಾಡಿದ್ದೇನೆ. ಅವು ಸದಾಕಾಲವೂ ನಿಮಗೇ ಸಲ್ಲಬೇಕು.
9ಬೆಂಕಿಯಲ್ಲಿ ಹೋಮಮಾಡದೆ ಉಳಿದಿರುವ ಮಹಾ ಪರಿಶುದ್ಧ ವಸ್ತುಗಳು ನಿನಗೆ ಕಾಣಿಕೆಯಾಗಿ ಸಲ್ಲಬೇಕು. ಇಸ್ರಾಯೇಲರು ನನಗೆ ಸಮರ್ಪಿಸುವ ಎಲ್ಲಾ ಧಾನ್ಯದ್ರವ್ಯ, ದೋಷಪರಿಹಾರಕ ಯಜ್ಞ, ಪ್ರಾಯಶ್ಚಿತ್ತಯಜ್ಞ ಇವುಗಳಲ್ಲಿ ಹೋಮಶೇಷವು ಮಹಾಪರಿಶುದ್ಧವಾದುದರಿಂದ ನಿನಗೂ ನಿನ್ನ ಸಂತತಿಯವರಿಗೂ ಸಲ್ಲಬೇಕು.
10ನೀವು ಮಹಾಪರಿಶುದ್ಧವಾದ ಒಂದು ಸ್ಥಳದಲ್ಲಿ ಅವುಗಳನ್ನು ಊಟಮಾಡಬೇಕು. ನಿಮ್ಮಲ್ಲಿರುವ ಗಂಡಸರೆಲ್ಲರೂ ಅವುಗಳನ್ನು ತಿನ್ನಬಹುದು. ಅವು ಮಹಾಪರಿಶುದ್ಧವಾದವುಗಳೆಂದು ನೀವು ತಿಳಿದುಕೊಳ್ಳಬೇಕು.
11“ಇದಲ್ಲದೆ ಇಸ್ರಾಯೇಲರು ಮಾಡುವ ಸಮಾಧಾನಯಜ್ಞಗಳಿಂದ ನನಗೋಸ್ಕರ ಪ್ರತ್ಯೇಕಿಸಿಕೊಡುವ ದ್ರವ್ಯಗಳೂ, ನೈವೇದ್ಯವಾಗಿ ನಿವಾಳಿಸುವ ದ್ರವ್ಯಗಳೂ ನಿಮಗೆ ಸೇರಬೇಕು. ಇವು ನಿನಗೂ, ನಿನ್ನ ಸಂತತಿಯವರಾದ ಸ್ತ್ರೀಪುರುಷರೆಲ್ಲರಿಗೂ ಶಾಶ್ವತ ನಿಯಮವಾಗಿ ಸಲ್ಲಬೇಕೆಂದು ಅನುಗ್ರಹಿಸಿದ್ದೇನೆ. ಇವುಗಳನ್ನು ನಿಮ್ಮ ಮನೆಗಳಲ್ಲಿರುವ ಶುದ್ಧರಾದವರೆಲ್ಲರೂ ಊಟ ಮಾಡಬಹುದು.
12ಇಸ್ರಾಯೇಲರು ಯೆಹೋವನಿಗೆ ಸಮರ್ಪಿಸುವ ಪ್ರಥಮಫಲಗಳು ಯಾವುವೆಂದರೆ: ಎಣ್ಣೆ, ದ್ರಾಕ್ಷಾರಸ, ಧಾನ್ಯ ಇವುಗಳಲ್ಲಿ ಶ್ರೇಷ್ಠವಾದದ್ದು ನಿನಗೇ ಸೇರಬೇಕೆಂದು ವಿಧಿಸಿದ್ದೇನೆ.
13ಅವರು ತಮ್ಮ ದೇಶದ ಎಲ್ಲಾ ಬೆಳೆಗಳಲ್ಲಿ ಯೆಹೋವನಿಗೋಸ್ಕರ ತರುವ ಪ್ರಥಮಫಲಗಳು ನಿನಗೇ ಸಲ್ಲಬೇಕು. ನಿಮ್ಮ ಮನೆಗಳಲ್ಲಿ ಶುದ್ಧರಾಗಿರುವ ಎಲ್ಲರೂ ಅವುಗಳನ್ನು ಊಟಮಾಡಬಹುದು.
14ಕೇವಲ ಯೆಹೋವನಿಗೋಸ್ಕರ ಇರುವುದಕ್ಕೆ ಇಸ್ರಾಯೇಲರು ಹರಕೆಮಾಡಿ ಸಮರ್ಪಿಸುವುದೆಲ್ಲವೂ ನಿನಗೆ ಸೇರಬೇಕು.
