Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಅರಣ್ಯ - ಅರಣ್ಯ 11

ಅರಣ್ಯ 11:17-30

Help us?
Click on verse(s) to share them!
17ನಾನು ಅಲ್ಲಿಗೆ ಇಳಿದು ಬಂದು ನಿನ್ನ ಸಂಗಡ ಮಾತನಾಡುವೆನು. ಅದಲ್ಲದೆ ನಾನು ನಿನಗೆ ಅನುಗ್ರಹಿಸಿರುವ ಆತ್ಮದಲ್ಲಿ ಸ್ವಲ್ಪವನ್ನು ಅವರಿಗೂ ಪಾಲುಕೊಡುವೆನು. ಆಗ ನೀನೊಬ್ಬನೇ ಈ ಜನರ ಹೊಣೆಯನ್ನು ವಹಿಸಬೇಕಾಗಿರುವುದಿಲ್ಲ; ನಿನ್ನ ಜೊತೆಯಲ್ಲಿ ಇವರೂ ಜವಾಬ್ದಾರಿ ವಹಿಸುವರು.”
18ಇದಲ್ಲದೆ ಇಸ್ರಾಯೇಲರಿಗೆ ಹೀಗೆ ಹೇಳು, “ನಾಳೆಗೆ ನಿಮ್ಮನ್ನು ಶುದ್ಧಪಡಿಸಿಕೊಳ್ಳಿರಿ; ನಾಳೆ ನಿಮಗೆ ಮಾಂಸವು ದೊರೆಯುವುದು. ನೀವು ಯೆಹೋವನಿಗೆ ಕೇಳಿಸುವಂತೆ, ‘ನಮಗೆ ಮಾಂಸವನ್ನು ಕೊಡುವವರೇ ಇಲ್ಲ; ಐಗುಪ್ತ ದೇಶದಲ್ಲಿ ಎಷ್ಟೋ ಸುಖವಾಗಿದ್ದೇವಲ್ಲಾ’ ಎಂದು ಅಳುತ್ತಾ ಹೇಳಿದ್ದರಿಂದ ಯೆಹೋವನೇ ನಿಮಗೆ ಮಾಂಸವನ್ನು ತಿನ್ನಲಿಕ್ಕೆ ಕೊಡುವನು.
19ನೀವು ತಿನ್ನುವುದು ಒಂದು ದಿನವಲ್ಲ, ಎರಡು ದಿನವಲ್ಲ, ಐದು ದಿನವಲ್ಲ, ಹತ್ತು ದಿನವಲ್ಲ, ಇಪ್ಪತ್ತು ದಿನವೂ ಅಲ್ಲ.
20ಆದರೆ ನೀವು ಪೂರ್ತಿಯಾಗಿ ಒಂದು ತಿಂಗಳು ಮಾಂಸವನ್ನು ಊಟಮಾಡುವಿರಿ. ಅದು ವಾಕರಿಕೆಯಾಗಿ ನಿಮ್ಮ ಮೂಗಿನಲ್ಲಿ ಹೊರಟು ನಿಮಗೆ ಅಸಹ್ಯವಾಗುವ ತನಕ ಅದನ್ನು ಊಟಮಾಡುವಿರಿ. ನಿಮ್ಮ ಮಧ್ಯದಲ್ಲಿರುವ ಯೆಹೋವನನ್ನು ನೀವು ಅಲಕ್ಷ್ಯಮಾಡಿ ಆತನ ಎದುರಿನಲ್ಲಿ ಅತ್ತು, ‘ನಾವು ಏಕೆ ಐಗುಪ್ತ ದೇಶವನ್ನು ಬಿಟ್ಟುಬಂದೆವು ಎಂದು ಹೇಳುತ್ತೀರಲ್ಲಾ’ ಎಂದು ಹೇಳು” ಎಂದನು.
21ಅದಕ್ಕೆ ಮೋಶೆ, “ನನ್ನ ಸಂಗಡ ಇರುವ ಜನರು ಆರು ಲಕ್ಷ ಕಾಲಾಳುಗಳು, ಆದರೂ ನೀನು, ‘ಇವರಿಗೆ ಒಂದು ತಿಂಗಳು ಪೂರ್ತಿಯಾಗಿ ಮಾಂಸವನ್ನು ತಿನ್ನಲು ಕೊಡುತ್ತೇನೆ’ ಎಂದು ಹೇಳಿದ್ದೀ.
22ಅವರಿಗೆ ಬೇಕಾದಷ್ಟು ಸಿಕ್ಕುವಂತೆ ನಾವು ಹಿಂಡಿನಿಂದ ಆಡು, ಕುರಿ, ದನಗಳನ್ನೂ ಕೊಯ್ಯಬೇಕನ್ನುತ್ತಿಯೋ? ಇಲ್ಲವೆ ಸಮುದ್ರದಲ್ಲಿರುವ ಎಲ್ಲಾ ಮೀನುಗಳನ್ನೂ ಹಿಡಿದುಕೊಳ್ಳಬೇಕೋ?” ಎಂದು ಕೇಳಿದನು.
