Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಅರಣ್ಯ - ಅರಣ್ಯ 11

ಅರಣ್ಯ 11:6-17

Help us?
Click on verse(s) to share them!
6ಇಲ್ಲಿಯಾದರೋ ನಾವು ಬಲಹೀನರಾಗಿದ್ದೇವೆ. ಈ ಮನ್ನವೇ ಹೊರತು ನಮಗೆ ಇನ್ನೇನೂ ತಿನ್ನುವುದಕ್ಕೆ ಸಿಕ್ಕುವುದಿಲ್ಲ” ಎಂದು ನಿಷ್ಠುರವಾಗಿ ಮಾತನಾಡ ತೊಡಗಿದರು.
7ಆ ಮನ್ನವು ಕೊತ್ತುಂಬರಿ ಬೀಜದ ಹಾಗೆ ಇತ್ತು. ಅದು ಗುಗ್ಗುಲದಂತೆ ಕಾಣಿಸುತ್ತಿತ್ತು.
8ಜನರು ತಿರುಗಾಡುತ್ತಾ ಅದನ್ನು ಕೂಡಿಸಿಕೊಂಡು ಬೀಸುವ ಕಲ್ಲುಗಳಿಂದ ಬೀಸಿ, ಇಲ್ಲವೆ ಒರಳಿನಲ್ಲಿ ಕುಟ್ಟಿ ಪಾತ್ರೆಗಳಲ್ಲಿ ಬೇಯಿಸಿ ರೊಟ್ಟಿಗಳನ್ನು ಮಾಡಿಕೊಂಡರು. ಅದರ ರುಚಿ ಎಣ್ಣೆ ಬೆರಸಿ ಮಾಡಿದ ಭಕ್ಷ್ಯಗಳಂತಿತ್ತು.
9ರಾತ್ರಿ ಕಾಲದಲ್ಲಿ ಮಂಜು ಪಾಳೆಯದಲ್ಲಿ ಬೀಳುತ್ತಿದ್ದಾಗ ಅದರೊಂದಿಗೆ ಮನ್ನವೂ ಬೀಳುತ್ತಿತ್ತು.
10ಎಲ್ಲಾ ಕುಟುಂಬದವರೂ ತಮ್ಮ ತಮ್ಮ ಡೇರೆ ಬಾಗಿಲುಗಳಲ್ಲಿ ನಿಂತು ಕಣ್ಣೀರಿಟ್ಟು ಅಳುವ ಆ ಶಬ್ದವು ಮೋಶೆಗೆ ಕೇಳಿಸಿತು. ಆಗ ಯೆಹೋವನು ಬಹಳ ಕೋಪಗೊಂಡನು. ಅವರ ಗುಣುಗುಟ್ಟುವಿಕೆಯಿಂದ ಮೋಶೆಗೆ ಬೇಸರವಾಯಿತು.
11ಆಗ ಮೋಶೆ ಯೆಹೋವನಿಗೆ, “ಈ ಜನರನ್ನು ನಡೆಸಿಕೊಂಡು ಹೋಗುವ ಹೊಣೆಯನ್ನು ನನ್ನ ಮೇಲೆ ಹೊರಿಸಿ ನೀನು ಏಕೆ ನಿನ್ನ ದಾಸನಿಗೆ ತೊಂದರೆಯನ್ನು ತಂದಿದ್ದೀ? ನಿನ್ನ ದಯೆಗೆ ನಾನು ಯಾಕೆ ಅಪಾತ್ರನಾದೆ?
12ನಾನು ಇವರಿಗೆ ಹೆತ್ತ ತಾಯಿಯೇ? ಇವರನ್ನು ಮಗುವನ್ನು ಎತ್ತಿಕೊಂಡು ಹೋಗುವಂತೆ, ಮಡಿಲಲ್ಲಿ ಇಟ್ಟುಕೊಂಡು ಅವರ ಪೂರ್ವಿಕರಿಗೆ ಪ್ರಮಾಣಮಾಡಿದ ದೇಶಕ್ಕೆ ನಡೆಸಬೇಕು ಎಂದು ಹೇಳುತ್ತೀಯಲ್ಲಾ?
13ಇವರು ನನ್ನ ಬಳಿಗೆ ಅಳುತ್ತಾ ಬಂದು, ‘ಮಾಂಸವನ್ನು ನಮಗೆ ತಿನ್ನಲಿಕ್ಕೆ ಕೊಡು’ ಎಂದು ಕೇಳುತ್ತಾರಲ್ಲಾ, ಇಷ್ಟು ಜನಕ್ಕೆ ಬೇಕಾದ ಮಾಂಸವು ನನಗೆ ಎಲ್ಲಿಂದ ದೊರಕೀತು?
14ಇಷ್ಟು ಜನರ ಹೊಣೆಯನ್ನು ನಾನೊಬ್ಬನೇ ಹೊರುವುದು ಅಸಾಧ್ಯ; ಅದು ನನ್ನ ಶಕ್ತಿಗೆ ಮೀರಿದ ಕೆಲಸ.
15ನೀನು ಹೀಗೆ ಮಾಡುವುದಕ್ಕಿಂತ ನನ್ನನ್ನು ಈಗಲೇ ಕೊಂದುಹಾಕಿಬಿಟ್ಟರೆ ಉಪಕಾರವಾಗುತ್ತದೆ; ನನಗಾಗುತ್ತಿರುವ ದುರಾವಸ್ಥೆಯನ್ನು ನಾನು ಸಹಿಸಲಾರೆ” ಎಂದನು.
16ಆಗ ಯೆಹೋವನು ಮೋಶೆಗೆ ಹೇಳಿದ್ದೇನೇಂದರೆ, “ಇಸ್ರಾಯೇಲರಲ್ಲಿ ಹಿರಿಯರೆಂದೂ ಮತ್ತು ಅಧಿಪತಿಗಳೆಂದೂ ನೀನು ತಿಳಿದುಕೊಂಡಿರುವ ಎಪ್ಪತ್ತು ಮಂದಿಯನ್ನು ದೇವದರ್ಶನದ ಗುಡಾರದ ಬಾಗಿಲಿಗೆ ಕರೆದು ಅಲ್ಲಿ ನಿನ್ನೊಡನೆ ನಿಲ್ಲಿಸಿಕೋ.
17ನಾನು ಅಲ್ಲಿಗೆ ಇಳಿದು ಬಂದು ನಿನ್ನ ಸಂಗಡ ಮಾತನಾಡುವೆನು. ಅದಲ್ಲದೆ ನಾನು ನಿನಗೆ ಅನುಗ್ರಹಿಸಿರುವ ಆತ್ಮದಲ್ಲಿ ಸ್ವಲ್ಪವನ್ನು ಅವರಿಗೂ ಪಾಲುಕೊಡುವೆನು. ಆಗ ನೀನೊಬ್ಬನೇ ಈ ಜನರ ಹೊಣೆಯನ್ನು ವಹಿಸಬೇಕಾಗಿರುವುದಿಲ್ಲ; ನಿನ್ನ ಜೊತೆಯಲ್ಲಿ ಇವರೂ ಜವಾಬ್ದಾರಿ ವಹಿಸುವರು.”

Read ಅರಣ್ಯ 11ಅರಣ್ಯ 11
Compare ಅರಣ್ಯ 11:6-17ಅರಣ್ಯ 11:6-17