15ಮನುಷ್ಯರಲ್ಲಾಗಲಿ, ಪಶುಗಳಲ್ಲಾಗಲಿ ಅವರು ಯೆಹೋವನಿಗೆ ಸಮರ್ಪಿಸುವ ಸಕಲಪ್ರಾಣಿಗಳಲ್ಲಿ ಚೊಚ್ಚಲಾದದ್ದು ನಿನಗೆ ಸಲ್ಲಬೇಕು. ಆದರೆ ಮನುಷ್ಯರ ಚೊಚ್ಚಲಮಕ್ಕಳಿಗೂ, ಅಪವಿತ್ರವಾದ ಪಶುಗಳ ಮರಿಗಳಿಗೂ ಬದಲಾಗಿ ನೀನು ಈಡನ್ನು ತೆಗೆದುಕೊಂಡು ಅವುಗಳನ್ನು ಬಿಟ್ಟುಬಿಡಬೇಕು.
16ಹೀಗೆ ಬಿಟ್ಟುಬಿಡಬೇಕಾದ ಶಿಶುಗಳು ಒಂದು ತಿಂಗಳಿನ ಪ್ರಾಯಕ್ಕೆ ಬಂದಾಗ, ನೀವು ಗೊತ್ತು ಮಾಡಿದ ಈಡನ್ನು ದೇವರ ಸೇವೆಗೆ ನೇಮಕವಾದ ಇಪ್ಪತ್ತು ಗೇರಾ ತೂಕದ ಶೆಕೆಲ್ ಪ್ರಕಾರ ಐದು ಶೆಕೆಲ್ ತೆಗೆದುಕೊಂಡು ಅವುಗಳನ್ನು ಬಿಟ್ಟುಬಿಡಬೇಕು.
17“ಆಕಳಿನ ಮತ್ತು ಆಡುಕುರಿಗಳ ಚೊಚ್ಚಲುಮರಿಗಳು ದೇವರ ಸೊತ್ತಾಗಿರುವುದರಿಂದ ಅವುಗಳನ್ನು ಬಿಡಬಾರದು. ಅವುಗಳ ರಕ್ತವನ್ನು ಯಜ್ಞವೇದಿಗೆ ಚಿಮುಕಿಸಿಬೇಕು, ಅವುಗಳ ಕೊಬ್ಬನ್ನು ಯೆಹೋವನಿಗೆ ಸುಗಂಧಹೋಮಮಾಡಬೇಕು.
18ಅವುಗಳ ಮಾಂಸವು ಸಮಾಧಾನಯಜ್ಞಗಳಲ್ಲಿ ನೈವೇದ್ಯವಾಗಿ ನಿವಾಳಿಸುವ ಎದೆಯ ಭಾಗದಂತೆಯೂ, ಬಲತೊಡೆಯಂತೆಯೂ ನಿನಗೇ ಸಲ್ಲಬೇಕು.
19ಇಸ್ರಾಯೇಲರು ಯೆಹೋವನಿಗೋಸ್ಕರ ಪ್ರತ್ಯೇಕಿಸಿ ಸಮರ್ಪಿಸುವ ದೇವರ ವಸ್ತುಗಳೆಲ್ಲಾ ನಿನಗೂ, ನಿನ್ನ ಸಂತತಿಯವರಾದ ಸ್ತ್ರೀಪುರುಷರೆಲ್ಲರಿಗೂ ಸದಾಕಾಲವೂ ಸಲ್ಲಬೇಕೆಂದು ನಾನು ಅನುಗ್ರಹಮಾಡಿದ್ದೇನೆ. ಇದು ಯೆಹೋವನ ಸನ್ನಿಧಿಯಲ್ಲಿ ನಿನ್ನೊಡನೆಯೂ, ನಿನ್ನ ಸಂತತಿಯೊಡನೆಯೂ ಮಾಡಲ್ಪಟ್ಟ ಶಾಶ್ವತವಾದ ಉಪ್ಪಿನ ಒಡಂಬಡಿಕೆಯಾಗಬೇಕು” ಎಂದು ಹೇಳಿದನು.
20ಇದಲ್ಲದೆ ಯೆಹೋವನು ಆರೋನನಿಗೆ ಹೇಳಿದ್ದೇನೆಂದರೆ, “ಇಸ್ರಾಯೇಲರ ದೇಶದಲ್ಲಿ ನಿನ್ನ ಸ್ವಂತಕ್ಕಾಗಿ ಯಾವ ಸ್ವತ್ತು ಇರಬಾರದು. ಅವರೊಂದಿಗೆ ನಿನಗೆ ಪಾಲು ಇರುವುದಿಲ್ಲ. ಇಸ್ರಾಯೇಲರ ಮಧ್ಯದಲ್ಲಿ ನಾನೇ ನಿನಗೆ ಪಾಲಾಗಿಯೂ ಮತ್ತು ಸ್ವತ್ತಾಗಿಯೂ ಇದ್ದೇನೆ.
