Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಅರಣ್ಯ - ಅರಣ್ಯ 13

ಅರಣ್ಯ 13:8-30

Help us?
Click on verse(s) to share them!
8ಎಫ್ರಾಯೀಮ್ ಕುಲದ ನೂನನ ಮಗನಾದ ಹೋಶೇಯ,
9ಬೆನ್ಯಾಮೀನ್ ಕುಲದ ರಾಫೂವನ ಮಗನಾದ ಪಲ್ಟೀ,
10ಜೆಬುಲೂನ್ ಕುಲದ ಸೋದೀಯನ ಮಗನಾದ ಗದ್ದೀಯೇಲ್,
11ಯೋಸೇಫ್ ಅಂದರೆ ಮನಸ್ಸೆ ಕುಲದ ಸೂಸೀಯನ ಮಗನಾದ ಗದ್ದೀ,
12ದಾನ್ ಕುಲದ ಗೆಮಲ್ಲೀಯನ ಮಗನಾದ ಅಮ್ಮೀಯೇಲ್,
13ಆಶೇರ್ ಕುಲದ ಮೀಕಾಯೇಲನ ಮಗನಾದ ಸೆತೂರ್,
14ನಫ್ತಾಲಿ ಕುಲದ ವಾಪೆಸೀಯನ ಮಗನಾದ ನಹಬೀ,
15ಗಾದ್ ಕುಲದ ಮಾಕೀಯನ ಮಗನಾದ ಗೆಯೂವೇಲ್.
16ದೇಶವನ್ನು ಸಂಚರಿಸಿ ನೋಡುವುದಕ್ಕೆ ಮೋಶೆ ಕಳುಹಿಸಿದ ಮನುಷ್ಯರ ಹೆಸರುಗಳು ಇವೇ. ಮೋಶೆ ನೂನನ ಮಗನಾದ ಹೋಶೇಯನಿಗೆ ಯೆಹೋಶುವನೆಂದು ಹೆಸರಿಟ್ಟನು.
17ಕಾನಾನ್ ದೇಶದಲ್ಲಿ ಸಂಚರಿಸಿ ನೋಡುವುದಕ್ಕೆ ಮೋಶೆ ಅವರನ್ನು ಕಳುಹಿಸುವಾಗ ಅವರಿಗೆ, “ನೀವು ಕಾನಾನ್ ದೇಶದ ದಕ್ಷಿಣ ಪ್ರಾಂತ್ಯದ ಮಾರ್ಗವಾಗಿ ಬೆಟ್ಟದ ಸೀಮೆಗೆ ಹತ್ತಿಹೋಗಿ ಆ ದೇಶದ ಸಂಗತಿಯನ್ನೆಲ್ಲಾ ನೋಡಿ ತಿಳಿದುಕೊಳ್ಳಬೇಕು.
18ಅಲ್ಲಿನ ನಿವಾಸಿಗಳು ಬಲಿಷ್ಠರೋ ಅಥವಾ ಬಲಹೀನರೋ, ಬಹಳ ಜನರೋ ಅಥವಾ ಸ್ವಲ್ಪ ಜನರೋ,
19ಅವರ ದೇಶವು ಒಳ್ಳೆಯದೋ ಅಥವಾ ಕೆಟ್ಟದ್ದೋ? ಅವರ ಪಟ್ಟಣಗಳು ಪಾಳೆಯಗಳೋ ಅಥವಾ ಕೋಟೆಗಳೋ?
20ಭೂಮಿಯು ಸಾರವಾದುದೋ ಅಥವಾ ನಿಸ್ಸಾರವಾದುದೋ, ಮರಗಳುಳ್ಳದ್ದೋ ಅಥವಾ ಬಯಲುಪ್ರದೇಶವೋ ಎಂದು ನೋಡಿ ತಿಳಿದುಕೊಳ್ಳಬೇಕು. ಅದಲ್ಲದೆ ನೀವು ಧೈರ್ಯವುಳ್ಳವರಾಗಿದ್ದು ಆ ದೇಶದ ಉತ್ಪನ್ನಗಳಲ್ಲಿ ಕೆಲವನ್ನು ತರಬೇಕು” ಎಂದು ಹೇಳಿದನು. ಆಗ ದ್ರಾಕ್ಷಾಲತೆಗಳ ಪ್ರಥಮ ಫಲದ ಕಾಲವಾಗಿತ್ತು.
21ಅವರು ಬೆಟ್ಟವನ್ನು ಹತ್ತಿ ಚಿನ್ ಅರಣ್ಯದಿಂದ ಹಮಾತಿನ ದಾರಿಯಲ್ಲಿರುವ ರೆಹೋಬಿನ ವರೆಗೆ ಆ ದೇಶವನ್ನು ಸಂಚರಿಸಿ ನೋಡಿದರು.