23ಯೆಹೋವನು ಮೋಶೆಗೆ, “ನನ್ನ ಕೈ ಮೋಟುಗೈಯೋ? ನನ್ನ ಮಾತು ನೆರವೇರುತ್ತದೋ, ಇಲ್ಲವೋ ಈಗ ನೀನು ನೋಡುವಿ” ಎಂದು ಹೇಳಿದನು.
24ಮೋಶೆ ಹೊರಟುಹೋಗಿ ಯೆಹೋವನ ಮಾತುಗಳನ್ನು ಜನರಿಗೆ ತಿಳಿಸಿದನು ಮತ್ತು ಅವನು ಜನರ ಹಿರಿಯರಲ್ಲಿ ಎಪ್ಪತ್ತು ಮಂದಿಯನ್ನು ಕೂಡಿಸಿ ದೇವದರ್ಶನದ ಗುಡಾರದ ಸುತ್ತಲೂ ನಿಲ್ಲಿಸಿದನು.
25ಯೆಹೋವನು ಆ ಮೇಘದಲ್ಲಿ ಇಳಿದು ಬಂದು ಅವನ ಸಂಗಡ ಮಾತನಾಡಿದನು. ಮೋಶೆಯ ಮೇಲಿರುವ ಆತ್ಮದಲ್ಲಿ ಸ್ವಲ್ಪವನ್ನು ಆ ಎಪ್ಪತ್ತು ಮಂದಿ ಹಿರಿಯರಿಗೂ ಪಾಲುಕೊಟ್ಟನು. ಆ ಆತ್ಮವು ಅವರಿಗೆ ದೊರಕಿದಾಗ ಅವರು ಪರವಶರಾಗಿ ಆ ಸಂದರ್ಭದಲ್ಲಿ ಮಾತ್ರ ಪ್ರವಾದಿಸಿದರು. ಆ ಮೇಲೆ ಅವರು ಎಂದಿಗೂ ಪ್ರವಾದಿಸಲೇ ಇಲ್ಲ.
26ಆದರೆ ಎಲ್ದಾದ್, ಮೇದಾದ್ ಎಂಬ ಇಬ್ಬರು ಪಾಳೆಯದೊಳಗೆ ನಿಂತಿದ್ದರು. ಅವರ ಹೆಸರುಗಳು ಬರೆಯಲ್ಪಟ್ಟಿದ್ದಾಗ್ಯೂ ಅವರು ದೇವದರ್ಶನದ ಗುಡಾರಕ್ಕೆ ಹೋಗಲಿಲ್ಲ. ಆ ಆತ್ಮವು ಅವರ ಮೇಲೆ ಇಳಿದುಬಂದುದರಿಂದ ಅವರು ಪಾಳೆಯದೊಳಗೆ ಪರವಶರಾಗಿ ಪ್ರವಾದಿಸಿದರು.
27ಪಾಳೆಯದಿಂದ ಒಬ್ಬ ಹುಡುಗನು ಮೋಶೆಯ ಬಳಿಗೆ ಓಡಿ ಬಂದು, “ಎಲ್ದಾದ್ ಮತ್ತು ಮೇದಾದರು ಪಾಳೆಯದಲ್ಲಿ ಪರವಶರಾಗಿ ಪ್ರವಾದಿಸುತ್ತಿದ್ದಾರೆ” ಎಂದು ತಿಳಿಸಿದನು.
28ಮೋಶೆಯ ಶಿಷ್ಯನಾದ ನೂನನ ಮಗನಾದ ಯೆಹೋಶುವನು ಮೋಶೆಗೆ, “ಗುರುವೇ, ಅವರು ಪ್ರವಾದಿಸುವುದನ್ನು ನಿಲ್ಲಿಸಬೇಕು” ಎಂದು ಹೇಳಿದನು.
29ಅದಕ್ಕೆ ಮೋಶೆ, “ನನ್ನ ನಿಮಿತ್ತವಾಗಿ ನೀನು ಹೊಟ್ಟೆಕಿಚ್ಚುಪಡುತ್ತೀಯೋ? ಯೆಹೋವನ ಅನುಗ್ರಹದಿಂದ ಆತನ ಜನರೆಲ್ಲರೂ ಆತ್ಮವನ್ನು ಹೊಂದಿದವರೂ, ಪ್ರವಾದಿಸುವವರೂ ಆದರೆ ಎಷ್ಟೋ ಒಳ್ಳೆಯದು” ಎಂದನು.
30ತರುವಾಯ ಮೋಶೆಯೂ ಮತ್ತು ಇಸ್ರಾಯೇಲರ ಹಿರಿಯರೂ ಪಾಳೆಯದೊಳಗೆ ಬಂದು ಸೇರಿದರು.

Read ಅರಣ್ಯ 11ಅರಣ್ಯ 11
Compare ಅರಣ್ಯ 11:17-30ಅರಣ್ಯ 11:17-30