21“ಲೇವಿಯರು ದೇವದರ್ಶನದ ಗುಡಾರದ ಸೇವಾಕಾರ್ಯವನ್ನು ಮಾಡುವುದಕ್ಕಾಗಿ ಇಸ್ರಾಯೇಲರಿಂದ ಸಕಲ ಪದಾರ್ಥಗಳ ಹತ್ತನೆಯ ಪಾಲನ್ನು ಗೊತ್ತುಮಾಡಿ ಕೊಟ್ಟಿದ್ದೇನೆ.
22ಇನ್ನು ಮುಂದೆ ಇಸ್ರಾಯೇಲರು ದೇವದರ್ಶನದ ಗುಡಾರದ ಹತ್ತಿರಕ್ಕೆ ಬರಬಾರದು, ಬಂದರೆ ಅವರು ಆ ದೋಷದಿಂದ ಸತ್ತುಹೋಗುವರು.
23ಲೇವಿಯರೇ ದೇವದರ್ಶನದ ಗುಡಾರದ ಸೇವಾಕಾರ್ಯವನ್ನು ಮಾಡಬೇಕು. ಅದರ ಸಂಬಂಧವಾಗಿ ಅವರು ಮಾಡುವ ಪಾಪಫಲವನ್ನು ತಾವೇ ಅನುಭವಿಸಬೇಕು. ಇದು ನಿಮಗೂ, ನಿಮ್ಮ ಸಂತತಿಯವರಿಗೂ ಶಾಶ್ವತ ನಿಯಮವಾಗಿರಬೇಕು. ಆದರೆ ಇಸ್ರಾಯೇಲರ ಮಧ್ಯದಲ್ಲಿ ಲೇವಿಯರಿಗೆ ಸ್ವಂತವಾದ ಸ್ವತ್ತು ಇರುವುದಿಲ್ಲ.
24ಇಸ್ರಾಯೇಲರು ಪ್ರತ್ಯೇಕಿಸಿ ಯೆಹೋವನಿಗೆ ಸಮರ್ಪಿಸುವ ಹತ್ತನೆಯ ಒಂದು ಭಾಗವನ್ನು ಲೇವಿಯರಿಗೆ ಸ್ವತ್ತಾಗಿ ಕೊಟ್ಟಿದ್ದೇನೆ. ಆದುದರಿಂದ ಲೇವಿಯರಿಗೆ ‘ಇತರ ಇಸ್ರಾಯೇಲರೊಂದಿಗೆ ಪಾಲು ದೊರೆಯುವುದಿಲ್ಲ’” ಎಂದು ಹೇಳಿದ ಮಾತಿಗೆ ಇದೇ ಕಾರಣ.
25ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ,
26“ನೀನು ಲೇವಿಯರಿಗೆ ಹೀಗೆ ಆಜ್ಞಾಪಿಸಬೇಕು, ‘ಇಸ್ರಾಯೇಲರ ಸ್ವಂತಕ್ಕಾಗಿ ನಾನು ನೇಮಿಸಿರುವ ಹತ್ತನೆಯ ಒಂದು ಭಾಗವನ್ನು ಪ್ರತ್ಯೇಕಿಸಿ ಯೆಹೋವನಿಗೆ ಸಮರ್ಪಿಸಬೇಕು.
27ನೀವು ಹೀಗೆ ಸಮರ್ಪಿಸಿದ ಹತ್ತನೆಯ ಒಂದು ಭಾಗದ ಕಣದಲ್ಲಿನ ಧಾನ್ಯವನ್ನೂ, ದ್ರಾಕ್ಷಿತೊಟ್ಟಿಯ ರಸದಿಂದ ಬರಬೇಕಾದ ದಶಮಾಂಶವೆಂದು ಪರಿಗಣಿಸಲ್ಪಡುವುದು.
28ಇಸ್ರಾಯೇಲರಿಂದ ನಿಮಗೆ ಸಲ್ಲುವ ಹತ್ತನೆಯ ಒಂದು ಭಾಗವನ್ನು ಯೆಹೋವನಿಗೆ ಪ್ರತ್ಯೇಕಿಸಿ ಯಾಜಕನಾದ ಆರೋನನಿಗೆ ಒಪ್ಪಿಸಬೇಕು.

Read ಅರಣ್ಯ 18ಅರಣ್ಯ 18
Compare ಅರಣ್ಯ 18:7-28ಅರಣ್ಯ 18:7-28