22ಅವರು ಬೆಟ್ಟವನ್ನು ಹತ್ತಿ ಕಾನಾನ್ ದೇಶದ ದಕ್ಷಿಣ ಪ್ರಾಂತ್ಯವನ್ನು ದಾಟಿ ಹೆಬ್ರೋನಿಗೆ ಬಂದರು. ಅಲ್ಲಿ ಅಹೀಮನ್, ಶೇಷೈ, ತಲ್ಮೈ ಎಂಬ ಉನ್ನತ ಪುರುಷರು ಇದ್ದರು. ಹೆಬ್ರೋನ್ ಪಟ್ಟಣವು ಐಗುಪ್ತ ದೇಶದಲ್ಲಿರುವ ಚೋವನ್ ಪಟ್ಟಣಕ್ಕಿಂತ ಏಳು ವರ್ಷ ಮೊದಲು ನಿರ್ಮಿಸಲಾಗಿತ್ತು.
23ಅವರು ಎಷ್ಕೋಲ್ ಎಂಬ ತಗ್ಗಿಗೆ ಬಂದು ಅಲ್ಲಿ ದ್ರಾಕ್ಷಾಲತೆಯಿಂದ ಒಂದೇ ಗೊಂಚಲುಳ್ಳ ಕೊಂಬೆಯನ್ನು ಕೊಯ್ದರು; ಇಬ್ಬರು ಅದನ್ನು ಅಡ್ಡಕೋಲಿನಿಂದ ಹೊತ್ತುಕೊಂಡು ಬಂದರು. ಕೆಲವು ದಾಳಿಂಬೆ ಮತ್ತು ಅಂಜೂರದ ಹಣ್ಣುಗಳನ್ನೂ ತಂದರು.
24ಇಸ್ರಾಯೇಲರು ಅಲ್ಲಿ ಆ ದ್ರಾಕ್ಷಿಯ ಗೊಂಚಲನ್ನು ಕೊಯ್ದದ್ದರಿಂದಲೇ ಆ ಸ್ಥಳಕ್ಕೆ “ಎಷ್ಕೋಲ್” ಎಂದು ಹೆಸರು ಉಂಟಾಯಿತು.
25ಅವರು ನಲ್ವತ್ತು ದಿನಗಳು ಆ ದೇಶವನ್ನು ಸಂಚರಿಸಿ ನೋಡಿದರು.
26ಆ ಮೇಲೆ ಪಾರಾನ್ ಅರಣ್ಯದಲ್ಲಿದ್ದ ಮೋಶೆ, ಆರೋನರು ಮತ್ತು ಇಸ್ರಾಯೇಲರ ಸರ್ವಸಮೂಹದವರ ಬಳಿಗೆ ಕಾದೇಶಿಗೆ ಬಂದು ಅವರಿಗೆ ಸಮಾಚಾರವನ್ನು ತಿಳಿಸಿ ಆ ದೇಶದ ಹಣ್ಣುಗಳನ್ನು ತೋರಿಸಿದರು.
27ಅವರು ಮೋಶೆಗೆ, “ನೀನು ನಮ್ಮನ್ನು ಕಳುಹಿಸಿದ ದೇಶಕ್ಕೆ ಹೋದೆವು; ಅದು ನಿಜವಾಗಿಯೂ ಹಾಲೂ ಮತ್ತು ಜೇನೂ ಹರಿಯುವ ದೇಶವೇ; ಅಲ್ಲಿನ ಹಣ್ಣುಗಳು ಇಂಥವು.
28ಆದರೆ ಆ ದೇಶದ ನಿವಾಸಿಗಳು ಬಲಿಷ್ಠರು: ಅವರಿರುವ ಪಟ್ಟಣಗಳು ದೊಡ್ಡದಾಗಿಯೂ, ಕೋಟೆ ಕೊತ್ತಲುಗಳುಳ್ಳದ್ದಾಗಿಯೂ ಇದೆ. ಅದಲ್ಲದೆ ಅಲ್ಲಿ ಉನ್ನತ ಪುರುಷರನ್ನು ನೋಡಿದೆವು.
29ದಕ್ಷಿಣ ಸೀಮೆಯಲ್ಲಿ ಅಮಾಲೇಕ್ಯರು, ಬೆಟ್ಟದ ಸೀಮೆಯಲ್ಲಿ ಹಿತ್ತಿಯರು, ಯೆಬೂಸಿಯರು, ಅಮೋರಿಯರು ಸಮುದ್ರತೀರದಲ್ಲಿ ಮತ್ತು ಯೊರ್ದನ್ ಹೊಳೆಯ ಬಳಿಯಲ್ಲಿ ಕಾನಾನ್ಯರೂ ವಾಸವಾಗಿದ್ದಾರೆ” ಎಂದು ತಿಳಿಸಿದರು.
30ಇಸ್ರಾಯೇಲರು ಮೋಶೆಗೆ ವಿರುದ್ಧವಾಗಿ ಗುಣುಗುಟ್ಟಿದರು. ಕಾಲೇಬನು ಅವರನ್ನು ಸುಮ್ಮನಿರಿಸಿ, “ನಾವು ನಿರ್ಭಯವಾಗಿ ಆ ಬೆಟ್ಟದ ಸೀಮೆಗೆ ಹತ್ತಿಹೋಗಿ ಅದನ್ನು ಸ್ವಾಧೀನಪಡಿಸಿಕೊಳ್ಳೋಣ. ಅದನ್ನು ಜಯಿಸಲು ನಾವು ಶಕ್ತರಾಗಿದ್ದೇವೆ” ಎಂದು ಹೇಳಿದನು.

Read ಅರಣ್ಯ 13ಅರಣ್ಯ 13
Compare ಅರಣ್ಯ 13:8-30ಅರಣ್ಯ 13:8-30